ರಾಜಪಥ-ಕಿರಣ್ ಬೇಡಿ ಎಂಬ ಹೊಂಗಿರಣ

ವರ್ಷ 74 ಆದರೂ ಇಂದಿಗೂ ಅವರು ಯೂತ್ ಐಕಾನ್

ಕಿರಣ್ ಬೇಡಿ, ಐಪಿಎಸ್…ಈ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ? ಭಾರತದ ಮೊದಲ ಮಹಿಳಾ ಐಪಿಎಸ್ ಆಗಿ ಅವರು ವಿವಿಧ ಪೊಲೀಸ್ ಅಧಿಕಾರಿ ಹುದ್ದೆಗಳನ್ನು 35 ವರ್ಷಗಳ ಕಾಲ ಯಶಸ್ವಿಯಾಗಿ ನಿಭಾಯಿಸಿದ ರೀತಿಗೆ ಇಡೀ ಭಾರತ ಎದ್ದು ನಿಂತು ಸೆಲ್ಯೂಟ್ ಹೊಡೆದಿತ್ತು. ಯಾವುದೇ ಹುದ್ದೆ ಕೊಟ್ಟರೂ ಅದನ್ನು ಶೇ.200 ಬದ್ಧತೆಯ ಜತೆಗೆ ಅವರು ಕೆಲಸ ಮಾಡಿ ಎಲ್ಲ ಕಡೆಯಲ್ಲಿಯೂ ಗೆದ್ದಿರುವುದು ನಮಗೆ ಗೊತ್ತಿದೆ.

ಭಾರತದ ವಿವಿಧ ಭಾಷೆಗಳಲ್ಲಿ ಅವರ ಬದುಕಿನ ಸ್ಫೂರ್ತಿ ಪಡೆದು ಬಂದಿರುವ ಪೊಲೀಸ್ ಸಿನೆಮಾಗಳು ಬೇರೆ ಯಾರ ಹೆಸರಲ್ಲಿ ಕೂಡ ಬಂದಿರುವ ಉದಾಹರಣೆ ಇಲ್ಲ. ಆ ಮಟ್ಟಿಗೆ ಅವರು ‘ಯೂತ್ ಐಕಾನ್’ ಹೌದು. ನಾನಿಂದು ಅವರ ಬೇರೆ ಯಾವ ಸಾಧನೆಗಳ ಬಗ್ಗೆ ಕೂಡ ಬರೆಯುವುದಿಲ್ಲ. ಅವರ ರಾಜಕೀಯ ಹೆಜ್ಜೆಗಳ ಬಗ್ಗೆ ಕೂಡ ಬರೆಯುವುದಿಲ್ಲ.
ಆದರೆ ಅವರು ಏಷ್ಯಾದ ಅತಿ ದೊಡ್ಡ ಸೆರೆಮನೆ ಆದ ತಿಹಾರ್ ಜೈಲಿನ ಒಳಗೆ ಮಾಡಿದ್ದ ಕ್ರಾಂತಿಕಾರಕವಾದ ಬದಲಾವಣೆಗಳನ್ನು ಮಾತ್ರ ಇಲ್ಲಿ ಉಲ್ಲೇಖ ಮಾಡುತ್ತಿದ್ದೇನೆ.

ಆ ಜೈಲು ಹೇಗಿತ್ತು ಅಂದರೆ…

180 ಎಕರೆಯಷ್ಟು ವಿಸ್ತೀರ್ಣದ ಆ ಸೆರೆಮನೆಯಲ್ಲಿ 2 ಸಾವಿರದಷ್ಟು ಖೈದಿಗಳಿಗೆ ಮಾತ್ರ ಜಾಗ ಇತ್ತು. ಆದರೆ 1992-93ರ ಹೊತ್ತಿಗೆ ಅಲ್ಲಿ 10 ಸಾವಿರದಷ್ಟು ಖೈದಿಗಳನ್ನು ತಂದು ವಸ್ತುಶಃ ತುರುಕಲಾಗಿತ್ತು. ಅದರಲ್ಲಿ 500 ಹೆಂಗಸರು ಕೂಡ ಇದ್ದರು. ಆ ಹೆಂಗಸರ ಜತೆಗೆ ಏನೂ ಅಪರಾಧ ಮಾಡದ ಅವರ ಮುಗ್ಧ ಮಕ್ಕಳು ಸೆಲ್ ಒಳಗೆ ಇದ್ದರು.

