ಚೈತ್ರಾ ವಂಚನೆ ಪ್ರಕರಣದಲ್ಲಿ ತೇಜೋವಧೆ : ಸಾಲುಮರದ ತಿಮ್ಮಕ್ಕ ದೂರು

ಪ್ರಕರಣಕ್ಕೆ ಸಂಬಂಧ ಇಲ್ಲದಿದ್ದರೂ ತನ್ನ ಹೆಸರು ಬಳಕೆ ಎಂದು ಆರೋಪ

ಬೆಂಗಳೂರು : ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ನಂಬಿಸಿ 7 ಕೋಟಿ ರೂ. ವಂಚಿಸಿದ ಪ್ರಕರಣದಲ್ಲಿ ಅನಗತ್ಯವಾಗಿ ತನ್ನ ಹೆಸರನ್ನು ಉಲ್ಲೇಖಿಸಲಾಗುತ್ತದೆ ಎಂದು ಆರೋಪಿಸಿ ಸಾಲುಮರದ ತಿಮ್ಮಕ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಿ ತೇಜೋವಧೆ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಅವರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಖುದ್ದು ತಿಮ್ಮಕ್ಕ ಅವರಿಂದ ಆಯುಕ್ತರ ಪರವಾಗಿ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಎಸಿಪಿ ವೇಣುಗೋಪಾಲ್ ಮನವಿ ಸ್ವೀಕರಿಸಿದರು. ಈ ವಂಚನೆ ಕೃತ್ಯಕ್ಕೂ ನನಗೆ ಹಾಗೂ ನನ್ನ ಮಗ ಉಮೇಶ್‌ಗೆ ಯಾವುದೇ ಸಂಬಂಧವಿಲ್ಲ. ಹೀಗಿದ್ದರೂ ಆ ಪ್ರಕರಣಕ್ಕೂ ನನ್ನ ಹಾಗೂ ನನ್ನ ಮಗನಿಗೂ ಸಂಬಂಧ ಇದೆ ಎಂದು ಅವಹೇಳನ ಮಾಡುತ್ತಿರುವುದು ಮನಸ್ಸಿಗೆ ನೋವುಂಟಾಗಿದೆ ಎಂದು ತಿಮ್ಮಕ್ಕ ನುಡಿದಿದ್ದಾರೆ. ಪರಿಸರ ಸಂರಕ್ಷಣೆಗೆ ನಮ್ಮ ಜೀವನ ಮುಡುಪಾಗಿಟ್ಟಿದ್ದೇವೆ. ಯಾರಿಗೂ ಮೋಸ ಮಾಡಿಲ್ಲ. ಸರ್ಕಾರದ ಸವಲತ್ತು ಸಹ ದುರ್ಬಳಕೆ ಮಾಡಿಕೊಂಡಿಲ್ಲ. ನಮ್ಮ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ನಡುವೆ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಾಲಶ್ರೀ ಮಠದಲ್ಲಿ ಅಪರಿಚಿತ ವ್ಯಕ್ತಿ ₹56 ಲಕ್ಷ ಹಣದ ಬ್ಯಾಗ್‌ ಇಟ್ಟುಹೋಗಿದ್ದಾನೆಂದು ತಿಳಿದುಬಂದಿದೆ. ಈ ಕುರಿತು ವಿಡಿಯೋ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ಅಪರಿಚಿತ ವ್ಯಕ್ತಿ ಮಾತನಾಡಿ, ಈ ಪ್ರಕರಣದ ಆರೋಪಿಯಾಗಿರುವ ಅಭಿನವ ಹಾಲವೀರಪ್ಪಜ್ಜ ಸ್ವಾಮೀಜಿ ಅವರು ಮೈಸೂರಿನಲ್ಲಿ ಅವರ ಕಾರು ಚಾಲಕನ ಮೂಲಕ ₹60 ಲಕ್ಷ ನೀಡಿದ್ದರು. ಇದರಲ್ಲಿ ಕೇಸು ನಡೆಸುವ ವಕೀಲರಿಗೆ ₹4 ಲಕ್ಷ ಹಣ ನೀಡಲು ಕಾರು ಚಾಲಕ ತೆಗೆದುಕೊಂಡಿದ್ದು, ಉಳಿದ ₹56 ಲಕ್ಷವನ್ನು ಶ್ರೀಮಠಕ್ಕೆ ಅರ್ಪಿಸಲು ಹೊರಟಿದ್ದೇನೆಂದು ಹಾಗೂ ಮಠದಲ್ಲಿನ ಪಲ್ಲಕ್ಕಿಯಲ್ಲಿ ಹಣ ಇಟ್ಟಿದ್ದೇನೆ ಎಂದು ಅಪರಿಚಿತ ವ್ಯಕ್ತಿ ಮಾತನಾಡಿರುವ ವೀಡಿಯೋ ವೈರಲ್‌ ಆಗಿದೆ. 56 ಲಕ್ಷ ಹಣವನ್ನು ಹಾಲಸ್ವಾಮಿ ಮಠಕ್ಕೆ ಬಂದು ನೀಡುತ್ತಿರುವುದಾಗಿ ಅಪರಿಚಿತ ವ್ಯಕ್ತಿ ಹೇಳಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.error: Content is protected !!
Scroll to Top