ಜಾಗದ ತಕರಾರಿನ ಹಿನ್ನೆಲೆಯಲ್ಲಿ ಪತ್ನಿ ಮೇಲೆ ದೌರ್ಜನ್ಯ ಎಸಗಿದ್ದ ದುಷ್ಕರ್ಮಿಗಳು
ಲಖನೌ : ಜಾಗದ ತಕರಾರಿನ ಹಿನ್ನೆಲೆಯಲ್ಲಿ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪರಿಣಾಮ ಗಂಡ ಹೆಂಡತಿ ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ಸಂಭವಿಸಿದೆ.
ಸೆ.21ರ ಮಧ್ಯರಾತ್ರಿಯ ವೇಳೆ ಇಬ್ಬರು ವ್ಯಕ್ತಿಗಳು ಮಹಿಳೆ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಈ
ಆಘಾತದಿಂದ ದಂಪತಿ ವಿಷ ಸೇವಿಸಿದ್ದಾರೆ. 30 ವರ್ಷದ ಪತಿ ಅದೇ ದಿನ ಮೃತಪಟ್ಟಿದ್ದು, 27ರ ಹರೆಯದ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮರುದಿನ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ದಂಪತಿ ಪ್ರಾಣ ಕಳೆದುಕೊಳ್ಳುವ ಮುನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಆರೋಪಿಗಳ ಹೆಸರನ್ನು ಹೇಳಿದ್ದಾರೆ.
ಮೃತ ವ್ಯಕ್ತಿಯ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳಾದ ಆದರ್ಶ್ (25) ಮತ್ತು ತ್ರಿಲೋಕಿ (45) ಎಂಬವರನ್ನು ಬಂಧಿಸಲಾಗಿದೆ.
ದಂಪತಿಗೆ ಎಂಟು ಮತ್ತು ಆರು ವರ್ಷದ ಇಬ್ಬರು ಗಂಡು ಮಕ್ಕಳು ಮತ್ತು ಒಂದು ವರ್ಷದ ಮಗಳು ಇದ್ದಾಳೆ. ಮಕ್ಕಳು ಶಾಲೆಗೆ ಹೋಗುವ ಮುನ್ನ ನಾವು ವಿಷ ಸೇವಿಸಿದ್ದೇವೆ ನಾವು ಸಾಯುತ್ತೇವೆ ಎಂದು ಮಕ್ಕಳ ಬಳಿ ಹೇಳಿದ್ದಾರೆ. ಅತ್ಯಾಚಾರ ಮೃತ ವ್ಯಕ್ತಿಯ ಜಮೀನು ಮಾರಾಟದ ವಿವಾದದ ಕಾರಣ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.