ದಟ್ಟ ಕಾಡಿನಲ್ಲಿ ನಾಪತ್ತೆಯಾಗಿದ್ದ ಯುವಕ ವಾರದ ಬಳಿಕ ವಾಪಸ್‌

ಕಬ್ಬಿನಾಲೆ ಬಳಿ ಪತ್ತೆಯಾದ ಯುವಕನನ್ನು ವಾರವಿಡೀ ಕಾಪಾಡಿದ್ದು ಜತೆಗಿದ್ದ ಸಾಕುನಾಯಿ

ಸಿದ್ದಾಪುರ : ಮರ ಕಡಿಯಲೆಂದು ಕಾಡಿಗೆ ಹೋಗಿ ಕಾಣೆಯಾಗಿದ್ದ ಯುವಕ ಒಂದು ವಾರದ ಬಳಿಕ ಮರಳಿ ಬಂದ ಸಿನಿಮೀಯ ರೀತಿಯ ಘಟನೆ ಸಿದ್ದಾಪುರ ಸಮೀಪ ಅಮಾಸೆಬೈಲು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಚ್ಚಟ್ಟು ಗ್ರಾಮದ ತೊಂಬಟ್ಟುವಿನಲ್ಲಿ ಸಂಭವಿಸಿದೆ. ಕಳೆದ ಶನಿವಾರ ಕಾಡಿಗೆ ತೆರಳಿ ನಾಪತ್ತೆಯಾಗಿದ್ದ ಇರ್ಕಿಗದ್ದೆ ಶೀನ ನಾಯ್ಕ ಎಂಬವರ ಪುತ್ರ ವಿವೇಕಾನಂದ (28) ಬರೋಬ್ಬರಿ 8 ದಿನಗಳ ಬಳಿಕ ವಾಪಸು ಬಂದಿದ್ದಾರೆ. ಕಾಡಿನೊಳಗೆ ದಾರಿ ತಪ್ಪಿ ಅಂಡಲೆದು ಕೊನೆಗೆ ಹೇಗೋ ದಾರಿ ಹುಡುಕಿ ಮನೆ ಸೇರಿದ್ದಾರೆ. ವಿಶೇಷ ಎಂದರೆ ಎಂಟು ದಿನವೂ ಅವರು ಸಾಕಿದ ನಾಯಿ ಜತೆಗೇ ಇತ್ತು. ಈ ನಾಯಿಯ ಸ್ವಾಮಿನಿಷ್ಠೆ ಈಗ ಭಾರಿ ಪ್ರಶಂಸೆಗೆ ಪಾತ್ರವಾಗಿದೆ.

