ಮುದ್ರಾಡಿ ಭಾಗ್ಯಶ್ರೀ ಜ್ಞಾನವಿಕಾಸ ಕೇಂದ್ರದಲ್ಲಿ ಮಾಹಿತಿ ಕಾರ್ಯಕ್ರಮ

ಹಬ್ಬಗಳ ಆಚರಣೆಯಲ್ಲಿ ದೇಶದ ಸಂಸ್ಕೃತಿಯ ಅಸ್ಮಿತೆ ಅಡಗಿದೆ – ಚಂದ್ರಶೇಖರ ಭಟ್

ಹೆಬ್ರಿ : ಭಾರತೀಯ ಸಂಸ್ಕೃತಿಯ ಹೆಗ್ಗುರುತು ಹಬ್ಬಹರಿದಿನಗಳು. ಸಾಮಾಜಿಕ ಬಾಂಧವ್ಯ ಮತ್ತು ಸಾಮರಸ್ಯದಿಂದ ಜೀವನ ಸಾಗಿಸಲು ಹಬ್ಬಗಳು ಪೂರಕ. ದೇಶದ ಸಂಸ್ಕೃತಿಯ ಅಸ್ಮಿತೆ ಹಬ್ಬಗಳಲ್ಲಿ ಅಡಗಿದೆ. ಆದರೆ ಯಾವುದೇ ಹಬ್ಬಗಳ ಆಚರಣೆಯ ಮಹತ್ವವನ್ನು ಅರಿತು ಆಚರಿಸಿದಾಗ ಮಾತ್ರ ಅದರ ಮೌಲ್ಯ ಹೆಚ್ಚಾಗುವುದು. ಅವಿಭಕ್ತ ಕುಟುಂಬಗಳು ಇದ್ದ ಕಾಲದಲ್ಲಿ ಮನೆಯ ಹಿರಿಯ ಸದಸ್ಯರ ಹಿರಿತನದಲ್ಲಿ ಕುಟುಂಬದ ಎಲ್ಲ ಸದಸ್ಯರು ಕೂಡಿಕೊಂಡು ಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದರು. ಆಧುನಿಕ ತಂತ್ರಜ್ಞಾನದ ದಾಸ್ಯಕ್ಕೆ ಒಳಗಾದ ಇಂದಿನ ದಿನಗಳಲ್ಲಿ ಸಾಮಾಜಿಕ ಸಂಬಂಧಗಳು ಕುಸಿಯುತ್ತಿರುವುದು ಆಂತಕದ ಬೆಳವಣಿಗೆ. ದುಂದುವೆಚ್ಚ ಮತ್ತು ಆಡಂಬರದ ಆಚರಣೆಗಳಿಂದ ದೇವರ ಅನುಗ್ರಹವನ್ನು ಪಡೆಯಲು ಅಸಾಧ್ಯ. ವೇದಗಳು, ಪುರಾಣಗಳು, ಮಹಾಕಾವ್ಯಗಳು ನಮ್ಮ ಸಂಸ್ಕೃತಿಯ ನೈಜ ದರ್ಶನಗಳಾಗಿವೆ. ಮನೆಯಲ್ಲಿ ಪೋಷಕರು ಮತ್ತು ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಬಾಲ್ಯದಲ್ಲಿಯೇ ನಮ್ಮ ದೇಶದ ಅಗಾಧ ಸಂಸ್ಕೃತಿಯ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋಣ ಎಂದು ಉಡುಪಿ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಚಂದ್ರಶೇಖರ ಭಟ್ ತಿಳಿಸಿದರು.

ಅವರು ಬಲ್ಲಾಡಿ ಈಶ್ವರನಗರದ ಸದಾನಂದ ಕುಲಾಲ್ ಅವರ ಸ್ವಗೃಹದಲ್ಲಿ ಭಾಗ್ಯಶ್ರೀ ಜ್ಞಾನವಿಕಾಸ ಕೇಂದ್ರದ ವತಿಯಿಂದ ನಡೆದ ಸರಳ ರೀತಿಯಲ್ಲಿ ಹಬ್ಬಗಳ ಆಚರಣೆಯ ಮಹತ್ವ ಕುರಿತು ಉಪನ್ಯಾಸ ನೀಡಿದರು.
ಜ್ಞಾನವಿಕಾಸ ಕೇಂದ್ರದ ಹಿರಿಯ ಸದಸ್ಯೆ ವನಜಾ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಮೀಳಾ ಪೂಜಾರಿ ಸ್ವಾಗತಿಸಿ, ಸೇವಾಪ್ರತಿನಿಧಿ ಮಮತಾ ಕಾರ್ಯಕ್ರಮ ನಿರೂಪಿಸಿದರು. ವೀಣಾ ವಂದಿಸಿದರು. ಕೇಂದ್ರದ ಸದಸ್ಯೆಯರು ಉಪಸ್ಥಿತರಿದ್ದರು.error: Content is protected !!
Scroll to Top