ರಾಜಪಥ-ನೇತಾಜಿ ಸುಭಾಷ್ ಬಗ್ಗೆ ಮಾತಾಡುವಾಗ ಬ್ರಿಟನ್ ಪ್ರಧಾನಿ ಧ್ವನಿ ನಡುಗಿತು…

ಅಂದು ಇಬ್ಬರು ಜಾಗತಿಕ ಮಟ್ಟದ ನಾಯಕರು ಒಂದೆಡೆ ಕುಳಿತು ಮಾತಾಡಿದ್ದು ಇವರ ಬಗ್ಗೆ

1943ರ ಇಸವಿ ಆಗಸ್ಟ್ ತಿಂಗಳ ಒಂದು ದಿನ, ಆಗ ಜಗತ್ತಿನ ಎರಡು ಬಲಿಷ್ಠ ರಾಷ್ಟ್ರಗಳ ಮುಖ್ಯಸ್ಥರು ಒಂದೆಡೆ ಸೇರಿದ್ದರು.
ಒಬ್ಬರು ಸೂರ್ಯ ಮುಳುಗದ ಸಾಮ್ರಾಜ್ಯ ಇಂಗ್ಲೆಂಡನ ಪ್ರಧಾನಿ ವಿನಸ್ಟನ್ ಚರ್ಚಿಲ್, ಇನ್ನೊಬ್ಬರು ಅಮೆರಿಕದ ಆಗಿನ ಜನಪ್ರಿಯ ಅಧ್ಯಕ್ಷರಾದ ರೂಸವೆಲ್ಟ್.ಅವರಿಬ್ಬರೂ ಆಗಿನ ಕಾಲದ ಮಹಾ ಮುತ್ಸದ್ದಿಗಳು ಎಂದು ಕರೆಸಿಕೊಂಡವರು. ಒಂದು ಇಡೀ ದಿನದಲ್ಲಿ ಇಬ್ಬರೂ ಸೇರಿ ಒಬ್ಬ ಭಾರತೀಯ ನಾಯಕನ ಬಗ್ಗೆ ಮಾತಾಡಿದ್ದರು.
ಬ್ರಿಟನ್ ಪ್ರಧಾನಿ ಚರ್ಚಿಲ್ ಧ್ವನಿಯಲ್ಲಿ ಆಗ ಆತಂಕ ಎದ್ದು ಕಾಣುತ್ತಿತ್ತು. ಭಾರತದ ಮೇಲೆ ಬ್ರಿಟನ್ ತನ್ನ ಹಿಡಿತವನ್ನು ಕಳೆದುಕೊಳ್ಳುವ ಭೀತಿ ಅವರ ಮುಖದಲ್ಲಿ ಆಗ ಎದ್ದು ಕಾಣುತ್ತಿತ್ತು. ಅವರಿಬ್ಬರೂ ಆ ದಿನ ಪೂರ್ತಿ ಮಾತಾಡುತ್ತಿದ್ದದ್ದು ಭಾರತದ ಸ್ವಾತಂತ್ರ್ಯದ ಕಿಡಿ ಎಂದು ಎಲ್ಲರಿಂದ ಕರೆಸಿಕೊಂಡ ನೇತಾಜಿ ಸುಭಾಸಚಂದ್ರ ಬೋಸರ ಬಗ್ಗೆ!

ಬ್ರಿಟನ್ ಪ್ರಧಾನಿ ಚರ್ಚಿಲ್ ನೇತಾಜಿಯವರ ಬಗ್ಗೆ ಹೇಳುತ್ತಾ ಹೋದ ಮಾತುಗಳನ್ನು ಕೇಳಿ….
