ಲಾರಿ ಮತ್ತು ಟೆಂಪೋ ಚಾಲಕ, ಮಾಲಕರ ಅನಿರ್ದಿಷ್ಟಾವಧಿ ಮುಷ್ಕರ

ಕಾರ್ಕಳ : ಕಟ್ಟದ ಸಾಮಗ್ರಿಗಳ ಸಾಗಾಟದ ಸಂಚಾರವನ್ನು ಜಿಲ್ಲಾಡಳಿತ ನಿಲ್ಲಿಸಿದ್ದು, ಇದನ್ನು ವಿರೋಧಿಸಿ ಕಾರ್ಕಳದಲ್ಲಿ ಲಾರಿ ಮಾಲಕರು, ಚಾಲಕರು, ಹೊಯ್ಗೆ, ಕಲ್ಲು, ಗಣಿಗಾರಿಕೆ ಮಾಲಕರು ಮತ್ತು ಕಾರ್ಮಿಕರ ಹೋರಾಟ ಸಮಿತಿ ಸೆ. 28 ರಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕ ವಿ. ಸುನಿಲ್‌ ಕುಮಾರ್‌ ಮಾತನಾಡಿ, ಕಳೆದ 15 ದಿವಸದಿಂದ ರಾಜ್ಯದಲ್ಲಿ ಎಲ್ಲೂ ಇಲ್ಲದ ಸಮಸ್ಯೆ ಉಡುಪಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಜಿಲ್ಲಾಡಳಿತ ಹೊಸ ವ್ಯವಸ್ಥೆ ಸೃಷ್ಟಿ ಮಾಡಿ, ಪೊಲೀಸ್ ಇಲಾಖೆ ಅನಗತ್ಯವಾಗಿ ಲಾರಿಗಳನ್ನು ತಡೆದು ತೊಂದರೆ ಮಾಡ್ತಾ ಇದ್ದಾರೆ. ಪರಿಣಾಮವಾಗಿ ಲಾರಿ ಕಾರ್ಮಿಕರು ಸೇರಿದಂತೆ, ಸಂಬಂಧಿತ ದುಡಿಯುವ ವರ್ಗ ಮತ್ತವರ ಕುಟುಂಬ ಬೀದಿ ಪಾಲಾಗುವ ಪರಿಸ್ಥಿತಿ ಎದುರಾಗಿದೆ ಎಂದರು.

ಪೊಲೀಸರ ಕೆಲಸ ಲಾರಿಯನ್ನು ಹಿಡಿಯೋದು ಅಲ್ಲ
ಕಳೆದ ಐದು ವರ್ಷದ ಅವಧಿಯಲ್ಲಿ ಜಿಲ್ಲೆಯಾದ್ಯಂತ ಕೆಂಪು ಕಲ್ಲು ಸಾಗಾಟ, ಜಲ್ಲಿ, ಮರಳು, ಮಣ್ಣು ಸಾಗಾಟ ಮಾಡುತ್ತಿರುವಾಗ ಪೊಲೀಸ್ ಇಲಾಖೆ ಟಿಪ್ಪರ್, ಲಾರಿಗಳನ್ನು ಹಿಡಿತಾ ಇರಲಿಲ್ಲ. ಆದರೆ ಈಗ ಏಕಾಏಕಿಯಾಗಿ ಈ ರೀತಿಯ ನಿಯಮ ಏಕೆ ಎಂದು ಪ್ರಶ್ನಿಸಿದ ಅವರು ಪೊಲೀಸ್ ಇಲಾಖೆ ಇರುವುದು ಕಳ್ಳರನ್ನು ಹಿಡಿಯಲು ಹೊರತು ಲಾರಿಗಳನ್ನು ಹಿಡಿಯಲು ಅಲ್ಲ ಎಂದರು. ಯಾರೋ ಜಲ್ಲಿ, ಮಣ್ಣು ತೆಗೆದುಕೊಂಡು ಹೋಗ್ತಾ ಇದ್ದಾರೆ ಎಂದರೆ ಗಣಿ ಇಲಾಖೆ ಈ ಕುರಿತು ಕೆಲಸ ಮಾಡಬೇಕು. ಆದರೆ, ಗಣಿ ಇಲಾಖೆ ಮಾಡದ ಕೆಲಸ ಪೊಲೀಸ್ ಇಲಾಖೆ ಮಾಡುತ್ತಿದೆ ಎಂದಾದರೆ ಪೊಲೀಸ್ ಇಲಾಖೆಗೆ ಇಷ್ಟೊಂದು ಆಸಕ್ತಿ ಏಕೆ ಎಂದು ಅನುಮಾನ ವ್ಯಕ್ತಪಡಿಸಿದರು.

