ರಾಜಪಥ-ಒಂದೇ ಕುಟುಂಬಕ್ಕೆ ಐದು ನೊಬೆಲ್ ಪ್ರಶಸ್ತಿ

ಅವರೊಬ್ಬರೇ ಎರಡು ನೊಬೆಲ್ ಪಡೆದಿದ್ದರು

ಒಂದು ನೊಬೆಲ್ ಗೆದ್ದರೆ ಅದನ್ನೇ ಮಹಾ ಸಾಧನೆ ಎನ್ನುತ್ತಾರೆ. ಆದರೆ ಒಂದು ಕುಟುಂಬ ಸಾಲು ಸಾಲಾಗಿ ಐದು ನೊಬೆಲ್ ಪ್ರಶಸ್ತಿಗಳನ್ನು ಗೆದ್ದಿತು ಅಂದರೆ ಅದು ಅಳಿಸಲಾಗದ ದಾಖಲೆಯೇ.
ಆ ಕುಟುಂಬದ ಹಿರಿಯರಾದ ಮೇಡಂ ಮೇರಿ ಕ್ಯೂರಿ 1903ರಲ್ಲಿ ಭೌತಶಾಸ್ತ್ರಕ್ಕೆ, 1911ರಲ್ಲಿ ರಸಾಯನ ಶಾಸ್ತ್ರಕ್ಕೆ ಒಟ್ಟು ಎರಡು ನೊಬೆಲ್ ಪ್ರಶಸ್ತಿಗಳನ್ನು ಗೆದ್ದರು. ಆ ಸಾಧನೆ ಮಾಡಿದ ಜಗತ್ತಿನ ಏಕೈಕ ವ್ಯಕ್ತಿ ಮೇರಿ ಕ್ಯೂರಿ.
ಮುಂದೆ 1935ರಲ್ಲಿ ಅವರ ಹಿರಿಯ ಮಗಳಾದ ಐರೀನ್ ಮತ್ತು ಅಳಿಯ ಫ್ರೆಡ್ರಿಕ್ ಜೊಲಿಯೆಟ್ ಅವರು ರಸಾಯನ ಶಾಸ್ತ್ರದಲ್ಲಿ ನೊಬೆಲ್ ಗೆದ್ದರು. 1965ರಲ್ಲಿ ಮೇರಿ ಕ್ಯೂರಿಯ ಎರಡನೇ ಅಳಿಯ ಹೆನ್ರಿ ಲೇಬೌಸಿ ವಿಶ್ವಶಾಂತಿಯ ಮುಖ್ಯ ವಿಭಾಗದಲ್ಲಿ ನೊಬೆಲ್ ಗೆದ್ದಾಗ ಈ ಅಸಾಮಾನ್ಯ ದಾಖಲೆ ಸೃಷ್ಟಿ ಆಗಿತ್ತು. ಒಟ್ಟು ಐದು ನೊಬೆಲ್ ಪ್ರಶಸ್ತಿಗಳು ಒಂದೇ ಕುಟುಂಬಕ್ಕೆ ಎಂದರೆ ಮುಂದೆ ಕೂಡ ಈ ದಾಖಲೆ ಯಾರೂ ಮುರಿಯಲು ಸಾಧ್ಯವೇ ಇಲ್ಲ.

ಜಗತ್ತಿನಲ್ಲಿ ಈವರೆಗೆ ಕೇವಲ ಮೂವರು ಸಾಧಕರು ಮಾತ್ರ ಎರಡೆರಡು ನೊಬೆಲ್ ಗೆದ್ದವರು ಇದ್ದಾರೆ. ಅವರೆಂದರೆ ಮೇರಿ ಕ್ಯೂರಿ, ಜಾನ್ ಬಾರ್ಡಿನ್ ಮತ್ತು ಫ್ರೆಡ್ರಿಕ್ ಸ್ಯಾಂಗರ್. ಅದರಲ್ಲಿ ಎರಡೆರಡು ವಿಭಾಗಗಳಲ್ಲಿ ನೊಬೆಲ್ ಗೆದ್ದವರು ಮೇರಿ ಕ್ಯೂರಿ ಮಾತ್ರ.