ಆ ಮನುಷ್ಯ ಅತ್ಯಂತ ಅಪಾಯಕಾರಿ. ಆತನನ್ನು ಯಾರೂ ಯಾಮಾರಿಸಲು ಸಾಧ್ಯವೇ ಇಲ್ಲ. ಅವನ ಮೈಯ್ಯಲ್ಲಿ ಸೈತಾನ ಹೊಕ್ಕಿದ್ದಾನೆ. ಅವನೊಬ್ಬ ಸಂಹಾರಕ ವ್ಯಕ್ತಿ ಮತ್ತು ಉದ್ರೇಕಕಾರಿ ಶಕ್ತಿ. ಅವನು ನಮ್ಮ ಇಂಗ್ಲೆಂಡಿಗೆ ಬಂದು ಐಸಿಎಸ್ ಪರೀಕ್ಷೆ ಮಾಡಿ ಹೋಗಿದ್ದಾನೆ. ನಾಲ್ಕನೇ ರಾಂಕ್ ಕೂಡ ಪಡೆದಿದ್ದಾನೆ. ಆದರೆ ನಮ್ಮ ಸರಕಾರದಲ್ಲಿ ನೌಕರಿ ಮಾಡಲು ಅವನು ತಯಾರಿಲ್ಲ ಎಂದು ಎದ್ದು ಹೋಗಿದ್ದಾನೆ.
ಇಡೀ ಭಾರತದ ಯುವಕರು ಇಂದು ಅವನ ಜತೆ ಇದ್ದಾರೆ. ಭಾರತದ ಎಲ್ಲರ ಹೃದಯದಲ್ಲಿ ಅವನು ಸ್ವಾತಂತ್ರ್ಯದ ಕಿಡಿ ಹಚ್ಚಿದ್ದಾನೆ. ಭಾರತೀಯ ಯುವಕರು ಅವನನ್ನು ಮುಂದಿನ ಪ್ರಧಾನಿ ಎಂಬಂತೆ ನೋಡುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅವನು ಸ್ಪರ್ಧಿಸಿ ಗಾಂಧೀಜಿಯ ಅಭ್ಯರ್ಥಿಯನ್ನೇ ಸೋಲಿಸಿದ್ದಾನೆ. 1930ರ ಜನವರಿ 26ರಂದು ಕಾಂಗ್ರೆಸ್ ಪಕ್ಷಅವನ ಪ್ರೇರಣೆಯಿಂದ ‘ಸಂಪೂರ್ಣ ಸ್ವರಾಜ್ ದಿನ’ವನ್ನು ಆಚರಣೆ ಮಾಡಿದೆ. ಆತನು ಭಾರಿ ಧೈರ್ಯಶಾಲಿ. ತಕಲಿ ನೂಲುವುದರಿಂದ ಭಾರತಕ್ಕೆ ಸ್ವಾತಂತ್ರ್ಯ ದೊರೆಯಲು ಸಾಧ್ಯವಿಲ್ಲ ಎಂದು ಗಾಂಧೀಜಿಗೆ ಪದೇಪದೆ ಅವನು ಸವಾಲು ಹಾಕುತ್ತಾನೆ. ಬಂದೂಕಿನ ಮೊನೆಯಿಂದ ಮಾತ್ರ ಸ್ವಾತಂತ್ರ್ಯ ಪಡೆಯಲು ಸಾಧ್ಯ ಎಂದು ಬಲವಾಗಿ ನಂಬಿದ್ದಾನೆ. ಎಲ್ಲ ಕಡೆ ಅದನ್ನೇ ಹೇಳುತ್ತಾನೆ. ಅವನಿಗೆ ಶಾಂತಿ ಮಂತ್ರದ ಮೇಲೆ ನಂಬಿಕೆ ಇಲ್ಲ.

ನಮ್ಮ ವೈಸರಾಯ್ ಅವನನ್ನು 11 ಬಾರಿ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಆದರೂ ಅವನು ಬುದ್ಧಿಯನ್ನೇ ಕಲಿಯದ ಮಹತ್ವಾಕಾಂಕ್ಷಿ!
ಕಲ್ಕತ್ತಾದ ಗೃಹಬಂಧನದಿಂದ ಅವನು ನಮ್ಮ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಜರ್ಮನಿ ಮತ್ತು ಇಟಲಿಗೆ ಹೋಗಿ ಹಿಟ್ಲರ್ ಮತ್ತು ಮುಸೊಲಿನಿಯ ಗೆಳೆತನ ಮಾಡಿ ಬಂದಿದ್ದಾನೆ. ಹಿಟ್ಲರ್ ಅವನ ಬಗ್ಗೆ ಭಾರಿ ಮೆಚ್ಚುಗೆ ಮಾತು ಹೇಳಿದನಂತೆ. ಮಹಾ ಗಟ್ಟಿತನ ಅವನದ್ದು.
