ನೀರು ಹರಿಸುವ ಸಂಕಷ್ಟದಿಂದ ಪಾರಾಗುವ ಮಾರ್ಗೋಪಾಯ ಕಂಡುಕೊಳ್ಳಲು ಪ್ರಯತ್ನ
ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕೆಂಬ ಆದೇಶದಿಂದ ಕಂಗಾಲಾಗಿರುವ ಸರಕಾರ ಇಂದು ದಿಲ್ಲಿಯಲ್ಲಿ ಮಹತ್ವದ ಸಭೆ ನಡೆಸಿ ಮುಂದಿನ ನಡೆಯ ಕುರಿತು ನಿರ್ಣಯಿಸಲಿದೆ. ಇದರ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದಿಲ್ಲಿಗೆ ತೆರಳಿದ್ದಾರೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ ಇನ್ನೂ 15 ದಿನಗಳ ಕಾಲ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಬಿಡುವುದನ್ನು ಮುಂದುವರಿಸುವಂತೆ ಸೋಮವಾರ ಆದೇಶಿಸಿದೆ. ಇದರಿಂದಾಗಿ 15 ದಿನಗಳ ಕಾಲ ತಮಿಳುನಾಡಿಗೆ ಹರಿಸಲೇಬೇಕಾಗಿದೆ. ಈ ಆದೇಶದಿಂದ ಈಗಾಗಲೇ ನೀರಿನ ಕೊರತೆಯಿಂದ ಸಂಕಷ್ಟ ಎದುರಿಸುತ್ತಿರುವ ಕರ್ನಾಟಕ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ಸೇರಿ ರಾಜ್ಯಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕರ್ನಾಟಕದ ಎಲ್ಲ ಸಂಸದರು ಮತ್ತು ಕೇಂದ್ರ ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ.
ದಿಲ್ಲಿಯ ತಾಜ್ ಮಾನ್‌ಸಿಂಗ್ ಹೋಟೆಲ್ನಲ್ಲಿ ಸಭೆ ನಡೆಯಲಿದ್ದು, ಸ್ಥಗಿತಗೊಂಡಿರುವ ಹಲವಾರು ಅಭಿವೃದ್ಧಿ ಯೋಜನೆಗಳು ಮತ್ತು ಕೇಂದ್ರದ ಅನುಮತಿಗಾಗಿ ಕಾಯುತ್ತಿರುವ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸುವ ಸಾಧ್ಯತೆಯಿದೆ.
ರಾಜ್ಯದ ಕೇಂದ್ರ ಸಚಿವರು ಮತ್ತು ಎಲ್ಲ ಸಂಸದರೊಂದಿಗೆ ಉಪಾಹಾರ ಸಭೆ ನಡೆಸಲಿದ್ದಾರೆ. ಕಾವೇರಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಸ್ಥಿಕೆಗೆ ರಾಜ್ಯದ ಕೇಂದ್ರ ಸಚಿವರು ಮತ್ತು ಸಂಸದರನ್ನು ಒತ್ತಾಯಿಸುವ ಸಾಧ್ಯತೆಯಿದೆ.
ಕಾವೇರಿ ವಿಚಾರ ಕುರಿತು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಮುನ್ನ ಕಾನೂನು ತಜ್ಞರ ಜತೆ ದಿಲ್ಲಿಯಲ್ಲಿಂದು ಇಂದು ಸಿಎಂ, ಡಿಸಿಎಂ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ. ಸಭೆ ಬಳಿಕ ಕೇಂದ್ರ ಸಚಿವರನ್ನು ರಾಜ್ಯದ ನಿಯೋಗ ಭೇಟಿಯಾಗಲಿದ್ದು, ಈಗಾಗಲೇ ಕೇಂದ್ರ ಜಲಶಕ್ತಿ ಸಚಿವರ ಭೇಟಿಗೆ ಸಮಯ ಕೇಳಲಾಗಿದೆ. ಕರ್ನಾಟಕದ ಸರ್ಕಾರದ ದಿಲ್ಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ಅವರು ಈಗಾಗಲೇ ದಿಲ್ಲಿಯಲ್ಲಿ ವಾಸ್ತವ್ಯ ಹೊಡಿದ್ದು, ನಿನ್ನೆ ಡಿಕೆ ಶಿವಕುಮಾರ್ ಹಾಗೂ ಟಿ.ಬಿ ಜಯಚಂದ್ರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.