ಸೆ.16ರಂದು ಮಧ್ಯಾಹ್ನ ಕಂಬಕ್ಕಾಗಿ ಮರವೊಂದನ್ನು ಕಡಿದು ತರಲೆಂದು ವಿವೇಕಾನಂದ ಕಾಡಿಗೆ ಹೋಗಿದ್ದರು. ಆದರೆ ದಾರಿ ತಪ್ಪಿ ದಟ್ಟ ಅರಣ್ಯದಲ್ಲಿ ಬಾಕಿಯಾಗಿದ್ದರು. ಶನಿವಾರ ಮನೆಯಿಂದ ಸುಮಾರು 4 ಕಿ.ಮೀ. ದೂರದ ಕಬ್ಬಿನಾಲೆಯ ಕಾಡಿನ ಸಮೀಪ ಪತ್ತೆಯಾಗಿದ್ದಾರೆ. ಕಾಡಿಗೆ ಅವರ ಜತೆ ಎರಡು ಸಾಕುನಾಯಿಗಳೂ ಹೋಗಿದ್ದವು. ಅದರಲ್ಲೊಂದು ಮರಳಿತ್ತು. ಮನೆಯವರಿಗೆ ಆತ ಕಾಡಿಗೆ ತೆರಳಿದ್ದು ಗೊತ್ತಿರಲಿಲ್ಲ. ಹಳೆಯ ಮಾಳಿಗೆ ಮನೆಯಾಗಿದ್ದರಿಂದ ಮಧ್ಯಾಹ್ನ ಊಟ ಮಾಡಿ ಮಹಡಿಯಲ್ಲಿ ಮಲಗಿರಬಹುದು ಅಂದುಕೊಂಡಿದ್ದರು. ಸಂಜೆಯಾದರೂ ಕಾಣದಿದ್ದಾಗ ಆತಂಕಗೊಂಡು ಅಕ್ಕಪಕ್ಕದವರಿಗೆ ಸುದ್ದಿ ತಿಳಿಸಿ ಹುಡುಕಾಟ ಆರಂಭಿಸಿದರು. ರಾತ್ರಿ 12ರ ವರೆಗೂ ಕಾಡಿನಲ್ಲಿ ನೂರಾರು ಜನ ಹುಡುಕಾಡಿದರು ಪತ್ತೆಯಾಗಿರಲಿಲ್ಲ. ರವಿವಾರ ಅಮಾಸೆಬೈಲು ಪೊಲೀಸರು, ಅರಣ್ಯ ಇಲಾಖೆಯವರು ಸೇರಿ 200 ಜನ ಹುಡುಕಾಡಿದರು. ಬಳಿಕ ಶುಕ್ರವಾರದವರೆಗೆ ಪ್ರತಿ ದಿನ ನೂರಕ್ಕೂ ಮಿಕ್ಕಿ ಜನ ಹುಡುಕಾಡಿದರೂ ಪ್ರಯೋಜನ ಆಗಿರಲಿಲ್ಲ.
ಶನಿವಾರ ಮನೆಯಿಂದ 4 ಕಿ.ಮೀ. ದೂರದ ಕಾಡಿನ ಅಂಚಿನಲ್ಲಿದ್ದ ಕಬ್ಬಿನಾಲೆ ಜಗನ್ನಾಥ ಶೆಟ್ಟಿಗಾರ್‌ ಅವರ ಮನೆಯ ಬಳಿ ಕಾಡಿನಿಂದ ಇಳಿದು ಬರುತ್ತಿರುವ ಯುವಕನ್ನು ನೋಡಿದ ಮನೆಯವರು ಒಳಗೆ ಕರೆದೊಯ್ದು ಉಪಚರಿಸಿ ಊರಿನವರಿಗೆ ಮಾಹಿತಿ ನೀಡಿದರು. ಆಗ ಆತನೇ ವಿವೇಕಾನಂದ ಎಂಬ ವಿಚಾರ ತಿಳಿಯಿತು. ಆಹಾರವಿಲ್ಲದೆ ತೀವ್ರ ಬಳಲಿದ್ದ ಆತನನ್ನು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದ್ದು, ಯಾವುದೇ ಆತಂಕವಿಲ್ಲವೆಂದು ವೈದ್ಯರು ತಿಳಿಸಿದ್ದಾರೆ.
ಯುವಕ ನಾಪತ್ತೆಯಾಗಿರುವ ಪ್ರದೇಶ ದಟ್ಟ ಅಡವಿಯಾಗಿದ್ದು, ಚಿರತೆ, ಕಾಡು ಹಂದಿ, ಕಾಡು ಕೋಣದಂತಹ ಕಾಡು ಪ್ರಾಣಿಗಳು ಇವೆ. ರಾತ್ರಿ ವೇಳೆಯಲ್ಲಿ ಒಬ್ಬನೇ ಸಂಚರಿಸುವುದು ಅಸಾಧ್ಯ. ಆದರೆ ಜತೆಗಿದ್ದ ಶ್ವಾನ ತನಗೆ ಯಾವುದೇ ಆಹಾರವಿಲ್ಲದಿದ್ದರೂ ಎಡೆಬಿಡದೆ ಜತೆಗಿದ್ದು ರಕ್ಷಿಸಿತ್ತು. ಕೊನೆಗೆ ಅಡವಿಯಂಚಿನ ತೊಂಬಟ್ಟು ಗಾಳಿಗುಡ್ಡೆಯ ಶ್ರೀ ಈಶ್ವರ ದೇವಸ್ಥಾನದ ಬಳಿಗೆ ಬಂದ ವಿವೇಕಾನಂದ ಅವರಿಗೆ ತಾನು ಇರುವ ಜಾಗದ ಬಗ್ಗೆ ಅರಿವಿಗೆ ಬಂತು. ಬಳಿಕ ಸ್ಥಳೀಯರು ಮನೆಯ ದಾರಿ ತೋರಿಸಿದರು. ನನ್ನೂರಿನ ಮಹಾಗಣಪತಿಯನ್ನು ಪ್ರಾರ್ಥಿಸಿದೆ. ಹಾಗಾಗಿ ಸುರಕ್ಷಿತವಾಗಿ ಮರಳಿದೆ ಎಂದು ವಿವೇಕಾನಂದ ಹೇಳಿದ್ದಾರೆ.
ಹಗಲೆಲ್ಲ ನಾಯಿಯೊಂದಿಗೆ ಕಾಡಿನೊಳಗೆ ಅಲೆಯುತ್ತಿದ್ದು ಸಂಜೆಯಾಗುತ್ತಿದ್ದಂತೆ, ಮರದ ಬುಡ ಅಥವಾ ಕಲ್ಲು ಬಂಡೆಯ ಮೇಲೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದರು. ನಾಯಿ ಜತೆಗೇ ಇರುತ್ತಿತ್ತು. ಕಾಡಿನ ಹಣ್ಣು-ಕಾಯಿಗಳನ್ನು ತಿನ್ನುತ್ತ, ತೊರೆಯ ನೀರನ್ನು ಕುಡಿಯುತ್ತಿದ್ದರು. ನಾಯಿಯೂ ಸಂಪೂರ್ಣ ಬಳಲಿದೆ.







































































error: Content is protected !!
Scroll to Top