ಖಲಿಸ್ಥಾನಿ ಉಗ್ರ ನಿಜ್ಜರ್ ಹತ್ಯೆ ನೆಪದಲ್ಲಿ ಭಾರತೀಯರ ಮೇಲೆ ಹಲ್ಲೆಯಾಗುವ ಸಾಧ್ಯತೆ
ಹೊಸದಿಲ್ಲಿ : ಖಲಿಸ್ಥಾನಿ ಹೋರಾಟಗಾರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಹದಗೆಡುವಂತೆ ಮಾಡಿದ್ದು, ಕೆನಡದಲ್ಲಿರುವ ಸಿಕ್ಖರು ಭಾರತೀಯರ ವಿರುದ್ಧ ದ್ವೇ಼ಷ ಸಾದಿಸುವ ಎಚ್ಚರಿಕೆ ನೀಡಿದ ಬಳಿಕ ಆತಂಕ ನೆಲೆಸಿದೆ. ಎರಡು ದೇಶಗಳ ನಡುವೆ ರಾಜತಾಂತ್ರಿಕ ಸಂಘರ್ಷ ತೀವ್ರಗೊಮಡಿದ್ದು, ಭಾರತಕ್ಕೆ ಪ್ರವಾಸ ಬಂದಿರುವ ಕೆನಡಾ ಪ್ರಜೆಗಳಿಗೆ ಅಲ್ಲಿನ ಸರಕಾರ ಮುನ್ನೆಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ ಭಾರತವೂ ಕೆನಡಾದಲ್ಲಿ ನೆಲೆಸಿರುವ ಭಾರತೀಯರಿಗೆ ಎಚ್ಚರಿಕೆಯಿಂದಿರಲು ಸೂಚಿಸಿದೆ.
ಕೆನಡಾ ಸರಕಾರವೇ ಖಲಿಸ್ಥಾನಿ ಹೋರಾಟಗಾರರಿಗೆ ಬಹಿರಂಗ ಬೆಂಬಲ ನೀಡುತ್ತಿದೆ. ಸಂಸತ್ತಿನಲ್ಲಿ ಸಿಕ್ಖ್ ಮೂಲದ ಸಂಸದರೊಬ್ಬರು ನಿಜ್ಜರ್ ಹತ್ಯೆಗೆ ಪ್ರತೀಕಾರ ತೀರುಸುತ್ತೇವೆ ಎಂದು ಘೋಷಿಸಿದ ಬಳಿಕ ಉಭಯ ದೇಶಗಳ ನಡುವೆ ಬಿಗುವಿನ ವಾತಾವರಣ ನೆಲೆಸಿದೆ. ಇದು ಕೆನಡದಲ್ಲಿರುವ ಲಕ್ಷಾಂತರ ಭಾರತೀಯರ ಆತಂಕಕ್ಕೆ ಕಾರಣವಾಗಿದೆ. ಹಿಂಸಾಚಾರ ಪ್ರಾರಂಭವಾದರೆ ಅಥವಾ ಕೆನಡಾ ಸರಕಾರ ಭಾರತೀಯರನ್ನು ಒಕ್ಕಲೆಬ್ಬಿಸಲು ಮುಂದಾದರೆ ಪರಿಸ್ಥಿತಿ ತೀರಾ ಹದಗೆಡುವ ಸಾಧ್ಯತೆಯಿದೆ.
ಕೆನಡಾದಲ್ಲಿ ಭಾರತದ ವಿರುದ್ದದ ಚಟುವಟಿಕೆಗಳು ಮತ್ತು ಹೇಳಿಕೆಗಳ ಬಳಿಕ ರಾಜಕೀಯ ಪ್ರೇರಿತ ಅಪರಾಧ ಚಟುವಟಿಕೆಗಳು ಹೆಚ್ಚಳವಾಗಬಹುದು. ಭಾರತೀಯರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಅದರಲ್ಲೂ ಕೆನಡಾಕ್ಕೆ ಪ್ರವಾಸ ಹೋಗುವವರೂ ಜಾಗೃತರಾಗಿರಬೇಕು ಎನ್ನುವ ಕಠಿಣ ಸೂಚನೆಯನ್ನು ಭಾರತ ನೀಡಿದೆ.
