ರಾಜಪಥ-ಜಗತ್ತಿನ ಅತಿ ದೊಡ್ಡ ಕೊಲೆಗಡುಕ ಹೃದಯಾಘಾತ

ಹೃದಯಕ್ಕೂ ಒಂದು ದಿನ ಬೇಕು ಅಲ್ವಾ?

ಹೃದಯಾಘಾತ ಎನ್ನುವುದು ಈಗ ಆತಂಕ ಹುಟ್ಟಿಸುವ ಸಂಗತಿಯಾಗಿದೆ. ನಿತ್ಯ ಹೃದಯಾಘಾತದಿಂದ ಸಾಯುತ್ತಿರುವವರ ಸಂಖ್ಯೆಯನ್ನು ಕೇಳುವಾಗ ಜನ ಬೆಚ್ಚಿಬೀಳುತ್ತಿದ್ದಾರೆ. ಅದರಲ್ಲೂ ಕೊರೊನಾ ನಂತರ ಹೃದಯಾಘಾತದಿಂದ ಸಾಯುವವರ ಸಂಖ್ಯೆ ಕಳವಳಕಾರಿಯಾಗಿ ಹೆಚ್ಚಿದೆ. ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ, ಸುಮ್ಮನೆ ನಡೆದುಕೊಂಡು ಹೋಗುವಾಗ, ಮಾಮೂಲಿನಂತೆ ಕೆಲಸ ಮಾಡುತ್ತಿರುವಾಗ ಜನರು ಕುಸಿದು ಬಿದ್ದ ಸಾಯುವ ವರದಿಗಳು ಆಗಾಗ ಬರುತ್ತಿರುತ್ತವೆ. ಗಟ್ಟಿಮುಟ್ಟಾಗಿದ್ದವರು, ಯಾವುದೇ ರೋಗ ಲಕ್ಷಣ ಇಲ್ಲದವರು,ಲವಲವಿಕೆಯಿಂದ ಇದ್ದ ಯುವಕ-ಯುವತಿಯರು ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದನ್ನು ನೋಡುವಾಗ ಓ ಹೃದಯವೇ ನೀನೆಷ್ಟು ಕ್ರೂರಿ ಎಂದೆನೆಸದೆ ಇರುವುದಿಲ್ಲ. ಹೃದಯಾಘಾತ ಮಕ್ಕಳನ್ನೂ ಬಿಡದೆ ಕಾಡುತ್ತಿರುವುದು ಇನ್ನೂ ಹೆಚ್ಚಿನ ಕಳವಳ ಉಂಟು ಮಾಡುತ್ತಿದೆ. ಇಂಥ ಸಂದರ್ಭದಲ್ಲಿ ಹೃದಯದ ಬಗ್ಗೆ ಕೊಂಚ ತಿಳಿದುಕೊಳ್ಳುವ. ಅಂದಹಾಗೇ ಹೃದಯದ ಕಾಳಜಿ ವಹಿಸಲೆಂದೇ ಒಂದು ದಿನವೂ ಇದೆ. ಅದನ್ನು ಪ್ರತಿವರ್ಷ ಸೆ.29ರಂದು ವಿಶ್ವ ಹೃದಯ ದಿನ ಎಂದು ಆಚರಿಸಲಾಗುತ್ತದೆ.

ಪ್ರತಿ ವರ್ಷ ಹೃದಯ ದಿನಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಒಂದು ಘೋಷಣೆ ಕೊಡುತ್ತಿದ್ದು ಈ ವರ್ಷದ ಘೋಷಣೆ- USE HEART, KNOW HEART ಆಗಿದೆ. ಮಾನವನ ಜೀವನದ ಉದ್ದಕ್ಕೂ ಅವಿಶ್ರಾಂತವಾಗಿ ದುಡಿಯುತ್ತ ರಕ್ತವನ್ನು ಪಂಪ್ ಮಾಡುವ ಕೆಲಸವನ್ನು ನಿರಂತರ ಮಾಡುತ್ತಿರುವ ಪುಟ್ಟ ಹೃದಯದ ಬಗ್ಗೆ ನಾವು ತುಂಬಾ ಮಾಹಿತಿ ತಿಳಿದುಕೊಳ್ಳಬೇಕಾದ ಅಗತ್ಯ ಇದೆ.

