ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವಿಶ್ವ ಹೃದಯ ದಿನಾಚರಣೆ
ಕಾರ್ಕಳ : ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ಕಾರ್ಕಳದ ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆ ಮತ್ತು ರೋಟರಾಕ್ಟ್ ಕ್ಲಬ್ ಸಹಯೋಗದಲ್ಲಿ ವಿಶ್ವ ಹೃದಯ ದಿನಾಚರಣೆಯನ್ನು ಭಾನುವಾರ ಆಚರಿಸಲಾಯಿತು.
ಡಾ| ಟಿಎಂಎ ಪೈ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಣಿಪಾಲ ಕೆಎಂಸಿ ಕಾರ್ಡಿಯಾಲಜಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ| ಮುಕುಂದ್ ಎ. ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಮಣಿಪಾಲ ಕೆಎಂಸಿ ಕಮ್ಯುನಿಟಿ ಮೆಡಿಸಿನ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ| ಚೈತ್ರಾ ಆರ್. ರಾವ್ ಹೃದಯದ ಆರೋಗ್ಯದ ಬಗ್ಗೆ ವಿವರಿಸಿ ಅದರ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು. ದುರ್ವ್ಯಸನಗಳಿಂದ ದೂರವಿದ್ದು ಸೂಕ್ತವಾದ ಆಹಾರ ಸೇವನೆ, ನಿಯಮಿತ ವ್ಯಾಯಾಮ ಮತ್ತು ಒತ್ತಡ ನಿರ್ವಹಣೆಗೆ ಅಗತ್ಯವಾದ ಧ್ಯಾನ ಮತ್ತು ಪ್ರಾಣಾಯಾಮ ಮಾಡುವುದರಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ಹೇಳಿದರು.
ರೋಟರಿ ಸಂಸ್ಥೆಯ ಮಾರ್ಗದರ್ಶಕ ಮಾಜಿ ಜಿಲ್ಲಾ ಗವರ್ನರ್ ಡಾ| ಭರತೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರೋಟರಿ ಅಧ್ಯಕ್ಷ ಸುರೇಶ್ ನಾಯಕ್ ಅತಿಥಿಗಳನ್ನು ಸ್ವಾಗತಿಸಿದರು. ರಾಜೇಶ್ ಕುಂಟಾಡಿ ನಿರೂಪಿಸಿ, ಕಾರ್ಯದರ್ಶಿ ಉಪೇಂದ್ರ ವಾಗ್ಲೆ ವಂದಿಸಿದರು.
ಡಾ|ಟಿಎಂಎಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ|ಕೀರ್ತಿನಾಥ ಬಲ್ಲಾಳ್ ಮತ್ತು ರೋಟರಾಕ್ಟ್ ಅಧ್ಯಕ್ಷೆ ಶೈನಾ ಪಿರೇರಾ ಉಪಸ್ಥಿತರಿದ್ದರು. ಕಾರ್ಕಳ ಪರಿಸರದ ಪದವಿಪೂರ್ವ ಮತ್ತು ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.