ವಿದ್ಯಾರ್ಥಿ ಆಗಿದ್ದಾಗಲೆ ಏನನ್ನಾದರೂ ಸಂಶೋಧನೆಯನ್ನು ಮಾಡಬೇಕು ಎಂದು ಆಸೆಪಟ್ಟು ವಿಜ್ಞಾನವನ್ನು ಕಲಿತವರು ಮೇರಿ ಕ್ಯೂರಿ. ಆಕೆಯ ತಂದೆ ಪೋಲೆಂಡ್‌ನಲ್ಲಿ ಪ್ರೊಫೆಸರ್ ಆಗಿದ್ದವರು. ಆದರೆ ಆ ದೇಶದಲ್ಲಿ ಹೆಣ್ಣು ಮಕ್ಕಳು ಆಗ ಕಾಲೇಜಿಗೆ ಹೋಗಲು ಅನುಮತಿ ಇರಲಿಲ್ಲ. ಆ ಕಾರಣ ಅವರು ದೇಶವನ್ನು ಬದಲಾಯಿಸಿ ಫ್ರಾನ್ಸಿಗೆ ಬಂದರು. ಅಲ್ಲಿ ಅವರಿಗೆ ನೂರಾರು ಅಪಮಾನಗಳು ಮತ್ತು ನಿರಾಸೆಗಳು ಎದುರಾದವು. ಆದರೆ ತನ್ನ ಸಂಕಲ್ಪ ಶಕ್ತಿಯ ಮೂಲಕ ಎಲ್ಲವನ್ನೂ ಗೆದ್ದವರು ಮೇರಿ ಕ್ಯೂರಿ.

ಜೀವನಪೂರ್ತಿ ವಿದ್ಯಾರ್ಥಿ ಆಗಿ, ಸಂಶೋಧಕಿ ಆಗಿ, ಒಂದು ಸಂಸ್ಥೆಯ ನಿರ್ದೇಶಕಿ ಕೂಡ ಆಗಿ ಅವರು ಮಾಡಿದ್ದು ಸಂಶೋಧನೆ, ಸಂಶೋಧನೆ ಮತ್ತು ಸಂಶೋಧನೆ ಮಾತ್ರ. ಆಕೆ ವಿಶ್ರಾಂತಿ ಪಡೆದದ್ದು ಮರಣದ ನಂತರವೇ ಎಂದು ಹೇಳಬಹುದು.

ವಿಕಿರಣ ವಿಜ್ಞಾನ ಇಂದು ಭಾರಿ ಮುಂದುವರಿದ ಕ್ಷೇತ್ರ ಆಗಿದೆ. ಕೆಲವು ಭಾರವಾದ ಮೂಲವಸ್ತುಗಳು ಸ್ವಯಂ ಆಗಿ ಪ್ರಖರ ವಿಕಿರಣಗಳನ್ನು ಹೊರಸೂಸುತ್ತವೆ ಎಂದು ಜಗತ್ತಿಗೆ ಮೊದಲು ತೋರಿಸಿದವರು ಮೇರಿ ಕ್ಯೂರಿ. ಅದಕ್ಕೆ ಅವರೇ ವಿಕಿರಣಶೀಲತೆ (ರೇಡಿಯೋಆಕ್ಟಿವಿಟಿ) ಎಂದು ನಾಮಕರಣ ಮಾಡಿದರು. ಆಗ ಅವರಿಗೆ ಸಾಥ್ ಕೊಟ್ಟ ಇನ್ನೊಬ್ಬ ವಿಜ್ಞಾನಿ ಎಂದರೆ ಹೆನ್ರಿ ಬೇಕ್ವಿರಲ್. ಮುಂದೆ ಅವರು ಕೂಡ ಮೇರಿ ಕ್ಯೂರಿ ಜೊತೆ ನೋಬೆಲ್ ಪ್ರಶಸ್ತಿ ಗೆದ್ದರು.

ಪಿಚ್ ಬ್ಲೆಂಡ್ ಎಂಬ ಅದಿರಿನಲ್ಲಿ ಸುಮಾರು 35 ಮೂಲ ವಸ್ತುಗಳಿವೆ. ಅವುಗಳಲ್ಲಿ ವಿಕಿರಣಶೀಲ ರೇಡಿಯಂ ಕೂಡ ಒಂದು. ಆದರೆ ಅದರ ಪ್ರಮಾಣ ತುಂಬಾ ತುಂಬಾ ಚಿಕ್ಕದು. ಎಂಟು ಟನ್ ಪಿಚ್ ಬ್ಲೆಂಡ ಅದಿರನ್ನು ಕರಗಿಸಿದಾಗ ನಮಗೆ ಅದರಲ್ಲಿ ಕೇವಲ ಒಂದು ಗ್ರಾಮನಷ್ಟು ರೇಡಿಯಂ ದೊರೆಯುತ್ತದೆ.