ಮಿಡಿಯುವ ಪುಟ್ಟ ಹೃದಯ-22 ಮಾಹಿತಿಗಳು

1) ಪ್ರತಿ ವರ್ಷ ಸೆ.29ರಂದು ಹೃದಯದ ದಿನವನ್ನು ವಿಶ್ವ ಆರೋಗ್ಯ ಸಂಸ್ಥೆ ಆಚರಣೆ ಮಾಡುತ್ತಾ ಬಂದಿದೆ. 2000ನೇ ಇಸವಿಯಿಂದ ಇದು ಜಾರಿಯಲ್ಲಿದೆ.

2) ಹೃದಯಾಘಾತವನ್ನು ‘ಜಗತ್ತಿನ ಅತಿ ದೊಡ್ಡ ಕೊಲೆಗಡುಕ’ ಎಂದು ಕರೆಯಲಾಗುತ್ತದೆ. ಏಕೆಂದರೆ ಹೃದಯದ ಆಘಾತ ಮತ್ತು ಹೃದಯದ ಕಾಯಿಲೆಯಿಂದ ಜಗತ್ತಿನಾದ್ಯಂತ ಪ್ರತಿ ವರ್ಷ ಮೃತರಾಗುವ ವ್ಯಕ್ತಿಗಳ ಸಂಖ್ಯೆ 1.7 ಕೋಟಿ. ಅಂದರೆ ಮನುಷ್ಯ ಮರಣದ ಒಟ್ಟು ಪ್ರಮಾಣದ ಶೇ.31 ಭಾಗ ಕೇವಲ ಹೃದಯದ ಸಮಸ್ಯೆಗಳಿಂದ ಉಂಟಾಗುತ್ತಿದೆ.

3) ಮನುಷ್ಯನ ದೇಹದ ಎಲ್ಲ ಭಾಗಗಳೂ ವಿಶ್ರಾಂತಿ ಪಡೆಯುತ್ತವೆ. ಮೆದುಳು ಕೂಡ ವಿಶ್ರಾಂತಿ ಪಡೆಯುತ್ತದೆ. ಆದರೆ ಹೃದಯವು ಒಂದರ್ಧ ಕ್ಷಣ ಕೂಡ ವಿಶ್ರಾಂತಿ ಪಡೆಯುವುದೇ ಇಲ್ಲ. ಮುಷ್ಕರವನ್ನು ಕೂಡ ಮಾಡುವುದಿಲ್ಲ. ಹೃದಯ ಹಗಲು ರಾತ್ರಿ ಏಕರೀತಿಯಲ್ಲಿ ಕೆಲಸ ಮಾಡುತ್ತದೆ.

4) ಇದುವರೆಗೆ ವಿಜ್ಞಾನಿಗಳಿಗೆ ಹೃದಯಾಘಾತಕ್ಕೆ ಸರಿಯಾದ ಕಾರಣವನ್ನು ಸಂಶೋಧನೆ ಮಾಡಲು ಸಾಧ್ಯವೇ ಆಗಲಿಲ್ಲ. ಆನುವಂಶೀಯ ಕಾರಣಗಳು ಇವೆ. ಆದರೆ ಅದಕ್ಕೂ ಪುರಾವೆ ಇಲ್ಲ.

5) ಹೃದಯದ ಭದ್ರತೆಗೆ ನಾಲ್ಕು ರಕ್ಷಣಾ ಕವಚಗಳು ಇವೆ. ಆದರೂ ಮಾನವ ಹೃದಯ ಯಾವಾಗ ಬೇಕಾದರೂ ಸ್ತಬ್ಧ ಆಗಬಹುದು.