‘ONCE A CRIMINAL WAS ALWAYS A CRIMINAL’ ಅನ್ನುವ ಮಾತು ತಿಹಾರ್ ಜೈಲಿಗೆ ತುಂಬಾನೇ ಹೊಂದಾಣಿಕೆ ಆಗುತ್ತಿತ್ತು. ಒಮ್ಮೆ ಆ ಜೈಲಿನ ಒಳಗೆ ಬಂದರೆ ಮತ್ತೆ ಹೊರಗೆ ಹೋಗುವ ಎಲ್ಲ ಅವಕಾಶಗಳು ಮುಚ್ಚಿ ಹೋಗುತ್ತಿದ್ದವು. ವರ್ಷಾನುಗಟ್ಟಲೆ ವಿಚಾರಣೆಯೇ ಇರುತ್ತಿರಲಿಲ್ಲ.

ಕತ್ತಲೆಯ, ದುರ್ವಾಸನೆ ಬೀರುವ ಕೋಣೆಗಳು, ಅನಾರೋಗ್ಯಕರ ವಾತಾವರಣ, ಕ್ರೂರವಾಗಿ ಹೊಡೆಯುವ ಜೈಲಿನ ಅಧಿಕಾರಿಗಳು, ಲಂಚ ಸ್ವೀಕರಿಸುವ ಪೊಲೀಸರು, ಸೆಲ್ ಒಳಗೆ ಕುಡಿತ, ಗಾಂಜಾ ಸೇವನೆ, ಜೂಜು, ಅನೈತಿಕ ಚಟುವಟಿಕೆಗಳು…ಹೀಗೆ ಎಲ್ಲ ರೀತಿಯಿಂದಲೂ ತಿಹಾರ್ ಜೈಲು ಕುಖ್ಯಾತಿ ಪಡೆದಿತ್ತು.

ಅಂತಹ ಜೈಲಿಗೆ ಕಿರಣ್ ಬೇಡಿ ಐಜಿಪಿ ಆಗಿ ಬಂದಿದ್ದರು

ಅಂತಹ ಜೈಲಿಗೆ 1993ರಲ್ಲಿ ಕಾರಾಗೃಹದ ಐಜಿಪಿ ಆಗಿ ಕಿರಣ್ ಬೇಡಿಯ ಆಗಮನ ಆಗಿತ್ತು. ಆಕೆಯ ಮುಂದೆ ಬೆಟ್ಟದಷ್ಟು ಸವಾಲುಗಳು ಇದ್ದವು. ಅವುಗಳನ್ನು ಗೆಲ್ಲಲು ಆಕೆ ನಿರ್ಧಾರ ಮಾಡಿ ಧೃಢ ಹೆಜ್ಜೆ ಇಟ್ಟಾಗಿತ್ತು. ಬೆಟ್ಟದಷ್ಟು ಆತ್ಮವಿಶ್ವಾಸವೂ ಜತೆಗಿತ್ತು.