ನಿಮ್ಮ ಪರವಾಗಿದ್ದೇನೆ
ನಾನು ನಿಮ್ಮ ಪರವಾಗಿದ್ದೇನೆ. ನಿಮ್ಮ ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ನೀಡುತ್ತೇನೆ. ಎಷ್ಟು ದಿನ ಹೋರಾಟ ಮಾಡುತ್ತಿರೋ ಅಲ್ಲಿಯವರೆಗೂ ನಾನು ಬೆಂಬಲಿಸುತ್ತೇನೆ. ಕೇವಲ ಹೋರಾಟಕ್ಕೆ ಬೆಂಬಲ ಮಾತ್ರವಲ್ಲ ಈ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತಕ್ಕೆ ಯಾವ ರೀತಿಯ ಒತ್ತಡ ಹಾಕಬೇಕೋ ಅದನ್ನು ಹಾಕಲು ಬದ್ಧನಿದ್ದೇನೆ. ಸಮಸ್ಯೆ ಕುರಿತು ಜಿಲ್ಲೆಯ ಐದೂ ಶಾಸಕರು ಚರ್ಚೆ ಮಾಡಲು ನಿರ್ಧರಿಸಿದ್ದೇವೆ ಎಂದರು.

ಜಿಲ್ಲಾಡಳಿತವೇ ನೇರ ಹೊಣೆ
ಯಾವುದೇ ಹಂತದಲ್ಲಿ ಇಲ್ಲದಿರುವಂತಹ ಸಮಸ್ಯೆ ಜಿಲ್ಲೆಯಲ್ಲಿ ಕಳೆದ ಕಳೆದ ಹದಿನೈದು ದಿನಗಳಿಂದ ನಿರ್ಮಾಣವಾಗಿದೆ ಎಂದರೆ ಇದಕ್ಕೆ ಜಿಲ್ಲಾಡಳಿತ ಮತ್ತು ಜಿಲ್ಲಾಧಿಕಾರಿಯವರೇ ನೇರ ಹೊಣೆ. ಜಿಲ್ಲಾ ಉಸ್ತವಾರಿ ಸಚಿವರು ಇದಕ್ಕೆ ಪರಿಹಾರವನ್ನು ನೀಡಬೇಕು. ರಾಜ್ಯದ ಬೇರೆ ಯಾವುದೇ ಜಿಲ್ಲೆಯಲ್ಲಿ ಈ ಸಮಸ್ಯೆ ಇಲ್ಲ. ಹಾಗಾದರೆ ರಾಜ್ಯದಲ್ಲಿ ಎರಡು ಕಾನೂನು ಇದೆಯಾ ಎಂದು ಪ್ರಶ್ನಿಸಿದರು.

ಕಟ್ಟಡ ಕಾರ್ಮಿಕರ ಕೆಲಸ ನಿಂತು ಹೋದರೆ ಇಡೀ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಚಟುವಟಿಕೆಗಳು ನಡೆಯಲು ಸಾಧ್ಯವಿಲ್ಲ. ಪರಿಣಾಮವಾಗಿ ವ್ಯಾಪಾರ ಚಟುವಟಿಕೆಗಳು ಕುಂಠಿತಗೊಳ್ಳುತ್ತದೆ. ಹಣದ ವಹಿವಾಟು ನಡೆದಾಗ ಮಾತ್ರ ಆರ್ಥಿಕ ಅಭಿವೃದ್ಧಿಯಾಗುತ್ತದೆ. ಆದ್ದರಿಂದ ಈ ಪ್ರತಿಭಟನೆ ಜಿಲ್ಲೆಯ ಸಾರ್ವಜನಿಕರು ಸಹ ಬೆಂಬಲ ನೀಡಬೇಕು ಎಂದು ವಿನಂತಿಸಿದರು.

ಪತಿಭಟನೆಯಲ್ಲಿ ತಾಲೂಕಿನ ಲಾರಿ ಮಾಲಕರು, ಚಾಲಕರು, ಹೊಯ್ಗೆ, ಕಲ್ಲು, ಗಣಿಗಾರಿಕೆ ಮಾಲಕರು ಮತ್ತು ಕಾರ್ಮಿಕರು ಭಾಗಿಯಾಗಿದ್ದರು. ತಾಲೂಕು ಕಚೇರಿ ಮುಂಭಾಗ ಮತ್ತು ನಗರದಲ್ಲಿ ರಸ್ತೆ ಬದಿಯಲ್ಲಿ ಲಾರಿಗಳನ್ನು ನಿಲ್ಲಿಸಿ ಮುಷ್ಕರ ನಡೆಸುತ್ತಿದ್ದಾರೆ.







































































error: Content is protected !!
Scroll to Top