6) ಪುರುಷರ ಹೃದಯಕ್ಕಿಂತ ಸ್ತ್ರೀಯರ ಹೃದಯವು ಸ್ವಲ್ಪ ಕಡಿಮೆ ತೂಕ ಇರುತ್ತದೆ. ಆರೋಗ್ಯಪೂರ್ಣ ಪುರುಷರ ಹೃದಯದ ತೂಕ ಸರಾಸರಿ 280-340 ಗ್ರಾಂ ಇದ್ದರೆ ಸ್ತ್ರೀಯರ ಹೃದಯದ ತೂಕವು 230- 280 ಗ್ರಾಂ.

7) ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಹೃದಯಾಘಾತದ ಪ್ರಮಾಣ ಕೊಂಚ ಕಡಿಮೆ ಇದೆ.
(ಮಹಿಳೆಯರಲ್ಲಿ ಹೃದಯವೇ ಇರುವುದಿಲ್ಲ ಎಂದು ಹಾಸ್ಯ ಸಾಹಿತಿ ಬೀಚಿ ಒಮ್ಮೆ ಹೇಳಿದ್ದು ತಮಾಷೆಗೆ ಆಯ್ತಾ!)

8) ಮನುಷ್ಯನ ಹೃದಯಾಘಾತಕ್ಕೆ ಯಾವುದೇ ವಯಸ್ಸಿನ ಸಮೀಕರಣ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ಸಣ್ಣ ಮಕ್ಕಳಲ್ಲಿ ಕೂಡ ಹೃದಯಾಘಾತಗಳು ಹೆಚ್ಚುತ್ತಿವೆ.

9) ವಾಯುಮಾಲಿನ್ಯದ ಕಾರಣಕ್ಕೆ ಹೆಚ್ಚು ಹೃದಯಾಘಾತಗಳು ಸಂಭವಿಸುತ್ತವೆ ಎಂದು ಸಂಶೋಧನೆಗಳು ಹೇಳಿವೆ. ಒಟ್ಟು ಹೃದಯಾಘಾತಗಳಲ್ಲಿ ಶೇ.25 ಆಘಾತಗಳು ವಾಯುಮಾಲಿನ್ಯದ ಕಾರಣಕ್ಕೆ ಆಗುತ್ತಿವೆ.

10) ಆರೋಗ್ಯವಂತ ಮನುಷ್ಯನ ದೇಹದಲ್ಲಿ ಇರುವ ರಕ್ತದ ಪ್ರಮಾಣ ಐದರಿಂದ ಐದೂವರೆ ಲೀಟರ್. ಆದರೆ ಹೃದಯವು ದಿನಕ್ಕೆ 6000-7500 ಲೀಟರ್ ರಕ್ತವನ್ನು ಪಂಪ್ ಮಾಡುತ್ತದೆ ಅಂದರೆ ನಂಬಲೇ ಬೇಕು. ಒಮ್ಮೆ ಎದೆಯ ಬಡಿತ ಉಂಟಾದಾಗ ರಕ್ತವು ನಮ್ಮ ಇಡೀ ದೇಹವನ್ನು ತಲುಪುತ್ತದೆ.

11) ಆರೋಗ್ಯಪೂರ್ಣ ವ್ಯಕ್ತಿಯ ಹೃದಯ ನಿಮಿಷಕ್ಕೆ 60-100 ಬಾರಿ ಲಬ್ ಡಬ್ ಎಂದು ಬಡಿಯುತ್ತದೆ. ನವಜಾತ ಶಿಶುಗಳಲ್ಲಿ ಇದು ಕೊಂಚ ಜಾಸ್ತಿ.

12) ಹೃದಯಕ್ಕೆ ಕನೆಕ್ಟ್ ಆದ ರಕ್ತನಾಳಗಳು ಬ್ಲಾಕ್ ಆಗುವ ಕಾರಣ ಹೆಚ್ಚು ಹೃದಯಾಘಾತಗಳು ಸಂಭವಿಸುತ್ತವೆ. ಅದಕ್ಕೆ ಮುಖ್ಯ ಕಾರಣ ಕೊಲೆಸ್ಟರಾಲ್ ಮತ್ತು ಹೆಚ್ಚು ರಕ್ತದ ಒತ್ತಡ (ಬಿಪಿ).

13) ಏರೋಬಿಕ್ಸ್, ಸೈಕ್ಲಿಂಗ್, ವೇಗವಾಗಿ ನಡೆಯುವುದು, ಓಡುವುದು, ಸ್ವಿಮ್ಮಿಂಗ್, ಬ್ಯಾಡ್ಮಿಟನ್ ಆಡುವುದು ಮತ್ತು ರೋಪ್ ಜಂಪ್ ಇವುಗಳನ್ನು ದಿನವೂ ಮಾಡುವುದರಿಂದ ಹೃದಯದ ಆಯಸ್ಸನ್ನು ಜಾಸ್ತಿ ಮಾಡಬಹುದು.

14) ಸ್ಮೋಕಿಂಗ್ ಮತ್ತು ಡ್ರಿಂಕ್ಸ್ ಮಾಡುವವರಲ್ಲಿ ಹೃದಯಾಘಾತಗಳ ಸಾಧ್ಯತೆ ಹೆಚ್ಚು. ಹೆಚ್ಚು ಒತ್ತಡದಲ್ಲಿ ಕೆಲಸ ಮಾಡುವವರು ಮತ್ತು ವಿಪರೀತ ಬೊಜ್ಜು ಬೆಳೆಸಿಕೊಂಡವರು ಬೇಗ ಹೃದಯದ ಕಾಯಿಲೆಗಳಿಗೆ ಒಳಗಾಗುತ್ತಾರೆ.

15) ಹೆಚ್ಚು ಸಕ್ಕರೆ ಕಾಯಿಲೆ ಇರುವ ವ್ಯಕ್ತಿಗಳಲ್ಲಿ ಹೃದಯಾಘಾತ ಸಾಧ್ಯತೆ ಹೆಚ್ಚು.

16) ಆಹಾರದಲ್ಲಿ ಸೋಡಿಯಂ ಪ್ರಮಾಣ ಕಡಿಮೆ ಮಾಡುವುದರಿಂದ ಹೃದಯದ ಜೋಪಾಸನೆ ಮಾಡಬಹುದು. ಉಪ್ಪು ಕಡಿಮೆ ಬಳಕೆ ಮಾಡುವುದು ಅಗತ್ಯ.

17) ಅನಾರೋಗ್ಯಪೂರ್ಣ ಜೀವನ ಕ್ರಮಗಳಿಂದ ಹೃದಯದ ಸಮಸ್ಯೆಗಳು ಹೆಚ್ಚುತ್ತವೆ. ಜಂಕ್ ಫುಡ್ ಸೇವನೆ ಮತ್ತು ನಿದ್ದೆ ಕಡಿಮೆ ಮಾಡುವುದರಿಂದ ಹೃದಯ ದುರ್ಬಲ ಆಗುತ್ತದೆ.

18) ನಿರಂತರ ಮೆಡಿಕಲ್ ತಪಾಸಣೆ ಮಾಡುವುದು, ಇಸಿಜಿ (ECG) ಮಾಡುವುದು ಮತ್ತು ಬಾಡಿ ಮಾಸ್ ಇಂಡೆಕ್ಸ್ ಅಳತೆ ಮಾಡುವುದರಿಂದ ಹೃದಯದ ಆರೋಗ್ಯವನ್ನು ಪರೀಕ್ಷೆ ಮಾಡಬಹುದು ಮತ್ತು ಹೃದಯವನ್ನು ಕಾಪಾಡಬಹುದು.

19) ಹೃದಯಾಘಾತಗಳು ಉಂಟಾಗುವ ಸಾಕಷ್ಟು ಮೊದಲು ಅದರ ಲಕ್ಷಣಗಳು (Symptoms) ನಮ್ಮ ಗಮನಕ್ಕೆ ಬರುತ್ತವೆ. ಆಗ ತಕ್ಷಣ ಎಚ್ಚರವಾಗಿ ವೈದ್ಯಕೀಯ ನೆರವನ್ನು ಪಡೆದರೆ ಹೃದಯಾಘಾತ ತಡೆಗಟ್ಟಬಹುದು. ಆ ಅವಧಿಯನ್ನು ಗೋಲ್ಡನ್ ಪೀರಿಯಡ್ ಎಂದು ಕರೆಯುತ್ತಾರೆ.