ಸಬ್‌ಮೆರಿನ್‌ನಲ್ಲಿ 90 ದಿನ ಪ್ರಯಾಣ ಮಾಡಿ ಜಪಾನ್ ತಲುಪಿದ್ದಾನೆ. ಅಲ್ಲಿ ಎರಡನೇ ಮಹಾಯುದ್ಧಕ್ಕೆ ಹೋಗಿದ್ದ ಬ್ರಿಟಿಷ್ ಇಂಡಿಯಾ ಸೈನ್ಯದ 45,000 ಸೈನಿಕರ ಜತೆಗೆ ಮಾತಾಡಿದ್ದಾನೆ. ಅದರಲ್ಲಿ 25,000 ಸೈನಿಕರನ್ನು ಜಪಾನ್ ಸರಕಾರ ಭಾರತದ ನೆರವಿಗೆ ಕಳುಹಿಸಲು ಒಪ್ಪಿ ಆಗಿದೆ. ಎಂತಹ ಚಾಣಾಕ್ಷ ಅವನು.
ಜಪಾನ್ ಸರಕಾರ ಅವನಿಗೆ ವೈಮಾನಿಕ ದಳ, ಮದ್ದುಗುಂಡು ಎಲ್ಲವನ್ನೂ ಕೊಡಲು ಒಪ್ಪಿದೆ ಎನ್ನುವ ಸುದ್ದಿ ಬಂದಿದೆ. ಅದೇನೋ ‘ಆಜಾದ್ ಹಿಂದ್ ಫೌಜ್’ ಎಂಬ ಸೈನ್ಯವನ್ನು ಕಟ್ಟಿದ್ದಾನಂತೆ. ಸೈನಿಕರಿಗೆ ಆಧುನಿಕ ಶಸ್ತ್ರಗಳ ಬಗ್ಗೆ ತರಬೇತು ಕೊಡುತ್ತಿದ್ದಾನೆ ಎಂಬ ಸುದ್ದಿ ಬಂದಿದೆ.
‘ನನಗೆ ರಕ್ತ ಕೊಡಿ, ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ’ ಎಂದೆಲ್ಲ ಉರಿ ಚೆಂಡಿನ ಭಾಷಣ ಮಾಡುತ್ತಾನೆ. ಪ್ರತಿ ವಾಕ್ಯದ ಕೊನೆಗೆ ಜೈ ಹಿಂದ್ ಘೋಷಣೆ ಕೂಗುತ್ತಾನೆ. ಸಾವಿರ ಸಾವಿರ ಸೈನಿಕರು ಅವನನ್ನು ದೇವರ ಹಾಗೆ ನೋಡುತ್ತಾರೆ.
‘ಆಜಾದ್ ಹಿಂದ್ ಫೌಜ್’ ಭಾರತಕ್ಕೆ ಹೊರಟಿತು ಎಂದರೆ ನಮ್ಮ ಶತ್ರು ದೇಶಗಳೆಲ್ಲ ಅವನ ನೆರವಿಗೆ ನಿಲ್ಲುತ್ತವೆ. ಅದೇನೋ ‘ಚಲೋ ದಿಲ್ಲಿ’ ಎಂಬ ಘೋಷಣೆಯನ್ನು ತನ್ನ ಸೈನಿಕರಿಗೆ ಕೊಟ್ಟಿದ್ದಾನೆ. ಈ ಯುವಕ ಖಂಡಿತವಾಗಿ ನಮ್ಮ ನಿದ್ದೆ ಕೆಡಿಸಿದ್ದಾನೆ.

ನಮ್ಮದೇ ಬ್ರಿಟಿಷ್ ಇಂಡಿಯಾ ಸೇನೆಯಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಈಗ ಅವರು ನಮ್ಮ ವಿರುದ್ಧ ನಿಲ್ಲುತ್ತಾರೆ. ನಮ್ಮ ವಿರುದ್ಧ ದಂಗೆ ಏಳುತ್ತಾರೆ. ಅಲ್ಲಿಗೆ ನಾವು ಭಾರತದ ಮೇಲೆ ನಮ್ಮ ಬಿಗಿ ಹಿಡಿತ ಕಳೆದುಕೊಳ್ಳುವುದು ಖಂಡಿತ. ಇದುವರೆಗೆ ನಾವು ಭಾರತದಲ್ಲಿ ಯಾರ ಬಗ್ಗೆ ಕೂಡ ಇಷ್ಟೊಂದು ಆತಂಕಪಟ್ಟಿರಲಿಲ್ಲ. ಇವನೊಬ್ಬ ಎಲ್ಲಿಂದ ಬಂದನೋ ಸೈತಾನ?
