ಕಾನೂನು ಕಣಜ – ಕ್ರಿಮಿನಲ್ ಪ್ರಕರಣದಲ್ಲಿ ವಿವಿಧ ಅಪರಾಧಗಳ ಕುರಿತಂತೆ ಖಾಸಗಿ ಫಿರ್ಯಾದಿ

ಯಾವುದೇ ಒಂದು ಕ್ರಿಮಿನಲ್ ಕೃತ್ಯದ ಬಗ್ಗೆ ಒಬ್ಬ ವ್ಯಕ್ತಿ ತನ್ನ ವೈಯುಕ್ತಿಕ ನೆಲೆಯಲ್ಲಿ ಅಥವಾ ಸಾರ್ವಜನಿಕರ ಪರವಾಗಿ ಪೋಲೀಸರಿಗೆ ಮೌಖಿಕವಾಗಿ ಅಥವಾ ಲಿಖಿತವಾಗಿ ಮಾಹಿತಿ ಇಲ್ಲವೇ ದೂರನ್ನು ಸಲ್ಲಿಸಿದಾಗ ಅದನ್ನು ಪಡೆದ ಕರ್ತವ್ಯನಿರತ ಪೋಲೀಸ್ ಅಧಿಕಾರಿಯು ಪ್ರಕರಣವನ್ನು ದಾಖಲಿಸಿಕೊಂಡು ಪ್ರಥಮ ವರ್ತಮಾನ ವರದಿಯನ್ನು ಸಂಬಂಧಪಟ್ಟ ನ್ಯಾಯಾಲಯಕ್ಕೆ ಹಾಗೂ ಪೋಲೀಸ್ ವರಿಷ್ಟಾಧಿಕಾರಿಯವರಿಗೆ ಸಲ್ಲಿಸಿ ಆ ನಂತರ ಪ್ರಕರಣಕ್ಕೆ ಸಂಬಂಧಪಟ್ಟ ಅಪರಾಧಿಕ ಕೃತ್ಯದ ಬಗ್ಗೆ ಹಾಗೂ ಕೃತ್ಯಕ್ಕೆ ಕಾರಣವಾಗಿರುವ ಆರೋಪಿಗಳ ಬಗ್ಗೆ ಸೂಕ್ತ ತನಿಖೆಯನ್ನು ಮಾಡಿ ಆ ನಂತರ ಅಂತಿಮ ವರದಿಯನ್ನು ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಸಂಬಂಧಪಟ್ಟ ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿರುವುದು ಆತನ ಆದ್ಯ ಕರ್ತವ್ಯವಾಗಿರುತ್ತದೆ.

ಕೆಲವು ಸಂದರ್ಭಗಳಲ್ಲಿ ಸಂಬಂಧಪಟ್ಟ ಪೋಲೀಸ್ ಅಧಿಕಾರಿಯ ಮೇಲಿನ ಒತ್ತಡ, ಕರ್ತವ್ಯಲೋಪತನ ಅಥವಾ ನಿರ್ಲಕ್ಷತನ ಇತ್ಯಾದಿ ಕಾರಣಗಳಿಂದ ತಾನು ಸ್ವೀಕರಿಸಿದ ಕ್ರಿಮಿನಲ್ ಕೃತ್ಯದ ಕುರಿತ ಮಾಹಿತಿ ಅಥವಾ ದೂರನ್ನು ಕಾನೂನಿನ ನಿಯಮಾನುಸಾರವಾಗಿ ದಾಖಲಿಸಿಕೊಳ್ಳದೇ ಅಥವಾ ಸರಿಯಾಗಿ ತನಿಖೆ ಮಾಡದೆ ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯಾದ ವ್ಯಕ್ತಿಗಳು ಕಾನೂನಿನ ಚೌಕಟ್ಟಿನಿಂದ ತಪ್ಪಿಸಿಕೊಳ್ಳಲು ಸಹಾಯಮಾಡುವ ಉದ್ದೇಶದಿಂದ ಸುಳ್ಳು ವರದಿಯನ್ನು ನ್ಯಾಯಾಲಯಕ್ಕೆ ಇಲ್ಲವೇ ಇಲಾಖೆಯ ಮೇಲಾಧಿಕಾರಿಗಳಿಗೆ ಸಲ್ಲಿಸಿದ ಸಂದರ್ಭದಲ್ಲಿ ಅನ್ಯಾಯಕ್ಕೊಳಗಾದ ಯಾವುದೇ ವ್ಯಕ್ತಿ ಕ್ರಿಮಿನಲ್ ಅಪರಾಧದ ಮತ್ತು ಅದರಲ್ಲಿ ಭಾಗಿಯಾದವರ ವ್ಯಕ್ತಿಗಳ ವಿವರದೊಂದಿಗೆ ಖಾಸಗಿ ಫಿರ್ಯಾಧಿಯನ್ನು ಅಂದರೆ ದೂರನ್ನು ಕ್ರಿಮಿನಲ್ ಪ್ರೊಸಿಜರ್ ಕೋಡಿನ ಕಲಂ 200ನೇ ಪ್ರಕಾರ ನೇರವಾಗಿ ಅಥವಾ ವಕೀಲರ ಮೂಲಕ ಸಂಬಂಧಪಟ್ಟ ವ್ಯಾಪ್ತಿಯ ಮ್ಯಾಜಿಸ್ಟ್ರೇಟರಿಗೆ ಸಲ್ಲಿಸಬಹುದಾಗಿದೆ. ಈ ರೀತಿಯಾಗಿ ಸಾಮಾನ್ಯವಾಗಿ ಯಾವುದೇ ಒಂದು ಖಾಸಗಿ ಪಿರ್ಯಾದನ್ನು ನ್ಯಾಯಲಯಕ್ಕೆ ಸಲ್ಲಿಸಿದಾಗ, ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ರವರು ಪ್ರಕರಣಕ್ಕೆ ಸಂಬಂಧಪಟ್ಟ ದೂರುದಾರರನ್ನು ಮತ್ತು ಅವರ ಸಾಕ್ಷಿದಾರರನ್ನು ವಿಚಾರಿಸಿ ಹೇಳಿಕೆ ಪಡೆದುಕೊಂಡು ನಂತರ ಶಿಕ್ಷಾರ್ಹ ಅಪರಾಧದ ಕೃತ್ಯ ನಡೆದಿರುವ ಬಗ್ಗೆ ಮನವರಿಕೆಯಾದಲ್ಲಿ ನ್ಯಾಯಾಲಯದಿಂದ ಸಂಬಂಧಪಟ್ಟ ಆರೋಪಿಗಳಿಗೆ ಸಮನ್ಸ್ ಕಳಿಸಿ ಅವರ ಸಮಕ್ಷಮದಲ್ಲಿ ಪ್ರಕರಣದ ತನಿಖೆಯನ್ನು ಮುಂದುವರಿಸಬಹುದಾಗಿದೆ. ಸಂಜ್ಞೇಯ ಅಪರಾಧದ ಕುರಿತ ಸಂಬಂಧಪಟ್ಟ ಪ್ರಕರಣದಲ್ಲಿನ ದೂರನ್ನು ಮುಂದಿನ ತನಿಖೆಗಾಗಿ ಕ್ರಿಮಿನಲ್ ಪ್ರೊಸಿಜರ್ ಕೋಡಿನ ಕಲಂ 156(3)ರ ಪ್ರಕಾರ ಪ್ರಕರಣವನ್ನು ತಕ್ಷೀರು ಅಂದರೆ ಅಪರಾದ ನಡೆದ ವ್ಯಾಪ್ತಿಯ ಪೋಲಿಸ್ ಅಧಿಕಾರಿಗೆ ರವಾನಿಸಿ ತನಿಖಾವರದಿಯನ್ನು ನ್ಯಾಯಾಲಯಕ್ಕೆ ತರಿಸಿಕೊಳ್ಳಬಹುದಾಗಿದೆ.