ಭ್ರಷ್ಟ ಅಧಿಕಾರಿಗಳನ್ನು ರಿಪೇರಿ

ಮೊದಲು ಆಕೆ ರಿಪೇರಿ ಮಾಡಿದ್ದು ತಿಹಾರ್ ಜೈಲಿನ ಅತಿ ಭ್ರಷ್ಟರಾದ ಅಧಿಕಾರಿಗಳನ್ನು. ಅವರಲ್ಲಿ ಹಲವರ ತಲೆದಂಡ ಆಯಿತು. ಇನ್ನೂ ಹಲವರ ವರ್ಗಾವಣೆ ನಡೆಯಿತು. ಇನ್ನು ಹಲವರಿಗೆ ಎಚ್ಚರಿಕೆ ಕೊಡಲಾಯಿತು. ಜೈಲು ನಿವಾಸಿಗಳನ್ನು ಕ್ರೂರವಾಗಿ ಹೊಡೆಯುವುದು, ಕೆಟ್ಟದಾಗಿ ನಿಂದಿಸುವುದು, ಹಿಂಸಾತ್ಮಕವಾಗಿ ದುಡಿಸಿಕೊಳ್ಳುವುದು ನಿಂತು ಹೋಯಿತು. ಜೈಲು ಒಳಗೆ ಸಲೀಸಾಗಿ ಬರುತ್ತಿದ್ದ ಮಾದಕ ವಸ್ತುಗಳನ್ನು ಪೂರ್ತಿಯಾಗಿ ತಡೆಯಲಾಯಿತು. ಲಂಚ ಸ್ವೀಕಾರ ಮಾಡುತ್ತಿದ್ದ ಪೊಲೀಸರು ಗೇಟ್‌ಪಾಸ್ ಪಡೆದರು. ಕಿರಣ್ ಬೇಡಿ ಅಲ್ಲಿ ದುರ್ಗೆಯ ಅವತಾರವನ್ನು ತಾಳಿದ್ದರು.

ಮಾನವೀಯ ಸ್ಪರ್ಶದ ಸೆರೆಮನೆ

ಜೈಲಿನ ನಿವಾಸಿಗಳಿಗೆ ಮೊದಲನೆ ಬಾರಿಗೆ ಸಮಗ್ರ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಯಿತು. ಅವರಿಗೆ ಉಚಿತವಾದ ಶುಶ್ರೂಷೆಯ ವ್ಯವಸ್ಥೆ ಕೂಡ ಆಯಿತು. ಅಲ್ಲಿ ಆಲೋಪತಿ ಜತೆಗೆ ಹೋಮಿಯೋಪತಿ ಚಿಕಿತ್ಸೆಗೆ ಹೆಚ್ಚು ಆದ್ಯತೆ ಕೊಡಲಾಯಿತು. ವಿವಿಧ ಸರಕಾರೇತರ ಸಂಸ್ಥೆಗಳ ಸಹಾಯ ಪಡೆದು ಅತ್ಯಾಧುನಿಕ ಕೌನ್ಸೆಲಿಂಗ್ ಕೇಂದ್ರವು ಜೈಲಿನ ಒಳಗೆ ಆರಂಭ ಆಯಿತು. ಇದು ಜಗತ್ತಿನಲ್ಲಿಯೇ ಮೊದಲು.

ಯೋಗ, ಪ್ರಾಣಾಯಾಮ ಮತ್ತು ಭಗವದ್ಗೀತೆ ಪಾಠ

ಕೈದಿಗಳಿಗೆ ತಜ್ಞರಿಂದ ಯೋಗ, ಅನುಶಾಸನ, ಪ್ರಾಣಾಯಾಮ, ಭಗವದ್ಗೀತೆ ಮತ್ತು ಧಾರ್ಮಿಕ ಪಠಣದ ತರಗತಿಗಳು ಆರಂಭವಾದವು. ಅವರ ಮಾನಸಿಕ ದೃಢತೆ ಹೆಚ್ಚು ಮಾಡಲು ಈ ರೀತಿಯ ತರಗತಿಗಳು ನೆರವಾದವು.