20) ಹೃದಯಕ್ಕೆ ಕನೆಕ್ಟ್ ಆದ ರಕ್ತನಾಳಗಳು ಬ್ಲಾಕ್ ಆಗದ ಹಾಗೆ ನೋಡಿಕೊಳ್ಳುವುದು ತುಂಬಾ ಮುಖ್ಯ. ಅದಕ್ಕೆ ನಿರಂತರ ವೈದ್ಯಕೀಯ ತಪಾಸಣೆ ಅಗತ್ಯ.

21) 1964ರಲ್ಲಿ ಜೇಮ್ಸ್ ಹಾರ್ಡಿ ಎಂಬ ವಿಜ್ಞಾನಿ ಮನುಷ್ಯನ ಹೃದಯವನ್ನು ಬದಲಾಯಿಸಿ ಅದರ ಸ್ಥಳದಲ್ಲಿ ಚಿಂಪಾಂಜಿ ಹೃದಯವನ್ನು ಕಸಿ ಮಾಡಿದ್ದ. ಆದರೆ ಆ ರೋಗಿ ಎರಡು ಘಂಟೆಗಳ ಒಳಗೆ ಮೃತಪಟ್ಟು ಈ ಪ್ರಯೋಗ ವಿಫಲ ಆಯಿತು.

22) 1967ರಲ್ಲಿ ದಕ್ಷಿಣ ಆಫ್ರಿಕಾದ ಒಂದು ಆಸ್ಪತ್ರೆಯಲ್ಲಿ ಒಬ್ಬ ಸರ್ಜನ್ ಕ್ರಿಶ್ಚಿಯನ್ ಬರ್ನಾರ್ಡ್ ರೋಗಿಯ ಅನಾರೋಗ್ಯ ಪೂರ್ಣ ಹೃದಯದ ಜಾಗದಲ್ಲಿ ಇನ್ನೊಂದು ಆರೋಗ್ಯಪೂರ್ಣ ಹೃದಯವನ್ನು ಕಸಿ ಮಾಡಿ ಯಶಸ್ವಿ ಅದನು. ಆ ಶಸ್ತ್ರಚಿಕಿತ್ಸೆಯನ್ನು ಇಂದು ಜಗತ್ತಿನಾದ್ಯಂತ ಸಾವಿರಾರು ಮಂದಿ ಮಾಡಿಕೊಳ್ಳುತ್ತಿದ್ದಾರೆ.

ಭರತ ವಾಕ್ಯ

ಹೃದಯ ಭಾವನೆಗಳ ಉಗಮ ಸ್ಥಾನ ಎಂದು ನಮ್ಮ ಹಿರಿಯರು ನಂಬಿದ್ದರು. ಪ್ರೀತಿಗಾಗಿ ಮಿಡಿಯುವುದು ಅದೇ ಹೃದಯ ಎಂದರು. ಇವೆಲ್ಲವೂ ವೈಜ್ಞಾನಿಕವಾಗಿ ಇನ್ನೂ ಸಾಬೀತು ಆಗಿಲ್ಲ. ಹೃದಯವು ಅತ್ಯಂತ ಸಕ್ಷಮವಾಗಿ ಮತ್ತು ವೇಗವಾಗಿ ಕೆಲಸ ಮಾಡುವ ಮಾಂಸ, ರಕ್ತ ಮತ್ತು ಸ್ನಾಯುಗಳ ಒಂದು ಪ್ರಮುಖ ದೇಹದ ಭಾಗ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದರೆ ಆ ಹೃದಯವನ್ನು ಪ್ರೀತಿ ಮಾಡಿ ಉಳಿಸಿಕೊಳ್ಳುವ ಹೊಣೆ ನಮ್ಮೆಲ್ಲರದು. ಲವ್ ಯುವರ್ ಹಾರ್ಟ್ ಅಂಡ್ ಲಿವ್ ಲಾಂಗ್.







































































error: Content is protected !!
Scroll to Top