ಪಿಚ್ ಬ್ಲೆಂಡ್‌ನಿಂದ ರೇಡಿಯಂ ಲೋಹವನ್ನು ಸಂಶ್ಲೇಷಣೆ ಮಾಡುವುದು ಸುಲಭದ ಮಾತಲ್ಲ. ಅದು ಒಂದು ಮಹಾ ಯುದ್ಧವನ್ನು ಗೆಲ್ಲುವುದ್ದಕ್ಕೆ ಸಮ. ಅದರ ಜೊತೆಗೆ ಅತ್ಯಂತ ಅಪಾಯಕಾರಿ ಕೂಡ ಹೌದು. ವಿಕಿರಣಗಳಿಗೆ ನಮ್ಮ ದೇಹ ಎಕ್ಸಪೋಸ್ ಆದರೆ ಅದು ಮರಣಾಂತಿಕ. ಆದರೆ ಜಗತ್ತಿನ ಕ್ಷೇಮಕ್ಕೆ ಹೊರಟವರಿಗೆ ಆ ಅಪಾಯಗಳು ಯಾವ ಲೆಕ್ಕ ಹೇಳಿ?

ಹಾಗೆ ವರ್ಷಾನುಗಟ್ಟಲೆ ಹೋರಾಟ ಮಾಡಿ ರೇಡಿಯಮನ್ನು ಸಂಶೋಧನೆ ಮಾಡಿದ್ದು ಮೇರಿ ಕ್ಯೂರಿ. ಮುಂದೆ ಅವರು ಪೊಲೊನಿಯಮ್ ಎಂಬ ಇನ್ನೊಂದು ವಿಕಿರಣಶೀಲ ಧಾತು ಕೂಡ ಕಂಡು ಹಿಡಿದರು. ಅದನ್ನು ತನ್ನ ಹುಟ್ಟಿದ ದೇಶವಾದ ಪೋಲೆಂಡ್‌ಗೆ ಸಮರ್ಪಣೆ ಮಾಡಿದರು.

ಸಂಶೋಧನೆ ಅಪಾರವಾದರೂ ಪ್ರಚಾರದ ಹಂಗಿಲ್ಲ. ಅವರ ಸಂದರ್ಶನವನ್ನು ಬಯಸಿ ಬಂದ ವರದಿಗಾರನಿಗೆ ಅವರು ಸಂದರ್ಶನ ನಿರಾಕರಿಸಿದರು. ಅದಕ್ಕೆ ಅವರು ಕೊಟ್ಟ ಕಾರಣ, ವಿಜ್ಞಾನದಲ್ಲಿ ವ್ಯಕ್ತಿ ಮುಖ್ಯ ಅಲ್ಲ. ಸಂಗತಿ ಮಾತ್ರ ಮುಖ್ಯ.

ಅವರು ರೇಡಿಯಂ ಸಂಶೋಧನೆ ಮಾಡಿದಾಗ ಅದನ್ನು ಪೇಟೆಂಟ್ ಮಾಡಲು ತುಂಬಾ ಜನರು ಒತ್ತಾಯಿಸಿದರು. ಆದರೆ ಮೇರಿ ಕ್ಯೂರಿ ಹೇಳಿದ್ದು ಒಂದೇ ಮಾತು, ವಿಜ್ಞಾನ ಎಲ್ಲರಿಗೂ ಸೇರಿದ್ದು, ಅದಕ್ಕೆ ಪೇಟೆಂಟ್ ಪಡೆಯಲಾರೆ.

ಹೀಗೆ ಮಾಡುವುದರಿಂದ ತುಂಬಾ ಶ್ರೀಮಂತರಾಗುವ ಅವಕಾಶವನ್ನು ಅವರೇ ನಿರಾಕರಿಸಿದರು. ತನ್ನ ವಿಜ್ಞಾನದ ಸಂಶೋಧನೆಯ ಮೂಲಕ ಬಂದ ರಾಶಿ ರಾಶಿ ದುಡ್ಡನ್ನು ಅವರು ತನ್ನ ಸ್ವಂತಕ್ಕೆ ಉಪಯೋಗ ಮಾಡದೆ ಕೇವಲ ಸಂಶೋಧನೆಗೆ ಬಳಸಿದರು.

ಮೊದಲನೇ ಮಹಾಯುದ್ಧದ ಕಾಲದಲ್ಲಿ ಗಾಯಗೊಂಡಿದ್ದ ಸೈನಿಕರಿಗೆ ಚಿಕಿತ್ಸೆ ನೀಡಲು ಅವರೇ ಮುಂದೆ ನಿಂತು ತನ್ನ ಸಂಶೋಧನೆಯನ್ನು ಬಳಸಿದರು. ಮೊದಲ ಮಹಾಯುದ್ಧದ ಸಂಕಷ್ಟದ ಸಂದರ್ಭದಲ್ಲಿ ಮೇರಿ ಕ್ಯೂರಿ ತಾನು ಆವಿಷ್ಕಾರ ಮಾಡಿದ ಎಕ್ಸ್‌ರೇ ಉಪಕರಣ ಹೊಂದಿದ್ದ ಆಂಬುಲೆನ್ಸ್ ಘಟಕಗಳ ಮೂಲಕ ಸಾವಿರಾರು ಸೈನಿಕರ ಪ್ರಾಣಗಳನ್ನು ಉಳಿಸಿದರು.

