ಕೊಲವೆರಿಯಿಂದ ಕಾವಾಲಯ್ಯವರೆಗಿನ ಸ್ಮರಣೀಯ ಮ್ಯೂಸಿಕ್ ಜರ್ನಿ
ಇಡೀ ಸಿನೆಮಾ ಜಗತ್ತು ಇಂದು ಒಬ್ಬ ಸಂಗೀತ ನಿರ್ದೇಶಕನ ಮಹಾ ಪ್ರತಿಭೆಯ ಬಗ್ಗೆ ಮಾತಾಡುತ್ತಿದೆ. ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಹೆಜ್ಜೆಗುರುತಲ್ಲಿ ಇನ್ನೊಬ್ಬ ದಕ್ಷಿಣ ಭಾರತದ ಸಂಗೀತ ನಿರ್ದೇಶಕ ಜಾಗತಿಕ ಸಂಗೀತವನ್ನು ಆಪೋಶನ ಮಾಡಿಕೊಂಡ ಹಾಗೆ ದಾಪುಗಾಲು ಹಾಕಿಕೊಂಡು ಮುನ್ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ. ಕೇವಲ ಬಿಜಿಎಮ್ ಪವರ್ ಮೂಲಕ ಒಂದು ಸಿನೆಮಾವನ್ನು ಗೆಲ್ಲಿಸುವ ತಾಕತ್ತು ಇರುವ ಆತ ಒಬ್ಬ ಸಂಗೀತ ಜಾದೂಗಾರ.
ಕೇವಲ 33 ವರ್ಷ ಪ್ರಾಯದ ಈ ಸಂಗೀತ ನಿರ್ದೇಶಕ ಮುಟ್ಟಿದ್ದೆಲ್ಲವೂ ಚಿನ್ನ ಆಗ್ತಾ ಇದೆ.
ಸೂಪರ್‌ಸ್ಟಾರ್ ರಜನೀಕಾಂತ್ ಅಭಿನಯದ ಜೈಲರ್, ಶಾರುಖ್ ಖಾನ್ ಅಭಿನಯದ ಜವಾನ್, ಕಮಲಹಾಸನ್ ಅಭಿನಯದ ವಿಕ್ರಂ, ವಿಜಯ್ ಅವರ ಕತ್ತಿ ಮತ್ತು ಬೀಸ್ಟ್, ಅಜಿತ್ ಅಭಿನಯದ ವೇದಾಲಂ ಮೊದಲಾದ ಸಿನೆಮಾ ನೋಡಿದವರಿಗೆ ಅವರ ಮ್ಯೂಸಿಕ್ ಮತ್ತು ಬಿಜಿಎಂ ಪವರ್ ಖಂಡಿತ ಗೊತ್ತಾಗಿರುತ್ತದೆ.
ಆತನೇ ಅನಿರುದ್ಧ ರವಿಚಂದರ್
ಆತ ಹಿನ್ನೆಲೆ ಸಂಗೀತದ ಹೊಸ ಸೆನ್ಸೇಷನ್. ಈಗಾಗಲೇ ಯುವಜನತೆಯ ಹಾರ್ಟ್ ತ್ರಾಬ್ ಆಗಿರುವ ಮ್ಯೂಸಿಕಲ್ ಸ್ಟಾರ್. ಮುಂದಿನ ಹತ್ತಾರು ವರ್ಷಗಳ ಕಾಲ ಹಿನ್ನೆಲೆ ಸಂಗೀತವನ್ನು ಖಚಿತವಾಗಿ ಆಳಲಿರುವ ಮ್ಯೂಸಿಕ್ ಲೆಜೆಂಡ್. ಒಂದು ಸಿನೆಮಾದ ಸಂಗೀತ ನಿರ್ದೇಶನಕ್ಕೆ ದಾಖಲೆಯ ಹತ್ತು ಕೋಟಿ ಸಂಭಾವನೆ ಪಡೆದು ರೆಹಮಾನ್ ದಾಖಲೆ ಮುರಿದ ಚಾಂಪಿಯನ್.