ಸಾಗರದ ತೆರೆಗಳಂತೆ ಮುಗಿಯದ ಸವಾಲು

ನಿಜವಾದ ಸಮಸ್ಯೆಗಳು ಇನ್ನೂ ಜೀವಂತವಾಗಿ ಇದ್ದವು. ಮಾದಕ ವಸ್ತುಗಳ ಕಳ್ಳ ಸಾಗಾಟದ ಕೇಸ್ ಮೇಲೆ ಅರೆಸ್ಟ್ ಆದ ವಿದೇಶದ ಕೆಲವು ಆಪಾದಿತರು 10-15 ವರ್ಷಗಳಿಂದ ಸೆರೆಮನೆಯಲ್ಲಿಯೇ ಇದ್ದರು. ಯಾಕೆಂದರೆ ಅವರ ವಿಚಾರಣೆಯೇ ಆಗಿರಲಿಲ್ಲ.
ಅವರು ತುಂಬಾ ಅಗ್ರೆಸ್ಸಿವ್ ಆಗಿದ್ದರು. ಅವರ ಮನವೊಲಿಸಿ ಅವರಿಗೆ ಗಿಟಾರ್, ಪಿಯಾನೋ ಮತ್ತು ಪಿಟೀಲು ಕ್ಲಾಸ್‌ಗಳು ಆರಂಭವಾದವು. ಅವರ ತುರ್ತು ವಿಚಾರಣೆಗೆ ವ್ಯವಸ್ಥೆ ಮಾಡಲಾಯಿತು. ಜಾಮೀನು ದೊರೆಯುವ ಸಾಧ್ಯತೆಯು ಇದ್ದ ನಿವಾಸಿಗಳಿಗೆ ತುರ್ತು ಜಾಮೀನು ವ್ಯವಸ್ಥೆ ಮಾಡಿ ಅವರನ್ನು ಹೊರಗೆ ಕಳುಹಿಸಲಾಯಿತು.
ಕೈದಿಗಳಿಗೆ ಸ್ವಚ್ಛತಾ ಪ್ರಜ್ಞೆಯ ಬಗ್ಗೆ ಶಿಕ್ಷಣ ಕೊಡಲಾಯಿತು. ಸಿಕ್ಕಿದ್ದಲ್ಲಿ ಉಗುಳುವ, ಮೂತ್ರ ಮಾಡುವ ಆಪಾದಿತರಿಗೆ ಸಣ್ಣ ಸಣ್ಣ ಶಿಕ್ಷೆ ನೀಡಿ ಅವರ ಮಾನಸಿಕ ಪರಿವರ್ತನೆಗೆ ತೀವ್ರ ಪ್ರಯತ್ನ ಮಾಡಲಾಯಿತು.

ಬಾಲಾಪರಾಧಿಗಳು ತಿಹಾರ್ ಸೆರೆಮನೆಯಲ್ಲಿ

ಇನ್ನೂ ದೊಡ್ಡದಾದ ಸವಾಲು ಎದುರಾದದ್ದು ಏನೆಂದರೆ ಆ ಸೆರೆಮನೆಯಲ್ಲಿ 18 ವರ್ಷಗಳಿಗಿಂತ ಕಡಿಮೆ ವಯಸ್ಸಿನ 1 ಸಾವಿರಕ್ಕಿಂತ ಅಧಿಕ ಬಾಲಾಪರಾಧಿಗಳು ಇದ್ದರು. ಅವರನ್ನು ರಿಮಾಂಡ್ ಹೋಮ್‌ನಲ್ಲಿ ಪ್ರತ್ಯೇಕ ಇಡಬೇಕು ಎಂಬ ಕಾಯ್ದೆ ಇದ್ದರೂ ತಿಹಾರ್ ಜೈಲಿನಲ್ಲಿ ಅದಕ್ಕೆ ವ್ಯವಸ್ಥೆಯೇ ಇರಲಿಲ್ಲ.