ಮೇರಿ ಕ್ಯೂರಿ ಬಗ್ಗೆ ಬರೆಯುವಾಗ ಆಕೆಯ ಪ್ರೇರಣಾ ಶಕ್ತಿ ಅವರ ಗಂಡ ಪಿಯರಿ ಕ್ಯೂರಿ ಬಗ್ಗೆ ಒಂದೆರಡು ವಾಕ್ಯವನ್ನು ಬರೆಯಲೇ ಬೇಕು. ಅವರು ಕೂಡ ಸಂಶೋಧಕರು ಮತ್ತು ಪ್ರೊಫೆಸರ್ ಆಗಿದ್ದವರು. ಮೇರಿ ಕ್ಯೂರಿ ಮಾಡಿದ ಎಲ್ಲ ಸಂಶೋಧನೆಯ ಕೆಲಸಗಳಿಗೆ ಅತಿ ದೊಡ್ಡ ಬೆಂಬಲಿಗರು ಅಂದರೆ ಅವರೇ. ಆದರೆ ಕೇವಲ 47ನೆಯ ವಯಸ್ಸಿಗೆ ಪಿಯರಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದಾಗ ಮೇರಿ ಕ್ಯೂರಿ ಒಬ್ಬಂಟಿ ಆಗಿಬಿಟ್ಟರು. ಮುಂದಿನ ಬದುಕು ಪೂರ್ತಿ ಅವರು ಅಂತರ್ಮುಖಿ ಆಗಿಯೇ ಕಳೆದರು.

ಮೇರಿ ಕ್ಯೂರಿ ಅವರೇ ಸಂಶೋಧನೆ ಮಾಡಿದ ರೇಡಿಯಂ ಮತ್ತು ಪೊಲೊನಿಯಮ್ ವಿಕಿರಣಕ್ಕೆ ಒಡ್ಡಿಕೊಂಡ ಅವರ ದೇಹವು ಮುಂದೆ ಮರಣಾಂತಿಕ ಕಾಯಿಲೆಗಳಿಗೆ ಮನೆಯಾಯಿತು. ಅವರ ಅಂತ್ಯವು ಅತ್ಯಂತ ದಾರುಣವೇ ಆಗಿತ್ತು. ಆಗಲೇ ಅವರು ಸೆಲೆಬ್ರಿಟಿ ಆಗಿದ್ದ ಕಾರಣ ಅವರು ತನ್ನ ಹೆಸರನ್ನು ಬದಲಾವಣೆ ಮಾಡಿಕೊಂಡು ಆಸ್ಪತ್ರೆಗಳಿಗೆ ಅಡ್ಮಿಟ್ ಆಗುತ್ತಿದ್ದರು. ಆಸ್ಪತ್ರೆಗಳಲ್ಲಿ ವರ್ಷಾನುಗಟ್ಟಲೆ ನರಳಿದರು. ಅತಿಯಾದ ನೋವು ಅವರನ್ನು ಹಿಂಡಿ ಹಿಪ್ಪೆ ಮಾಡಿತ್ತು.

1934ರ ಜುಲೈ 4ರಂದು ಮೇರಿ ಕ್ಯೂರಿ ತನ್ನ ಇಹಲೋಕದ ವ್ಯಾಪಾರ ಮುಗಿಸಿದರು. ಅವರು ಬದುಕಿದ್ದದ್ದು ಕೇವಲ 66 ವರ್ಷ. ಆದರೆ ಸಾಧನೆ ಮಾಡಿದ್ದು ಸಾವಿರ ವರ್ಷಗಳದ್ದು.
ತನ್ನ ಸಂಪೂರ್ಣ ಜೀವನವನ್ನು ಮಾನವೀಯತೆಗೆ ಮತ್ತು ವಿಜ್ಞಾನಕ್ಕೆ ಮುಡಿಪಾಗಿಟ್ಟ ಮಹಾ ವಿಜ್ಞಾನಿ ತಾನೇ ಸಂಶೋಧನೆ ಮಾಡಿದ ವಿಕಿರಣಗಳಿಗೆ ತನ್ನ ದೇಹವನ್ನು ಒಡ್ಡಿಕೊಂಡು ಪ್ರಾಣ ಕಳೆದುಕೊಂಡದ್ದು ನಮಗೆ ಕಣ್ಣೀರು ತರಿಸುವ ದುರಂತ.
ಮೇರಿ ಕ್ಯೂರಿ ಅಜರಾಮರ ಮತ್ತು ಅನುಕರಣೀಯ!







































































error: Content is protected !!
Scroll to Top