ಬಾಲ್ಯದಿಂದಲೂ ಸಂಗೀತವೇ ಉಸಿರು

1990ರ ಅಕ್ಟೋಬರ್ 16ರಂದು ಚೆನ್ನೈಯಲ್ಲಿ ಹುಟ್ಟಿದ ಅನಿರುದ್ಧ ಅವರ ತಂದೆ ರವಿ ರಾಘವೇಂದ್ರ ಅವರು ತಮಿಳು ಸಿನೆಮಾದ ಪ್ರಸಿದ್ಧ ನಟ. ತಾಯಿ ಲಕ್ಷ್ಮೀ ಅವರು ಪ್ರಸಿದ್ಧ ಭರತನೃತ್ಯ ಕಲಾವಿದೆ. ಅವರ ಕುಟುಂಬದಲ್ಲಿ ಯಾರೂ ಸಂಗೀತ ಕಲಾವಿದರು ಇರಲಿಲ್ಲ. ಸೂಪರ್‌ಸ್ಟಾರ್ ರಜನಿಕಾಂತ್ ಅವರ ಪತ್ನಿ ಲತಾ ರಜನೀಕಾಂತ್ ಅವರ ಸೋದರ ಅಳಿಯ ಅನ್ನೋದು ಅನಿರುದ್ಧ ಅವರ ಇನ್ನೊಂದು ಚಹರೆ. ಬಾಲ್ಯದಿಂದಲೇ ಸಂಗೀತವನ್ನು ತುಂಬಾ ಪ್ರೀತಿ ಮಾಡುತ್ತಾ ಬೆಳೆದ ಅನಿರುದ್ಧ ತನ್ನ ಹತ್ತನೇ ವಯಸ್ಸಿನಲ್ಲಿ ಕೀಬೋರ್ಡ್ ನುಡಿಸುವುದನ್ನು ಕಲಿತಿದ್ದ. ಮುಂದೆ ಚೆನ್ನೈಯ ಲೋಯೋಲ ಕಾಲೇಜಿನಲ್ಲಿ ಬಿಕಾಂ ಕಲಿಯುತ್ತಿದ್ದ ಹೊತ್ತಿನಲ್ಲಿ ಒಂದು ಮ್ಯೂಸಿಕ್ ಬಾಂಡ್ ಕಟ್ಟಿಕೊಂಡು ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಾ ಬಂದಿದ್ದ. ಆಗ ತನ್ನ ಕಸಿನ್ ಆದ ಮತ್ತು ರಜನಿಕಾಂತ್ ಮಗಳಾದ ಐಶ್ವರ್ಯ ಅವಳ ಶಾರ್ಟ್ ಫಿಲಂಗಳಿಗೆ ಅನಿರುದ್ಧ ಸಂಗೀತ ಸಂಯೋಜನೆ ಮಾಡಿದ್ದ.
ಕೊಲವೆರಿ ಕೊಲವೆರಿ ಹಾಡು ಹುಟ್ಟಿದ್ದು ಹೀಗೆ
ಡಿಗ್ರಿ ಲಿಯುತ್ತಿದ್ದ ಹೊತ್ತಿನಲ್ಲಿ ತಮಿಳಿನ ಸೂಪರ್‌ಸ್ಟಾರ್ ಧನುಶ್ ಅವರ ಅಭಿನಯದ 3 (ತ್ರಿ) ಎಂಬ ಸಿನೆಮಾಕ್ಕೆ ಮ್ಯೂಸಿಕ್ ಸಂಯೋಜನೆ ಮಾಡುವ ಅವಕಾಶ. ಆ ಅವಕಾಶ ನೀಡಿದ್ದು ಕೂಡ ಅದೇ ಐಶ್ವರ್ಯ ಧನುಶ್.