ಸೆರೆಮನೆ ನಿಧಾನಕ್ಕೆ ಶಾಲೆ ಆಯ್ತು

ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಅವರ ಹೆಸರಲ್ಲಿ ಎರಡು ವಿನೂತನವಾದ ವಾರ್ಡ್‌ಗಳ ನಿರ್ಮಾಣ ಮಾಡಲಾಯಿತು. ಅವರಿಗೆ ಓದುವ ಮತ್ತು ಬರೆಯುವ ವ್ಯವಸ್ಥೆಗಳು ಆದವು. ಪಾಠ ಮಾಡಲು ಜೈಲಿನ ಒಳಗೆ ಇದ್ದ ಕೆಲವು ವಿದ್ಯಾವಂತ ಯುವಕ, ಯುವತಿಯರ ಸಹಾಯ ಪಡೆಯಲಾಯಿತು. ಪಾಠ ಮಾಡುವ ಶಿಕ್ಷಕರಿಗೆ ದಿನಕ್ಕೆ 200 ರೂ. ವೇತನ ನೀಡಲಾಯಿತು. ತಿಹಾರ್ ಜೈಲು ನಿಧಾನವಾಗಿ ಶಾಲೆಯಾಗಿ ಹೊಮ್ಮಿತು.

ಹೆಣ್ಣು ಮಕ್ಕಳಿಗೆ ಉಚಿತ ಹೊಲಿಗೆ, ಎಂಬ್ರಾಯ್ಡರಿ, ಕಸೂತಿ ತರಗತಿಗಳು ಆರಂಭ ಆದವು. ಅವರ ಜತೆಗೆ ಸೆಲ್ ಒಳಗೆ ಬಾಲ್ಯವನ್ನು ಮರೆತಿದ್ದ ನಿರಪರಾಧಿಗಳಾದ 40 ಪುಟ್ಟ ಪುಟ್ಟ ಕಂದಮ್ಮಗಳಿಗೆ ಶಾಲೆಗಳ ವ್ಯವಸ್ಥೆ ಆಯಿತು. ಅವರಿಗೆ ತಿಂಗಳಿಗೆ ಒಮ್ಮೆ ಕಿರು ಪ್ರವಾಸದ ವ್ಯವಸ್ಥೆ ಆಯಿತು.

ಜೈಲಿನ ಒಳಗೆ ಇಂದಿರಾ ಗಾಂಧಿ ಮುಕ್ತ ವಿವಿಯ (IGNOU) ಅಧ್ಯಯನ ಕೇಂದ್ರ ಆರಂಭ ಆಯಿತು. ಕಲಿಯಲು ಆಸಕ್ತಿ ಇರುವ ಮಂದಿಗೆ ಪಠ್ಯಪುಸ್ತಕ, ಶೈಕ್ಷಣಿಕ ವಿಡಿಯೋ ಮತ್ತು ಆಡಿಯೋಗಳನ್ನು ಉಚಿತವಾಗಿ ಒದಗಿಸಲಾಯಿತು. ಕಂಪ್ಯೂಟರ್ ತರಬೇತಿ ಆರಂಭವಾಯಿತು. ಹಲವು ಜನ ಶಿಕ್ಷೆಗಳಿಗೆ ಒಳಗಾದ ಯುವಕ, ಯುವತಿಯರು ಪದವಿ, ಡಿಪ್ಲೊಮಾ, ಸ್ನಾತಕೋತ್ತರ ಪದವಿ ಪಡೆದು ಹೊರಬಂದರು.

ಸೆರೆಮನೆ ಒಳಗೆ ಕೌನ್ಸೆಲಿಂಗ್ ಕೇಂದ್ರಗಳು

ವಿಚಾರಣಾಧೀನ ಕೈದಿಗಳಿಗೆ ಕಾನೂನು ಮಾಹಿತಿ ಶಿಬಿರಗಳು ನಡೆದವು. ಅವರ ಮನಸ್ಸು ಪರಿವರ್ತನೆಗೆ ಕೌನ್ಸೆಲಿಂಗ್ ಕೇಂದ್ರಗಳು ಶ್ರಮಿಸಿದವು. ಜೈಲಿನ ಒಳಗೆ ಕೈಮಗ್ಗದ ಒಂದು ಘಟಕ ಉದ್ಘಾಟನೆ ಆಯಿತು. ಮುಂದೆ ಸಾಬೂನು ತಯಾರಿಕೆ, ಖಾದಿ ಬಟ್ಟೆ ತಯಾರಿ, ಬೇಕರಿ ಉತ್ಪನ್ನಗಳ ತಯಾರಿ ಘಟಕಗಳು ಆರಂಭ ಆದವು.