ಈ ರೀತಿಯಾಗಿ ಪ್ರಕರಣವನ್ನು ತನಿಖೆಗೆ ಒಳಪಡಿಸಿದ ಸಂದರ್ಭದಲ್ಲಿ ಪೋಲೀಸ್ ತನಿಖಾಧಿಕಾರಿಯು ಪ್ರಥಮ ವರ್ತಮಾನ ವರದಿಯನ್ನು ನಮೂದಿಸಿ, ಪ್ರಕರಣದ ತನಿಖೆ ನಡೆಸಿ, ಪ್ರಕರಣಕ್ಕೆ ಸಂಬಂಧಪಟ್ಟ ದೂರುದಾರರ ಮತ್ತು ಅವರ ಸಾಕ್ಷಿದಾರರ ಹೇಳಿಕೆಯನ್ನು ಪಡೆದು ಅಂತಿಮ ವರದಿಯನ್ನು ನಿಗದಿತ ವಾಯ್ದೆಯೊಳಗಾಗಿ ನ್ಯಾಯಾಲಯಕ್ಕೆ ಸಲ್ಲಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಸಹ ಪೋಲೀಸರು ದೂರುದಾರರ ಪ್ರಕರಣವನ್ನು ಸರಿಯಾಗಿ ಮತ್ತು ಕಾನೂನು ಬದ್ಧವಾಗಿ ತನಿಖೆ ಮಾಡಲು ತಪ್ಪಿದಲ್ಲಿ ಮತ್ತು ಯಾವುದೇ ಸುಳ್ಳು ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದಲ್ಲಿ ಅಂತಹ ಅಪೂರ್ಣ ವರದಿಯ ವಿರುದ್ಧ ದೂರುದಾರರು ಆಕ್ಷೇಪವನ್ನು ನ್ಯಾಯಾಲಯಕ್ಕೆ ಸಲ್ಲಿಸಿ ನ್ಯಾಯಾಲಯದ ಅನುಮತಿಯೊಂದಿಗೆ ತನ್ನ ಮತ್ತು ಸಾಕ್ಷಿದಾರರ ಹೇಳಿಕೆಯನ್ನು ಮತ್ತು ಸಾಕ್ಷ್ಯಾದಾರಗಳನ್ನು ನೇರವಾಗಿ ನ್ಯಾಯಾಲಯಕ್ಕೆ ಸಲ್ಲಿಸಿ ಅಪರಾಧಿಕ ಕೃತ್ಯದ ಸತ್ಯಾ ಸತ್ಯತೆಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಬಹುದಾಗಿದೆ. ಸಂಬಂಧಪಟ್ಟ ಅಪರಾಧಿಗಳಿಗೆ ಸೂಕ್ತ ಶಿಕ್ಷೆಯನ್ನು ನ್ಯಾಯಾಲಯದ ಮುಖಾಂತರ ಕೊಡಿಸಿ ನ್ಯಾಯವನ್ನು ಮತ್ತು ಸೂಕ್ತ ನಿವೃತ್ತಿಯನ್ನು ನ್ಯಾಯಾಲಯದಿಂದ ಪಡೆಯಬಹುದಾಗಿದೆ. ಒಂದೇ ಅಪರಾಧಕ್ಕೆ ಸಂಬಂಧಿಸಿದಂತೆ ಎರಡು ಬೇರೆ ಬೇರೆ ಫಿರ್ಯಾದಿಗಳನ್ನು ಸಲ್ಲಿಸಿದ ಸಂದರ್ಭದಲ್ಲಿ ನ್ಯಾಯಾಲಯವು ಅವುಗಳನ್ನು ಒಟ್ಟುಗೂಡಿಸಿ ಒಂದೇ ವಿಚಾರಣೆ ನಡೆಸಬೇಕಾಗುತ್ತದೆ.







































































error: Content is protected !!
Scroll to Top