ಸಿನೆಮಾ ಶೂಟಿಂಗ್ ಬಿಡುವಿನಲ್ಲಿ ಧನುಶ್ ಒಂದು ಖಾಲಿ ಕಾಗದ ತೆಗೆದುಕೊಂಡು ಒಂದಕ್ಕೊಂದು ಸಂಬಂಧವೇ ಇಲ್ಲದ ಕೆಲವು ತಮಿಳು ಮತ್ತು ಇಂಗ್ಲಿಷ್ ಶಬ್ದಗಳನ್ನು ಬರೆದು ‘ಇದಕ್ಕೊಂದು ಮ್ಯೂಸಿಕ್ ಕಂಪೋಸ್ ಮಾಡು ನೋಡುವ ‘ಎಂಬ ಸವಾಲು ಹಾಕಿದ್ದು ಇದೇ ಅನಿರುದ್ಧ್‌ಗೆ. ಕೇವಲ 10 ನಿಮಿಷಗಳ ಒಳಗೆ ಮ್ಯೂಸಿಕ್ ಸಂಯೋಜನೆ ಆಗಿ ಆ ಹಾಡು ಧನುಶ್ ಅವರ ಧ್ವನಿಯಲ್ಲಿ ರೆಕಾರ್ಡ್ ಆಗಿ 2011ರಲ್ಲಿ ಯೂಟ್ಯೂಬ್ ವೇದಿಕೆಯಲ್ಲಿ ಮೊದಲು ಬಿಡುಗಡೆ ಆಯ್ತು. ಆ ಹಾಡು ‘ಕೊಲವೆರಿ, ಕೊಲವೆರಿ ‘ಎಷ್ಟು ಹಿಟ್ ಆಯ್ತು ಎಂದು ನಮಗೆಲ್ಲ ಗೊತ್ತಿದೆ. ಇಡೀ ಜಗತ್ತಿನ ಗಮನ ಸೆಳೆದ ಹಾಡದು. ಯೂಟ್ಯೂಬ್ ವೇದಿಕೆಯಲ್ಲಿ ಈವರೆಗೆ 400 ಮಿಲಿಯನ್ ವ್ಯೂಸ್ ಪಡೆದು ದಾಖಲೆ ಮಾಡಿದ ಈ ಹಾಡಿಗೆ ಯೂಟ್ಯೂಬ್ ಚಿನ್ನದ ಪದಕ ನೀಡಿ ಗೌರವಿಸಿತು. ಆಗ ಅನಿರುದ್ಧ ಅವರ ವಯಸ್ಸು ಕೇವಲ 20.
ಲಂಡನ್ ಟ್ರಿನಿಟಿ ಶಾಲೆಗೆ ಹೋಗಿ ಪಿಯಾನೊ ಕಲಿತರು

ಬಾಲ್ಯದಲ್ಲಿಯೇ ಆತನ ಸಂಗೀತ ಪ್ರತಿಭೆಯನ್ನು ಗುರುತಿಸಿದ ಹೆತ್ತವರು ಆತನನ್ನು ಸಂಗೀತ ಕಲಿಯಲು ಲಂಡನ್ ನಗರದ ಟ್ರಿನಿಟಿ ಮ್ಯೂಸಿಕ್ ಕಾಲೇಜಿಗೆ ಕಳುಹಿಸಿದರು. ಅಲ್ಲಿ ಎರಡು ವರ್ಷಗಳ ಕಾಲ ಪಿಯಾನೊ ಕಲಿತು ಹಿಂದೆ ಬಂದ ಅನಿರುದ್ಧ ಬಾಲ್ಯದಿಂದಲೇ ಕರ್ನಾಟಕ ಸಂಗೀತವನ್ನು ಕಲಿತಿದ್ದ. ಕೀ ಬೋರ್ಡ್ ವೇಗವಾಗಿ ನುಡಿಸುತ್ತಿದ್ದ.
ಸೋದರ ಮಾವ ರಜನೀಕಾಂತ್ ಅವರ ಹೆಸರನ್ನು ಎಲ್ಲಿಯೂ ಬಳಸಿಕೊಳ್ಳದೆ ಸ್ವಂತ ಪ್ರತಿಭೆಯ ಮೂಲಕ ಬೆಳೆಯಬೇಕು ಎಂದು ಆತನ ಆಸೆ. ಭಾರತಕ್ಕೆ ಬಂದ ನಂತರ ಮುಂದಿನ 10 ವರ್ಷಗಳಲ್ಲಿ ಆತ ಸಂಗೀತ ನಿರ್ದೇಶಕ, ಹಿನ್ನೆಲೆ ಸಂಗೀತ ಸಂಯೋಜಕ, ಗಾಯಕನಾಗಿ ಬೆಳೆದ ರೀತಿಗೆ ನಾನಂತೂ ಬೆರಗಾಗಿದ್ದೇನೆ.