ಹೀಗೆಂದು ಚರ್ಚಿಲ್ ದೀರ್ಘ ಉಸಿರು ತೆಗೆದುಕೊಂಡು ಹಿಂದಕ್ಕೆ ಒರಗಿ ಕೂತರು. ಒಂದು ಗುಟುಕು ವಿಸ್ಕಿ ಹೀರಿ ಅಲ್ಲಿಯೇ ಕಣ್ಣು ಮುಚ್ಚಿದರು. ವಿಸ್ಕಿ ಅವರಿಗೆ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡ ಅನುಭವ ಆಯಿತು.
ಅಮೆರಿಕದ ಆಗಿನ ಪ್ರಬಲ ಅಧ್ಯಕ್ಷ ರೂಸ್‌ವೆಲ್ಟ್ ಮುದುಕ ಚರ್ಚಿಲನ ಮಾತುಗಳನ್ನು ಆಲಿಸುತ್ತ ಕೂತಿದ್ದರು. ಅವರ ಕೈಯ್ಯಲ್ಲಿದ್ದ ಸಿಗಾರ್ ಇನ್ನೂ ಹೊಗೆ ಉಗುಳುತ್ತಿತ್ತು. ಅವರಿಗೆ ಕೇವಲ ಎರಡು ವರ್ಷಗಳ ಹಿಂದೆ ನಡೆದ ಪರ್ಲ್ ಹಾರ್ಬರ್ ದಾಳಿ, ಅದರಲ್ಲಿ ಅಮೆರಿಕಕ್ಕೆ ಆದ ಮುಖಭಂಗ ಎಲ್ಲವೂ ನೆನಪಿಗೆ ಬಂತು. ಅಲ್ಲಿಗೆ ಚರ್ಚಿಲ್ ಕಣ್ಣಲ್ಲಿ ಹೆಪ್ಪುಗಟ್ಟಿದ ಭೀತಿ ರೂಸವೆಲ್ಟ್ ಕಣ್ಣುಗಳಿಗೆ ವರ್ಗಾವಣೆ ಆಯಿತು. ಆತ ಸಿಗಾರ್ ಸಿಟ್ಟಿನಿಂದ ನೆಲಕ್ಕೆ ಎಸೆದು ಬೂದಿ ಬೂಟಿನಿಂದ ಒರೆಸಿದರು.

ಹೇಗೆ ನೇತಾಜಿ ಸುಭಾಷ್ ಚಂದ್ರ ಬೋಸ್‌ ಆಗಿನ ಬಲಿಷ್ಠ ರಾಷ್ಟ್ರಗಳಿಗೆ ಬಿಸಿತುಪ್ಪ ಆಗಿದ್ದರು ಎಂದು ನಿಮಗೆ ಇಷ್ಟು ಹೊತ್ತಿಗೆ ಅರ್ಥ ಆಗಿರಬಹುದು. ಬ್ರಿಟಿಷರು ನೇತಾಜಿ ಅವರಿಗೆ ಎಷ್ಟರ ಮಟ್ಟಿಗೆ ಹೆದರಿದ್ದರು ಎಂದು ನಾವು ಅರ್ಥ ಮಾಡಿಕೊಂಡರೆ ಸಾಕು.
ಮುಂದೆ 1945ರ ಆಗಸ್ಟ್ 18ರಂದು ಥೈಪೆಯಲ್ಲಿ ವಿಮಾನ ಅಪಘಾತವಾಗಿ ನೇತಾಜಿ ಸುಭಾಷ್ ಕಣ್ಮರೆ ಆಗದೆ ಹೋಗಿದ್ದರೆ…? ಅದರ ಹಿಂದೆ ಯಾರದ್ದಾದರೂ ಕೈವಾಡ ಇರಬಹುದೇ?
ಒಮ್ಮೆ ಯೋಚನೆ ಮಾಡಿ. ಜೈ ಹಿಂದ್.error: Content is protected !!
Scroll to Top