ಮಟ್ಕಾ – ಕ್ಲಬ್‌ಗಳಿಗೆ ಸಂಪೂರ್ಣ ಬ್ರೇಕ್ : ಮರಳು – ಕಲ್ಲು ಸಾಗಾಟಕ್ಕೂ ನಿರ್ಬಂಧ
ಕಾರ್ಕಳ : ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಾ. ಅರುಣ್ ಕೆ. ಅವರು ಅಧಿಕಾರ ವಹಿಸಿಕೊಂಡ ಬಳಿಕ ಜಿಲ್ಲೆಯಲ್ಲಿ ಬಹುತೇಕ ಅಕ್ರಮಗಳಿಗೆ, ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ. ಜಿಲ್ಲೆಯಾದ್ಯಂತ ನಡೆಯುತ್ತಿದ್ದ ಮಟ್ಕಾ, ಇಸ್ಪೀಟ್ ಕ್ಲಬ್, ಕೋಳಿ ಅಂಕಗಳಿಗೆ ಬ್ರೇಕ್ ಹಾಕಲಾಗಿದೆ. ಅವಧಿ ಮೀರಿ ಕಾರ್ಯಾಚರಿಸದಂತೆ ಬಾರ್, ಪಬ್‌ಗಳಿಗೆ ಸೂಚನೆ ನೀಡಲಾಗಿದೆ. ಗಾಂಜಾ ಸೇರಿದಂತೆ ಡ್ರಗ್ಸ್ ಸಾಗಾಟ, ಸೇವನೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಭ್ರಷ್ಟಾಚಾರ ರಹಿತವಾಗಿ ಕರ್ತವ್ಯ ನಿರ್ವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ, ಪೊಲೀಸರಿಗೆ ನಿರ್ದೇಶನ ನೀಡಿರುವ ಎಸ್‌ಪಿಯವರು ಠಾಣೆಗೆ ಬರುವ ಬಡವರಿಗೆ ನ್ಯಾಯ ದೊರೆಯುವಂತಾಗಬೇಕು ಎಂದು ತಿಳಿಸಿದ್ದಾರೆ. ಸೈಬರ್ ಅಪರಾಧ ತಡೆಗಟ್ಟುವ ನಿಟ್ಟಿನಲ್ಲೂ ಎಸ್‌ಪಿಯವರು ಯೋಜನೆ ಕ್ರಮಬದ್ಧ ಯೋಜನೆ ರೂಪಿಸಿದ್ದಾರೆ.
ಮರಳು – ಕಲ್ಲು ಸಾಗಾಟಕ್ಕೂ ನಿರ್ಬಂಧ
ಮರಳು, ಕಲ್ಲು ಸಾಗಾಟದ ಬಗ್ಗೆ ವಿಶೇಷ ನಿಗಾ ವಹಿಸುವಂತೆ ಎಸ್‌ಪಿಯವರು ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿರುವುದರಿಂದ ಮರಳು, ಕಲ್ಲು ಸಾಗಾಟ ಸ್ಥಗಿತಗೊಂಡಿದೆ. ಕಲ್ಲು ಗಣಿಗಾರಿಕೆ, ಮರಳು ಬಗ್ಗೆ ಸರಕಾರ ಸ್ಪಷ್ಟವಾದ ನೀತಿ ರೂಪಿಸದ ಕಾರಣ ಇದೆಲ್ಲವೂ ಅನಧಿಕೃತ ಎಂದೇ ಗೋಚರಿಸುತ್ತಿದೆ.
ಮಟ್ಕಾ, ಜೂಜು, ಡ್ರಗ್ಸ್ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಕುರಿತು ಸಾರ್ವಜನಿಕ ವಲಯದಿಂದ ಮೆಚ್ಚುಗೆ, ಪ್ರಶಂಸೆ ವ್ಯಕ್ತವಾಗುತ್ತಿದೆ. ದೇವಸ್ಥಾನ, ದೈವಸ್ಥಾನಗಳ ಜಾತ್ರೆ ಸಂದರ್ಭ ನಡೆಯುವ ಕೋಳಿ ಅಂಕಕ್ಕೆ ಅನುಮತಿ ನೀಡಬೇಕಂಬ ಮಾತುಗಳು ಕೇಳಿಬರುತ್ತಿದೆ.