ಆರಂಭದಲ್ಲಿ ನನಗೆ ಹಾಡಲು ಬರುವುದಿಲ್ಲ ಎಂದು ಹೇಳುತ್ತ ಬಂದಿದ್ದ ಅನಿರುದ್ಧ ‘ ಕನವೇ ಕನವೆ’ ತಮಿಳು ಹಾಡನ್ನು ಮೊದಲು ಹಾಡಿ ಹಾಡುವ ಪ್ರತಿಭೆಯನ್ನು ಜಗತ್ತಿಗೆ ತೋರಿಸಿಕೊಟ್ಟರು. ಸಿನೆಮಾದ ಸಂದರ್ಭಕ್ಕೆ ಅನುಗುಣವಾಗಿ ಹಾಡುಗಳನ್ನು ಬರೆಸಿ ಅದನ್ನು ನಂತರ ಅತ್ಯಂತ ಸುಂದರವಾಗಿ ಕಂಪೋಸ್ ಮಾಡುವ ಆತನ ಪ್ರತಿಭೆಗೆ ಇಂದು ಇಡೀ ಸಂಗೀತ ಜಗತ್ತು ಶರಣಾಗಿದೆ. ಅಷ್ಟೇ ಅದ್ಭುತವಾಗಿ ಹಿನ್ನೆಲೆ ಸಂಗೀತವನ್ನು ತನ್ನ ಅದ್ಭುತ ಬಿಜಿಎಂ ಮೂಲಕ ಸಿಂಗರಿಸುವ ಅನಿರುದ್ಧ ಪ್ರತಿಭೆಗೆ ಇಂದು ಅವರೇ ಉಪಮೆ ಆಗಿದ್ದಾರೆ.
ದಕ್ಷಿಣ ಭಾರತದ ಮಹಾನ್ ಸಂಗೀತ ನಿರ್ದೇಶಕರಾದ ಇಳಯರಾಜ, ರೆಹಮಾನ್, ಕೀರವಾಣಿ, ಹ್ಯಾರಿಸ್ ಜಯರಾಜ್ ಅವರನ್ನು ಎಲ್ಲಿಯೂ ಅನುಕರಣೆ ಮಾಡದೇ ತನ್ನದೇ ಶೈಲಿಯನ್ನು ಬೆಳೆಸಿಕೊಂಡಿರುವ ಅನಿರುದ್ಧ ಮಹಾನ್ ಸ್ಟಾರ್ ನಟರಾದ ಅಜಿತ್ ಕುಮಾರ್, ವಿಜಯ್, ಜ್ಯೂ.ಎನ್.ಟಿ.ಆರ್, ಕಮಹಾಸನ್, ರಜನೀಕಾಂತ್ ಅವರ ಸಿನೆಮಾಗಳಿಗೆ ಸಂಗೀತ ಸಂಯೋಜನೆ ಮಾಡಿ ಗೆದ್ದಿದ್ದಾರೆ. ಅಜಿತ್ ಅವರ ವೇದಾಲಂ, ವಿಜಯ್ ಅವರ ಕತ್ತಿ ಮತ್ತು ಬೀಸ್ಟ್, ಕಮಲಹಾಸನ್ ಅವರ ವಿಕ್ರಂ, ರಜನೀಕಾಂತ್ ಅವರ ಪೆಟ್ಟ ಮತ್ತು ಜೈಲರ್ ಸೂಪರ್‌ಹಿಟ್ ಸಿನೆಮಾಗಳ ಯಶಸ್ಸಿಗೆ ಅವರು ಪ್ರಮುಖ ಕಾರಣ ಆಗಿದ್ದಾರೆ. ಅದೇ ರೀತಿ ಜೆರ್ಸಿ, ರೆಮೋ, ಮಾಸ್ಟರ್, ಮಾಸ್, ಯು ಟರ್ನ್, ವಿವೇಗಮ್ ಮೊದಲಾದ ತಮಿಳು, ತೆಲುಗು ಮತ್ತು ಹಿಂದಿ ಸಿನೆಮಾಗಳನ್ನು ತನ್ನ ಸಂಗೀತದ ಮಾಂತ್ರಿಕ ಸ್ಪರ್ಶದ ಮೂಲಕ ಗೆಲ್ಲಿಸಿದ್ದಾರೆ.
