ಬೆಂಗಳೂರು : ಗೋವಿಂದ ಬಾಬು ರಾಜು ಎಂಬ ಉದ್ಯಮಿಗೆ ಸುಮಾರು 5 ಕೋಟಿ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಮೂರನೇ ಆರೋಪಿ ಅಭಿನವ ಹಾಲಶ್ರೀಯನ್ನು ಸೆ. 29ರವರೆಗೆ 10 ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಿ ಬೆಂಗಳೂರಿನ 19ನೇ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ. ಬೆಂಗಳೂರಿನ 19ನೇ ಎಸಿಎಂಎಂ ನ್ಯಾಯಾಲಯಕ್ಕೆ ಇಂದು ಹಾಲಶ್ರೀಯನ್ನು ಹಾಜರುಪಡಿಸಲಾಗಿತ್ತು. ಹಾಲಶ್ರೀ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಕಾಯ್ದಿರಿಸಿದೆ.
ಒಡಿಶಾದ ಕಟಕ್ ಹೋಗಿದ್ದ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲವೀರಪ್ಪ ಸ್ವಾಮೀಜಿಯನ್ನು ಅಲ್ಲಿನ ಸ್ಥಳೀಯ ಪೊಲೀಸರ ನೆರವಿನಿಂದ ನಿನ್ನೆ ಬಂಧಿಸಿದ್ದ ಸಿಸಿಬಿ ಪೊಲೀಸರು ಕೆಂಪೇಗೌಡ ಏರ್ ಪೋರ್ಟ್ ಮೂಲಕ ನಗರಕ್ಕೆ ಕರೆತಂದಿದ್ದರು. ಎ3 ಆರೋಪಿಯಾಗಿರುವ ಹಾಲಶ್ರೀ ಸ್ವಾಮೀಜಿ ಬಂಧನದಿಂದ ಇನ್ನಷ್ಟು ಸ್ಫೋಟಕ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.