ಆದರೆ, ಕರಾವಳಿ ಭಾಗದ ಆರ್ಥಿಕ ಚಟುವಟಿಕೆಗಳಿಗೆ ಕಾರಣವಾಗಿರುವ ಮರಳು, ಕಲ್ಲು ಸಾಗಾಟಕ್ಕೆ ಅವಕಾಶ ಮಾಡಿಕೊಡಬೇಕೆಂಬ ಆಗ್ರಹ ಕೇಳಿ ಬರುತ್ತಿದೆ. ಇದು ಜಿಲ್ಲೆಯ ಆರ್ಥಿಕ ಚಟುವಟಿಕೆ ಮೇಲೆ ಮಾತ್ರವೇ ಪರಿಣಾಮ ಬೀರುವುದಲ್ಲದೇ ಸಾವಿರಾರು ಕಾರ್ಮಿಕರ ಬದುಕು ಇದರಿಂದ ಸಾಗುತ್ತಿದೆ. ಮರಳು, ಕಲ್ಲು ಲಾರಿ ಜಿಪಿಎಸ್ ಕಡ್ಡಾಯ ಎಂಬ ನಿಯಮವೂ ಕಾರ್ಯಸಾಧುವಲ್ಲ. ಮರಳು, ಕಲ್ಲು ಸಾಗಾಟ ಅಕ್ರಮವಾಗಿದ್ದರೆ ಸಕ್ರಮ ಮಾಡುವುದಾದರೂ ಹೇಗೆ ? ಎಂಬ ಪ್ರಶ್ನೆಯೂ ಮೂಡುತ್ತದೆ. ಈ ಬಗ್ಗೆ ಬಿಗಿ ನಿಯಮ ಬದಿಗೊತ್ತಿ ಸರಕಾರ ಮುಕ್ತ ನೀತಿ ಅನುಸರಿಸುವುದು ಸಾರ್ವಜನಿಕ ದೃಷ್ಟಿಯಿಂದ ಒಳಿತು.
30ಕ್ಕೂ ಅಧಿಕ ಕೋರೆ-ಕ್ರಷರ್
ಕಾರ್ಕಳ ನಗರದಲ್ಲಿ ಅಧಿಕೃತವಾಗಿ 3, ಗ್ರಾಮಾಂತರದಲ್ಲಿ 20, ಹೆಬ್ರಿ ತಾಲೂಕಿನಲ್ಲಿ 7 ಕೋರೆಗಳು ಕಾರ್ಯಾಚರಿಸುತ್ತಿದೆ. ಅನುಮತಿ ಪಡೆದ ಕೋರೆಗಳು ಅಲ್ಲಿಯೇ ಕಾರ್ಯಾಚರಿಸುತ್ತಿದೆಯೇ ಎಂಬುದನ್ನು ಪರಿಶೀಲಿಸುವ ನಿಟ್ಟಿನಲ್ಲಿ ಡಿಸಿಯವರು ಒಂದು ತಂಡ ರಚಿಸಿದ್ದಾರೆ. ಆ ತಂಡದಲ್ಲಿ ಗಣಿ, ಕಂದಾಯ, ಪೊಲೀಸ್ ಇಲಾಖಾಧಿಕಾರಿಗಳಿದ್ದು ಇವರು ಕೋರೆ ಇರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮುಂದಾಗಿದ್ದಾರೆ.
ಎಸ್‌ಪಿಯವರ ಬಗ್ಗೆ
ಮೂಲತಃ ತಮಿಳುನಾಡಿನ ಡಾ. ಅರುಣ್ ಅವರು ಎಂಬಿಬಿಎಸ್ ಪದವೀಧರರು. 2014ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಡಾ. ಅರುಣ್ 2016-17ರ ಅವಧಿಯಲ್ಲಿ ಬಂಟ್ವಾಳ ಎಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು. ಚಿತ್ರದುರ್ಗ, ದಾವಣಗೆರೆ, ವಿಜಯಪುರದಲ್ಲಿ ಎಸ್‌ಪಿಯಾಗಿ ಕಾರ್ಯನಿರ್ವಹಿಸಿರುವ ಅರುಣ್ ಅವರು ದಕ್ಷ, ಪ್ರಾಮಾಣಿಕ, ಖಡಕ್ ಅಧಿಕಾರಿಯೆಂದೇ ಹೆಸರು ಪಡೆದವರು.