ರೆಹಮಾನ್ ಜೊತೆ ಹೋಲಿಕೆ
ಅನಿರುದ್ಧ ಅವರ ವಯಸ್ಸು ಈಗ 33. ಅವರನ್ನು ಮ್ಯೂಸಿಕ್ ಲೆಜೆಂಡ್ ರೆಹಮಾನ್ ಜತೆ ಹಲವು ಮಂದಿ ಹೋಲಿಕೆ ಮಾಡಲು ಹೊರಟಾಗ ಅದನ್ನು ಸ್ವತಃ ಅನಿರುದ್ಧ ಖಂಡಿಸಿದ್ದಾರೆ. ‘ನಾನು ಬಾಲ್ಯದಿಂದಲೂ ಅವರ ಮ್ಯೂಸಿಕ್ ಕೇಳುತ್ತಾ ಬೆಳೆದವನು. ನನ್ನ ಕಾಲೇಜಿನ ಮ್ಯೂಸಿಕ್ ಬ್ಯಾಂಡ್ ಮೂಲಕ ರಿಯಾಲಿಟಿ ಶೋಗಳಲ್ಲಿ ಒಮ್ಮೆ ಭಾಗವಹಿಸಿದಾಗ ಸ್ವತಃ ರೆಹಮಾನ್ ಸರ್ ಅದಕ್ಕೆ ಜಜ್ ಆಗಿದ್ದರು. ಅವರ ಕೈಯ್ಯಿಂದ ಪ್ರಥಮ ಬಹುಮಾನ ಪಡೆದ ರೋಮಾಂಚನ ನನ್ನನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ. ನಾನಿನ್ನೂ ಸಂಗೀತದಲ್ಲಿ ತುಂಬಾ ಸಾಧನೆ ಮಾಡಲು ಬಾಕಿ ಇದೆ. ನನ್ನನ್ನು ರೆಹಮಾನ್ ಸರ್ ಜತೆಗೆ ದಯವಿಟ್ಟು ಹೋಲಿಕೆ ಮಾಡಬೇಡಿ ಎಂದು ಅನಿರುದ್ಧ ವಿನಂತಿ ಮಾಡಿಕೊಂಡಿದ್ದಾರೆ. ರೆಹಮಾನ್ ಮತ್ತು ಇಳಯರಾಜ ಇಬ್ಬರೂ ಅನಿರುದ್ಧ ಅವರ ಸಾಧನೆಯನ್ನು ಭಾರಿ ಕೊಂಡಾಡಿದ್ದಾರೆ.
ಇತ್ತೀಚೆಗೆ ಎಂ ಶ್ಯಾಮಕುಮಾರ್ ಎಂಬ ನಿರ್ಮಾಪಕ ತನ್ನ ಅದ್ದೂರಿ ಬಜೆಟಿನ ಹೊಸ ಸಿನಿಮಾಕ್ಕೆ ಅನಿರುದ್ಧ ಅವರನ್ನು ಹೀರೊ ಆಗಿ ಅಭಿನಯಿಸಲು ಆಫರ್ ನೀಡಿದಾಗ ಅದನ್ನು ನಯವಾಗಿ ನಿರಾಕರಣೆ ಮಾಡಿ ಅದು ನನ್ನ ಫೀಲ್ಡ್ ಅಲ್ಲ ಅಂತ ಹೇಳಿದ್ದಾರೆ.
ಬಿಜಿಎಂ ದೈತ್ಯ ಅನಿರುದ್ಧ
ಅತ್ಯಾಧುನಿಕ ಕೀ ಬೋರ್ಡ್ ಮೇಲೆ ತನ್ನ ಉದ್ದವಾದ ಬೆರಳುಗಳನ್ನು ಮೀಟುತ್ತ ಅವರು ಹುಟ್ಟುಹಾಕುವ ಮಿಂಚು ಹರಿಸುವ
ಬೀಜಿಎಂಗಳು ಎಷ್ಟೋ ಬಾರಿ ಸಿನೆಮಾ ಥಿಯೇಟರನ್ನು ಅಲ್ಲಾಡಿಸಿ ಬಿಡುತ್ತವೆ. ವಿಕ್ರಂ, ಜೈಲರ್, ಜವಾನ್, ಕತ್ತಿ, ಬೀಸ್ಟ್, ವೇದಾಲಂ ಮೊದಲಾದ ಸಿನೆಮಾಗಳನ್ನು ನಾವು ನೋಡಿದಾಗ ಅಲ್ಲಿ ಅದ್ಭುತವಾದ ಫೀಲ್ ಮೂಡಿಸುವ ಪವರ್ ಅನಿರುದ್ಧ ಅವರ ಬಿಜಿಎಂಗೆ ಇದೆ. ಹಿಂದಿ ಜವಾನ್ ಸಿನೆಮಾವನ್ನು ನೀವು ಸೂಕ್ಷ್ಮವಾಗಿ ಗಮನಿಸಿದರೆ ನೂರಾರು ಅದ್ಭುತವಾದ ಬಿಜಿಎಂ ಗಳು ನಾವು ಸಿನೆಮಾ ನೋಡಿ ಹೊರಬಂದ ಎಷ್ಟೋ ಹೊತ್ತು ನಮ್ಮ ಮೈಂಡಲ್ಲಿ ರಿಜಿಸ್ಟರ್ ಆಗಿರುತ್ತವೆ. ಜೈಲರ್ ಸಿನೆಮಾದಲ್ಲಿ ಶಿವರಾಜ್ ಕುಮಾರ್ ಅವರ ಪ್ರವೇಶಕ್ಕೆ ಅನಿರುದ್ಧ ಕೊಟ್ಟ ಬಿಜಿಎಂ ಕ್ಲಾಸಿಕ್. ಕ್ರಿಕೆಟ್ ದೇವರು ಸಚಿನ್ ಅವರಿಗಾಗಿ ಅನಿರುದ್ಧ ಕಂಪೋಸ್ ಮಾಡಿದ ‘ಸಚಿನ್ ಆಂಥೆಮ್ ‘ ಹಾಡು ಭಾರಿ ಹಿಟ್ ಆಗಿತ್ತು.
