ಕಾರು ಚಾಲಕನ ಖಾತೆಗೆ 9 ಸಾವಿರ ಕೋ.ರೂ. ಜಮೆ

ಎಡವಟ್ಟು ಮಾಡಿ ಫಜೀತಿ ಅನುಭವಿಸಿದ ಬ್ಯಾಂಕ್‌

ಚೆನ್ನೈ : ಕಾರು ಚಾಲಕರೊಬ್ಬರ ಖಾತೆಗೆ ಒಂದೆರಡು ಕೋಟಿಯಲ್ಲ, ಬರೋಬ್ಬರಿ 9000 ಕೋ. ರೂ. ಜಮೆ ಮಾಡಿ ಬ್ಯಾಂಕ್‌ ಇನ್ನಿಲ್ಲದ ಫಜೀತಿ ಅನುಭವಿಸಿತು. ಇದು ನಡೆದಿರುವುದು ತಮಿಳುನಾಡಿನ ಪಳನಿ ನೇಯ್ಕಾರಪಟ್ಟಿ ಎಂಬಲ್ಲಿ.
ಸೆ.9ರಂದು ಮಧ್ಯಾಹ್ನ 3 ಗಂಟೆಯ ಸಮಯ. ಊಟ ಮಾಡಿಕೊಂಡು ವಿಶ್ರಾಂತಿ ಪಡೆಯೋಣ ಎಂದು ಮಲಗಿದ್ದೆ. ಆಗ ನನ್ನ ಮೊಬೈಲ್‌ಗೆ ಒಂದು ಮೆಸೇಜ್ ಬಂತು. ನಾನು ಅದನ್ನು ನಿದ್ದೆ ಮಬ್ಬಿನಲ್ಲಿ ನೋಡಿದೆ. ಆ ಮೆಸೇಜ್ ನೋಡಿ ನನಗೆ ಶಾಕ್ ಆಯ್ತು. ಯಾಕೆಂದರೆ ನನಗೆ ಅಕೌಂಟ್‌ಗೆ ಒಂದಲ್ಲಾ ಎರಡಲ್ಲ ಬರೋಬ್ಬರಿ 9,000 ಕೋಟಿ ರೂ.ಜಮೆಯಾಗಿತ್ತು ಎಂದಿದ್ದಾರೆ ಹಣ ಪಡೆದ ಚಾಲಕ ರಾಜ್‌ಕುಮಾರ್.
ನೇಯ್ಕಾರಪಟ್ಟಿಯ ಬಾಡಿಗೆ ಕಾರು ಚಾಲಕ ರಾಜ್‌ಕುಮಾರ್ ಅವರು ಕಾರಿನಲ್ಲಿ ಮಲಗಿದ್ದಾಗ ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್‌ನಿಂದ ಮಧ್ಯಾಹ್ನ 3 ಗಂಟೆ ಸುಮಾರಿಗೆ ಅವರ ಬ್ಯಾಂಕ್ ಖಾತೆಗೆ 9,000 ಕೋಟಿ ರೂಪಾಯಿ ಜಮೆಯಾಗಿದೆ ಎಂದು ದೃಢೀಕರಿಸುವ ಸಂದೇಶ ಬಂದಿದೆ. ಆಶ್ಚರ್ಯಚಕಿತರಾದ ರಾಜಕುಮಾರ್ ಮೊದಲು ಯಾರೋ ತನ್ನೊಂದಿಗೆ ತಮಾಷೆ ಆಡುತ್ತಿದ್ದಾರೆ ಎಂದು ಭಾವಿಸಿದರು. ಹಣ ಜಮೆಯಾಗಿರುವುದನ್ನು ದೃಢಪಡಿಸಲು ಖಾತೆಯಲ್ಲಿ ಬರೀ 15 ರೂ. ಹೊಂದಿದ್ದ ರಾಜಕುಮಾರ್ 21,000 ರೂ. ಸ್ನೇಹಿತನಿಗೆ ಕಳುಹಿಸಿದರು. ಹಣ ಯಶಸ್ವಿಯಾಗಿ ಅವರ ಸ್ನೇಹಿತನ ಖಾತೆಗೆ ವರ್ಗಾವಣೆಯಾಯಿತು. ಇದರಿಂದ ರಾಜಕುಮಾರ್ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಅವರ ಖಾತೆಗೆ 9,000 ಕೋಟಿ ರೂ. ಜಮೆಯಾಗಿದ್ದು ನಿಜವಾಗಿತ್ತು. ಆದರೆ ಸ್ವಲ್ಪ ಹೊತ್ತಿನಲ್ಲೇ ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್‌ನ ಪ್ರಧಾನ ಕಚೇರಿ ಇರುವ ತೂತುಕುಡಿಯಿಂದ ರಾಜ್‌ಕುಮಾರ್‌ಗೆ ದೂರವಾಣಿ ಕರೆ ಬಂದಿದೆ. ಫೋನ್‌ ಮಾಡಿದವರು ರಾಜ್‌ಕುಮಾರ್ ಅವರ ಖಾತೆಗೆ ತಪ್ಪಾಗಿ 9,000 ಕೋಟಿ ರೂ. ಜಮೆಯಾಗಿದೆ, ಹಣವನ್ನು ಖರ್ಚು ಮಾಡಬೇಡಿ ಎಂದು ಹೇಳಿದರು.
ವರ್ಗಾವಣೆಯಾದ ಮೊತ್ತಕ್ಕಾಗಿ ಬ್ಯಾಂಕ್ ಆಡಳಿತ ಮಂಡಳಿ ರಾಜ್‌ಕುಮಾರ್‌ಗೆ ಬೆದರಿಕೆ ಹಾಕಲು ಪ್ರಾರಂಭಿಸಿತು. ರಾಜ್‌ಕುಮಾರ್ ತನ್ನ ಜೀವಕ್ಕೆ ಅಪಾಯವಿದೆ ಎಂದು ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಬಳಿಕ ಪೊಲೀಸರ ಮಧ್ಯಸ್ಥಿಕೆಯಲ್ಲಿ ಚೆನ್ನೈನ ತ್ಯಾಗರಾಯನಗರದಲ್ಲಿರುವ ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್‌ನ ವಕೀಲರು ಮತ್ತು ಚಾಲಕ ರಾಜಕುಮಾರ್ ನಡುವೆ ಸಂಧಾನ ನಡೆಯಿತು. ಕೊನೆಗೆ 21,000 ರೂ.ಯನ್ನುಬ್ಯಾಂಕ್‌ ಅವರಿಗೆ ಸಾಲವಾಗಿ ನೀಡಿ ಉಳಿದ ಹಣವನ್ನು ಹಿಂಪಡೆದುಕೊಂಡಿತು. ಹೀಗೆ ಕಾರು ಚಾಲಕನೊಬ್ಬ ಕೆಲವು ತಾಸುಗಳ ಮಟ್ಟಿಗೆ ಸಾವಿರಾರು ಕೋಟಿಗಳ ಒಡೆಯನಾದ ಸುದ್ದಿ ಭಾರಿ ಚರ್ಚೆಗೀಡಾಗಿದೆ.error: Content is protected !!
Scroll to Top