ಯೂಟ್ಯೂಬ್‌ ಚಾನೆಲ್‌ನಿಂದ ಜೀವ ಬೆದರಿಕೆ : ನಟ ಪ್ರಕಾಶ್‌ ರಾಜ್‌ ದೂರು

ವೀಡಿಯೊಗಳಲ್ಲಿ ಜೀವ ಬೆದರಿಕೆಯೊಡ್ಡುವ ಅಂಶಗಳಿವೆ ಎಂದು ದೂರು

ಬೆಂಗಳೂರು: ವಿವಾದಗಳ ಸರದಾರನಾಗಿರುವ ನಟ ಪ್ರಕಾಶ್‌ ರಾಜ್‌ ಯೂಟ್ಯೂಬ್‌ ಚಾನೆಲ್‌ ಒಂದರ ವಿರುದ್ಧ ತನಗೆ ಜೀವ ಬೆದರಿಕೆಯೊಡ್ಡಿದ ದೂರು ದಾಖಲಿಸಿದ್ದಾರೆ. ತನಗೆ ಹಾಗೂ ತನ್ನ ಕುಟುಂಬದವರಿಗೆ ‘ವಿಕ್ರಮ್ ಟಿ.ವಿ’ ಯೂಟ್ಯೂಬ್‌ನ ಚಾನೆಲ್‌ ಮೂಲಕ ಬೆದರಿಕೆ ಒಡ್ಡಲಾಗಿದೆ ಎಂದು ಪ್ರಕಾಶ್ ರಾಜ್ (58) ಅಶೋಕನಗರ ಠಾಣೆಯಲ್ಲಿ ನೀಡಿದ ದೂರಿನನ್ವಯ ಎಫ್‌ಐಆರ್ ದಾಖಲಾಗಿದೆ.
ವಿಕ್ರಮ್ ಟಿ.ವಿ ಯೂಟ್ಯೂಬ್ ಚಾನೆಲ್ ಮುಖ್ಯಸ್ಥರು ಹಾಗೂ ಕಾರ್ಯಕ್ರಮ ನಿರೂಪಕರು ಆರೋಪಿಗಳೆಂದು ಹೆಸರಿಸಲಾಗಿದೆ. ಎಲ್ಲರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸ್ ಮೂಲಗಳು ಹೇಳಿವೆ.
ನಟ ಹಾಗೂ ನಿರ್ದೇಶಕನಾಗಿರುವ ನಾನು, ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ವಿವಿಧ ವಿಷಯಗಳ ಚರ್ಚೆ–ಸಂವಾದದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಸೆ.14ರಂದು ವಿಕ್ರಮ್ ಟಿ.ವಿ. ಯೂಟ್ಯೂಬ್ ಹಾಗೂ ಫೇಸ್‌ಬುಕ್‌ನಲ್ಲಿ ಎರಡು ವೀಡಿಯೊ ವೀಕ್ಷಣೆ ಮಾಡಿದೆ. ಎರಡೂ ವಿಡಿಯೊದಲ್ಲಿ ನನ್ನ ಜೀವಕ್ಕೆ ಅಪಾಯವಾಗುವ ಸಂಗತಿಗಳಿದ್ದವು ಎಂದು ಪ್ರಕಾಶ್ ರಾಜ್ ದೂರಿನಲ್ಲಿ ತಿಳಿಸಿದ್ದಾರೆ.
ಬೆದರಿಕೆ ಹಾಕುವ ಸ್ಟಾಲಿನ್, ಪ್ರಕಾಶ್ ರಾಜ್‌ನಂಥವರನ್ನು ಮುಗಿಸಬೇಕೆ…? ಹಿಂದೂಗಳು ಮಾಡಬೇಕಾಗಿರುವುದು ಏನು…? ಸನಾತನ ಧರ್ಮ/ಹಿಂದೂಗಳೇ ಮಲಗೇ ಇರ್ತಿರಾ…? ಎಂಬಿತ್ಯಾದಿ ಶಬ್ದಗಳನ್ನು ಬಳಸಿ ವಿಡಿಯೊ ಮಾಡಲಾಗಿದೆ.
ಇದೇ ವಿಡಿಯೊವನ್ನು ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ವಿಡಿಯೊದಲ್ಲಿರುವ ಅಂಶಗಳು ನನಗೆ ಹಾಗೂ ನನ್ನ ಕುಟುಂಬದವರಿಗೆ ಜೀವ ಬೆದರಿಕೆಯೊಡ್ಡುವಂತಿವೆ. ಇಂಥ ವಿಡಿಯೊ ಮಾಡಿರುವ ವಿಕ್ರಮ್ ಟಿ.ವಿ ಯೂಟ್ಯೂಬ್ ಚಾನೆಲ್ ಮುಖ್ಯಸ್ಥರು ಹಾಗೂ ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.error: Content is protected !!
Scroll to Top