ಈಗಾಗಲೇ ಭಾರತದ ವಿರೋಧಿ ಅಜೆಂಡಾವನ್ನು ಕೆನಡಾ ತೀವ್ರಗೊಳಿಸಿದೆ. ಅಲ್ಲಿನ ಪ್ರಮುಖರ ಹೇಳಿಕೆಗಳೇ ಇದನ್ನು ತಿಳಿಸುತ್ತವೆ. ಇಂತಹ ವೇಳೆಯಲ್ಲಿ ಅನಗತ್ಯ ಹಿಂಸಾಚಾರ ಅಥವಾ ಅಪರಾಧ ಚಟುವಟಿಕೆಗಳಿಗೂ ಈ ಹೇಳಿಕೆಗಳು ದಾರಿ ಮಾಡಿಕೊಡುವ ಸಾಧ್ಯತೆಯೂ ಇರುವುದರಿಂದ ಕೆನಡಾಕ್ಕೆ ಪ್ರವಾಸ ಹೋಗುವವರು ರದ್ದು ಮಾಡುವುದು ಸೂಕ್ತ. ಕೆನಡಾದಲ್ಲಿ ನೆಲೆಸಿರುವ ಭಾರತೀಯರೂ ಕೂಡ ಅಲ್ಲಿನ ಪ್ರಮುಖ ತಾಣಗಳಿಗೆ ಹೋಗುವ ಮುನ್ನ ಗಮನಿಸಬೇಕು ಎಂದು ಭಾರತ ಹೇಳಿದೆ.
ಭಾರತೀಯ ಹೈ ಕಮಿಷನ್ ಹಾಗೂ ಕಾನ್ಸುಲೇಟ್ ಜನರಲ್ ಅವರು ಕೆನಡಾದ ಪ್ರಮುಖರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಕೆನಡಾದಲ್ಲಿ ನೆಲೆಸಿರುವ ಭಾರತೀಯ ಸಮುದಾಯಕ್ಕೆ ಸುರಕ್ಷತೆ ನೀಡುವುದು ನಮ್ಮ ಪ್ರಮುಖ ಆದ್ಯತೆಯೂ ಹೌದು ಎಂದು ಭಾರತ ತಿಳಿಸಿದೆ.
ಇದರೊಟ್ಟಿಗೆ ಕೆನಡಾದಲ್ಲಿ ಶಿಕ್ಷಣ ಪಡೆಯಲೆಂದು ತೆರಳಿರುವ ಭಾರತೀಯ ವಿದ್ಯಾರ್ಥಿಗಳೂ ಜಾಗೃತರಿರಬೇಕು. ಅಲ್ಲಿ ಇರುವ ಕುರಿತು ಒಟ್ಟಾವದಲ್ಲಿರುವ ಭಾರತೀಯ ಹೈ ಕಮಿಷನ್ ಕಚೇರಿ ಇಲ್ಲವೇ ಟೊರೊಂಟೋದ ಕಾನ್ಸುಲೇಟ್ ಜನರಲ್ ಅವರ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಇಲ್ಲದೇ ವಿದೇಶಾಂಗ ಸಚಿವಾಲಯದ madad.gov.in ನಲ್ಲೂ ನೋಂದಾಯಿಸಿಕೊಳ್ಳಬಹುದು. ಏನಾದರೂ ತುರ್ತು ಇಲ್ಲವೇ ಅನಿವಾರ್ಯ ಪರಿಸ್ಥಿತಿಯಲ್ಲಿ ಸಂಪರ್ಕಿಸಲು ಇದು ನೆರವಾಗಲಿದೆ ಎಂದು ತಿಳಿಸಲಾಗಿದೆ.
ಕೆನಡಾ ಕೂಡ ಭಾರತದಲ್ಲಿರುವ ತನ್ನ ಪ್ರವಾಸಿಗರಿಗೆ ಹಲವಾರು ಸೂಚನೆಗಳನ್ನು ನೀಡಿದೆ. ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರ, ಮಣಿಪುರ, ಅಸ್ಸಾಂ ರಾಜ್ಯಗಳಲ್ಲಿ ಪ್ರವಾಸ ಇರುವ ಕೆನಡಾ ಪ್ರಜೆಗಳು ಗಮನಿಸಬೇಕು. ಇಲ್ಲಿ ನಿರಂತರವಾಗಿ ದಾಳಿಗಳು ನಡೆಯುತ್ತಿದ್ದು, ಯಾವುದೇ ಕ್ಷಣದಲ್ಲಿ ಯಾರ ಮೇಲೂ ಆಗಬಹುದು. ಇದರಿಂದ ಮುನ್ನೆಚ್ಚರಿಕೆ ಸೂಕ್ತ ಎಂದು ಕೆನಡಾ ತಿಳಿಸಿದೆ.
ಖಲಿಸ್ತಾನಿ ಪ್ರತ್ಯೇಕತಾ ಹೋರಾಟಗಾರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತ ಸರ್ಕಾರದ ಪಾತ್ರವಿದೆ ಎಂಬ ಕೆನಡಾ ಹೇಳಿಕೆ ಗಂಭೀರವಾಗಿದ್ದು, ಭಾರತ ತನಿಖೆಗೆ ಸಹಕರಿಸಬೇಕು ಎಂದು ಅಮೆರಿಕ ಈ ನಡುವೆ ಹೇಳಿದೆ.