ಅಷ್ಟೇ ಅದ್ಭುತವಾಗಿ ಅವರು ಕಂಪೋಸ್ ಮಾಡಿದ ಅದ್ಭುತ ಹಾಡುಗಳಾದ ಕಾವಾಲಯ್ಯ (ಜೈಲರ್), ಝಿಂದ ಬಂದ (ಜವಾನ್), ಹುಕುಂ (ಜೈಲರ್), ನಾ ರೆಡಿ (ಲಿಯೋ), ಸೆಲ್ಫಿ ಪುಳ್ಳ (ಕತ್ತಿ) ಸೂಪರ್ ಹಿಟ್ ಆಗಿವೆ. ಜವಾನ್ ಸಿನೆಮಾದ ಸಂಗೀತಕ್ಕೆ ಅನಿರುದ್ಧ 10 ಕೋಟಿ ಸಂಭಾವನೆ ಪಡೆದದ್ದು ಭಾರತೀಯ ಸಿನೆಮಾದ ದಾಖಲೆ.
ಮುಂದಿನ ಐದು ವರ್ಷ ಅವರಿಗೆ ಬಿಡುವಿಲ್ಲ

ಮುಂದೆ ಬರಲಿರುವ ಮೆಗಾ ಸಿನೆಮಾಗಳಾದ ಇಂಡಿಯನ್ 2, ವಿಕ್ರಂ 2 (ಕಮಲಹಾಸನ್), ಲಿಯೋ (ವಿಜಯ್), ದೇವರ (ಜ್ಯೂನಿಯರ್ ಎನ್ಟಿಆರ್), ತಲೈವರ್ 170 (ರಜನೀಕಾಂತ್), ವಿದಾ ಮ್ಯುರ್ಚಿ (ಅಜಿತ್), VD 12 (ವಿಜಯ ದೇವರಕೊಂಡ) ಇವೆಲ್ಲವೂ ಶತಕೋಟಿ ಬಜೆಟ್ ಸಿನಿಮಾಗಳು ಆಗಿದ್ದು ಅವುಗಳಿಗೆ ಮ್ಯೂಸಿಕ್ ಇದೇ ಅನಿರುದ್ಧ ನೀಡುತ್ತಿದ್ದಾರೆ.
ಇದುವರೆಗೆ 3 ಫಿಲ್ಮ್‌ಫೇರ್ ಪ್ರಶಸ್ತಿಗಳು, 9 ಸೈಮಾ ಪ್ರಶಸ್ತಿಗಳು, 6 ಎಡಿಸನ್ ಪ್ರಶಸ್ತಿಗಳು ಸೇರಿ 38 ಪ್ರಮುಖ ಪ್ರಶಸ್ತಿಗಳನ್ನು ಪಡೆದು ಅನಿರುದ್ದ ದಾಖಲೆ ಮಾಡಿದ್ದಾರೆ.
ಒಟ್ಟಿನಲ್ಲಿ ಅನಿರುದ್ಧ ಭಾರತೀಯ ಸಿನೆಮಾ ಸಂಗೀತದ ನೂತನ ದೊರೆ ಅನ್ನುವುದರಲ್ಲಿ ಯಾರಿಗೂ ಅನುಮಾನವಿಲ್ಲ.
