ನಿತ್ಯ 5000 ಕ್ಯೂಸೆಕ್ ನೀರು ಬಿಡಲೇ ಬೇಕು ಎಂದ ಸರ್ವೋಚ್ಚ ನ್ಯಾಯಾಲಯ
ರಾಜ್ಯಕ್ಕೆ ಬರದ ಮೇಲೊಂದು ಬರೆ
ಹೊಸದಿಲ್ಲಿ : ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟಿನಲ್ಲೂ ಕರ್ನಾಟಕಕ್ಕೆ ಸೋಲಾಗಿದೆ. ತಮಿಳುನಾಡಿಗೆ ಕೆಆರ್ಎಸ್ನಿಂದ 5000 ಕ್ಯೂಸೆಕ್ ನೀರು ಹರಿಸಬೇಕೆಂದು ಸುಪ್ರೀಂ ಕೋರ್ಟ್ ಇಂದು ಆದೇಶ ಹೊರಡಿಸಿದೆ. ಕಾವೇರಿ ಪ್ರಾಧಿಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದ್ದು, ಮುಂದಿನ 15 ದಿನಗಳ ಕಾಲ ಪ್ರತಿದಿನ ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಹರಿಸಲು ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ ಆದೇಶ ಹೊರಡಿಸಿದೆ. ಇದರೊಂದಿಗೆ ಕಾವೇರಿ ನಿಯಂತ್ರಣ ಆಯೋಗ ಮತ್ತು ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶಗಳನ್ನು ಎತ್ತಿಹಿಡಿದೆ. ಈ ತೀರ್ಪು ಬರ ಪರಿಸ್ಥಿತಿ ನಡುವೆ ಕರ್ನಾಟಕಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಾವೇರಿ ನಿಯಂತ್ರಣ ಆಯೋಗ ಮತ್ತು ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶಗಳು ಮತ್ತು ಶಿಫಾರಸುಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಲಾಗುವುದಿಲ್ಲ. ಎರಡು ಸಮಿತಿಗಳ ಆದೇಶವನ್ನು ಒಪ್ಪಬೇಕಾಗುತ್ತೆ. ಎರಡು ಸಮಿತಿಗಳ ಆದೇಶವನ್ನು ಕರ್ನಾಟಕ ಪಾಲಿಸಬೇಕು, ಹೀಗಾಗಿ ಕರ್ನಾಟಕ ನೀರು ಹರಿಸಲೇಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಕರ್ನಾಟಕದಲ್ಲಿ ಈ ಬಾರಿ ತೀವ್ರ ಮಳೆ ಅಭಾವದ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ಆದರೂ ತಮಿಳುನಾಡು ನಮಗೆ ಸಾಮಾನ್ಯ ವರ್ಷಗಳಂತೆ ನೀರು ಹರಿಸುವಂತೆ ಪಟ್ಟು ಹಿಡಿದಿದ್ದು, ಈ ಬಗ್ಗೆ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದವು. ಇಂದು ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಕೋರ್ಟ್, ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ 5000 ಕ್ಯೂಸೆಕ್ಸ್ ನೀಡು ಬಿಡುವಂತೆ ಆದೇಶ ಹೊರಡಿಸಿದೆ. ಇದಾದ ನಂತರ ನೀರಿನ ಲಭ್ಯತೆಯ ವಾಸ್ತವಾಂಶವನ್ನು ನೋಡಿಕೊಂಡು ಮುಂದಿನ ತೀರ್ಮಾನಗಳನ್ನು ಕೈಗೊಳ್ಳಲಾಗುವುದು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು 15 ದಿನಗಳಿಗೊಮ್ಮೆ ಸಭೆಯನ್ನು ಮಾಡಬೇಕು. ಎರಡೂ ರಾಜ್ಯಗಳು ಪ್ರಾಧಿಕಾರದ ಆದೇಶವನ್ನು ಪಾಲಿಸಬೇಕು ಎಂದು ನ್ಯಾಯಮೂರ್ತಿ ಗವಾಯಿ ಆದೇಶದಲ್ಲಿ ಸೂಚಿಸಿದ್ದಾರೆ.