ಮಕ್ಕಳ ಮೇಲೆ ಬಹಳ ದುಷ್ಪರಿಣಾಮವಾಗುತ್ತಿರುವ ಹಿನ್ನೆಲೆಯಲ್ಲಿ ಗಂಭೀರವಾಗಿ ಪರಿಗಣಿಸಲು ಸೂಚನೆ
ಬೆಂಗಳೂರು: ಸೋಷಿಯಲ್ ಮೀಡಿಯಾ ಬಳಕೆಯಿಂದ ಮಕ್ಕಳ ಮೇಳೆ ದುಷ್ಪರಿಣಾಮಗಳಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳ ಬಳಕೆಗೆ ವಯೋಮಿತಿ ನಿಗದಿಪಡಿಸಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸಲಹೆ ನೀಡಿದೆ.
ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶಗಳನ್ನು ಆಕ್ಷೇಪಿಸಿ ಸಲ್ಲಿಸಿದ್ದ ತಕರಾರು ಅರ್ಜಿ ವಜಾಗೊಳಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಎಕ್ಸ್ (ಹಿಂದಿನ ಟ್ವಿಟರ್) ಸಂಸ್ಥೆ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್ ಅವರ ನೇತೃತ್ವದ ವಿಭಾಗೀಯ ಪೀಠ ಸಾಮಾಜಿಕ ಜಾಲತಾಣ ನಿರ್ಬಂಧಿಸಿ ನೋಡಿ ಸಾಕಷ್ಟು ಒಳ್ಳೆಯದಾಗುತ್ತದೆ ಎಂದಿದೆ.
ಆನ್‌ಲೈನ್ ಗೇಮಿಂಗ್‌ಗೆ ವಯೋಮಿತಿ ನಿಗದಿಪಡಿಸಲಾಗಿದೆ. ಇದೇ ಮಾದರಿ ಕೇಂದ್ರ ಸರ್ಕಾರ ಸಾಮಾಜಿಕ ಮಾಧ್ಯಮ ಬಳಕೆಗೆ ವಯೋಮಿತಿ ನಿಗದಿಪಡಿಸಬೇಕು ಎ೦ದು ನ್ಯಾಯಾಲಯ ಹೇಳಿದೆ. ಇದಕ್ಕೆ ಉತ್ತರಿಸಿದ ಕೇಂದ್ರ ಸರ್ಕಾರದ ಪರ ವಕೀಲ ಎಂ.ಎನ್. ಕುಮಾರ್, ಕೆಲವು ಆನ್‌ಲೈನ್ ಗೇಮ್ ಆಡಲು ಕಾನೂನಿನ ಪ್ರಕಾರ ಈಗ ಆಧಾರ್ ಮತ್ತು ಇತರ ದಾಖಲೆಗಳನ್ನು ಸಲ್ಲಿಸಬೇಕು ಎಂದು ತಿಳಿಸಿದರು.
ಸಾಮಾಜಿಕ ಮಾಧ್ಯಮ ನಿಷೇಧಿಸುವುದು ಉತ್ತಮ. ಇದರಿಂದ ಸಾಕಷ್ಟು ಒಳ್ಳೆಯದಾಗುತ್ತದೆ. ಈಗ ಶಾಲೆಗೆ ಹೋಗುವ ಮಕ್ಕಳೂ ಅದಕ್ಕೆ ದಾಸರಾಗಿದ್ದಾರೆ. ಕನಿಷ್ಠ ಪಕ್ಷ ಕೇಂದ್ರ ಸರ್ಕಾರ ಸಾಮಾಜಿಕ ಮಾಧ್ಯಮ ಬಳಕೆಗೆ ವಯೋಮಿತಿ ನಿಗದಿಪಡಿಸಬೇಕು. 17 ಅಥವಾ 18 ವಯೋಮಿತಿಯ ಮಕ್ಕಳಿಗೆ ದೇಶದ ಹಿತಾಸಕ್ತಿಗೆ ಪೂರಕ ಯಾವುದು ಮಾರಕ ಯಾವುದು ಎಂಬುದನ್ನು ನಿರ್ಧರಿಸುವ ಪ್ರೌಢಿಮೆ ಇದೆಯೇ? ಬಳಕೆದಾರರಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಏಕೆಂದರೆ ಆ ವಯಸ್ಸಿನವರಿಗೆ ಮತದಾನದ ಹಕ್ಕು ನೀಡಲಾಗಿದೆ ಎಂದು ಪೀಠವು ಮೌಖಿಕವಾಗಿ ಹೇಳಿತು.