ಅವರ ಉತ್ಪನ್ನಗಳಿಗೆ ಮಾರ್ಕೆಟ್ ಬೇಕಲ್ಲಾ? ಅದಕ್ಕಾಗಿ ಕಿರಣ್ ಬೇಡಿ ಅವರು ನಗರದಲ್ಲಿ ಹಲವು ಮಾರಾಟ ಕೇಂದ್ರಗಳನ್ನು ತೆರೆದರು. ಅದಕ್ಕೆ ‘ತಿಹಾರ್ ಉತ್ಪನ್ನಗಳ ಮಾರಾಟ ಮಳಿಗೆ’ ಎಂಬ ಬೋರ್ಡ್‌ ಬರೆಸಲಾಯಿತು. ಗುಣಮಟ್ಟ ಚೆನ್ನಾಗಿ ಇದ್ದ ಕಾರಣ ವ್ಯಾಪಾರ ಭರ್ಜರಿ ಆಯಿತು. ಅದರ ಲಾಭವನ್ನು ನೇರವಾಗಿ ಕೈದಿಗಳ ಖಾತೆಗೆ ಜಮೆ ಮಾಡುವ ವ್ಯವಸ್ಥೆ ಕಿರಣ್ ಮೇಡಂ ಮಾಡಿದರು.

ಇದು ಸೆರೆಮನೆ ನಿವಾಸಿಗಳ ಬದುಕಿನಲ್ಲಿ ಭಾರೀ ಬದಲಾವಣೆ ತಂದಿತು

ವಿಪಷ್ಯನ ಯೋಗ ಶಿಬಿರಗಳು ಸೆರೆಮನೆಯಲ್ಲಿ ಭಾರಿ ಬದಲಾವಣೆ ತಂದವು. ಮೊದ ಮೊದಲು ಪ್ರತಿಭಟನೆ ಮಾಡಿದ ಆಪಾದಿತರು ನಿಧಾನವಾಗಿ ಕಿರಣ್ ಮೇಡಂ ಅವರ ಸಹಜ ಪ್ರೀತಿಗೆ ಮನಸೋತರು. ಆಕೆ ಮಧ್ಯಾಹ್ನ ಸ್ವತಃ ಜೈಲಿಗೆ ಬಂದು ಎಲ್ಲ ಕೈದಿಗಳಿಗೆ ಮೊದಲು ಊಟ ಬಡಿಸಿ ಕೊನೆಗೆ ಅವರ ಜತೆ ಕೂತು ತಾನು ಊಟ ಮಾಡುತ್ತಿದ್ದರು. ಕೈದಿಗಳು ಉಣ್ಣುತ್ತಿದ್ದ ಅನ್ನವನ್ನೇ ಅವರು ದಿನವೂ ಊಟ ಮಾಡುತ್ತಿದ್ದರು. ಕೈದಿಗಳು ಅವರನ್ನು ಪ್ರೀತಿಯಿಂದ ‘ಕಿರಣ್ ದೀದಿ’ ಎಂದು ಕರೆಯಲು ಆರಂಭ ಮಾಡಿದರು. ಅವರ ಉದಾತ್ತ ಆಶಯಗಳಿಗೆ ಬೆಂಬಲವಾಗಿ ನಿಂತರು.

ಪ್ರತಿಯೊಬ್ಬ ಕೈದಿಯು ವಿಚಾರಣೆ ಮುಗಿದು ತೀರ್ಪು ಪಡೆದು ಹಿಂದೆ ಹೊರಟಾಗ ಅವರ ಮನೆಯವರನ್ನು ಕರೆದು ಅವರ ಸಮ್ಮುಖದಲ್ಲಿ ಬುದ್ಧಿವಾದ ಹೇಳಿ ಬೀಳ್ಕೊಡುತ್ತಿದ್ದರು. ‘ಇನ್ನು ಯಾವತ್ತೂ ಇಲ್ಲಿಗೆ ಬರಬೇಡಿ’ ಎನ್ನುತ್ತಿದ್ದರು ಕಿರಣ್ ಬೇಡಿ. ಅವರ ಮಾನವೀಯ ಸ್ಪರ್ಶಕ್ಕೆ ಕಠೋರ ಹೃದಯದ ಕ್ರಿಮಿನಲ್ ಅಪರಾಧಿಗಳು ಕೂಡ ಕರಗಿ ಹೋಗುತ್ತಿದ್ದರು.

ಕಿರಣ್ ಬೇಡಿ ಮಾಡಿದ ಈ ಜೈಲು ಸುಧಾರಣೆಯ ಕ್ರಮಗಳು ಜಗತ್ತಿನಲ್ಲಿಯೇ ವಿನೂತನ ಆಗಿದ್ದವು. ಅದರಿಂದ ದೇಶದ, ವಿದೇಶದ ಮಾಧ್ಯಮಗಳು ಆಕೆಯ ಬಗ್ಗೆ, ತಿಹಾರ್ ಜೈಲಿನ ಸುಧಾರಣೆಯ ಕ್ರಮಗಳ ಬಗ್ಗೆ ಲೀಡ್ ಲೇಖನಗಳನ್ನು ಬರೆದವು. ಆಗ ಭಾರಿ ಇಂಪ್ರೆಸ್ ಆದ ಅಮೆರಿಕದ ಆಗಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಆಕೆಗೆ ಪತ್ರ ಬರೆದು ಶುಭಾಶಯ ಹೇಳಿದರು ಮತ್ತು ಅವರ ಜತೆ ಒಮ್ಮೆ ಊಟ ಮಾಡಬೇಕು ಅಂತ ಆಸೆ ವ್ಯಕ್ತಪಡಿಸಿದರು.

ಕಿರಣ್ ಬೇಡಿ ಅವರಿಗೆ ಜಾಗತಿಕ ಮಟ್ಟದ ‘ಮ್ಯಾಗ್ಸೆಸ್ಸೆ ಪ್ರಶಸ್ತಿ’ ದೊರೆಯಿತು. ಪದ್ಮಶ್ರೀ ಪ್ರಶಸ್ತಿ ಒಲಿದು ಬಂತು. ಮುಂದೆ ನಿವೃತ್ತರಾದ ನಂತರ ಅವರು ಪಾಂಡಿಚೇರಿಯ ಮೊದಲ ಮಹಿಳಾ ಗವರ್ನರ್ ಆಗಿ ಸೇವೆ ಸಲ್ಲಿಸಿದರು.

ಭರತ ವಾಕ್ಯ

ಕಿರಣ್ ಬೇಡಿ ಅವರ ಆತ್ಮಚರಿತ್ರೆಯ ಪುಸ್ತಕ DARE TO BE GREAT ಓದುತ್ತಾ ಹೋದಂತೆ ನಮಗೆ ಅವರ ಅಸದೃಶವಾದ ವ್ಯಕ್ತಿತ್ವ ಕಣ್ಣ ಮುಂದೆ ಬರುತ್ತದೆ. ಆಕೆ ನಿಜವಾಗಿಯೂ ಗ್ರೇಟ್ ಎಂದು ನನ್ನ ಭಾವನೆ!error: Content is protected !!
Scroll to Top