ಆಟೋರಿಕ್ಷಾ ಡಿಕ್ಕಿ ಪಾದಚಾರಿ ಗಂಭೀರ

ಅಪಘಾತವೆಸಗಿ ರಿಕ್ಷಾ ಸಮೇತ ಪಲಾಯನ ಮಾಡಿದ ರಿಕ್ಷಾ ಚಾಲಕ

ಕಾರ್ಕಳ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಆಟೋರಿಕ್ಷಾ ಡಿಕ್ಕಿ ಹೊಡೆದ ಘಟನೆ ಸೆ. 18 ರಂದು ರಾತ್ರಿ ಚಿಲಿಂಬಿ ಕಾಂತಾವರ ಕ್ರಾಸ್ ಬಳಿ ಸಂಭವಿಸಿದೆ. ಕಾರ್ಕಳ ಕಸಬ ಕುಂಟಲಪಾಡಿಯ ನಾಗರಾಜ ಶೆಟ್ಟಿ ಎಂಬವರು ಆಟೋರಿಕ್ಷಾದಲ್ಲಿ ಚಿಲಿಂಬಿ ಕಡೆಯಿಂದ ಬರುತ್ತಿರುವಾಗ ಕಾಂತಾವರ ಕ್ರಾಸ್‌ ಬಳಿ ವೇಗವಾಗಿ ಆಟೋರಿಕ್ಷಾವೊಂದು, ನಡೆದುಕೊಂಡು ಬರುತ್ತಿದ್ದ ಪಾದಚಾರಿಗೆ ಡಿಕ್ಕಿ ಹೊಡೆದು ನಿಲ್ಲದೆ ಪಲಾಯನ ಮಾಡಿದೆ. ರಸ್ತೆಗೆ ಬಿದ್ದ ಪಾದಚಾರಿಯನ್ನು ಉಪಚರಿಸಿ ಎಬ್ಬಿಸಿದಾಗ ಅವರು ತನ್ನ ಹೆಸರು ಇರ್ವತ್ತೂರಿನ ಕರಿಯ ಮೂಲ್ಯ ಎಂದಷ್ಟೇ ಹೇಳಿದ್ದಾರೆ. ಸ್ಥಳೀಯರು ಸೇರಿ ಗಾಯಗೊಂಡಿದ್ದ ಕರಿಯ ಮೂಲ್ಯ ಅವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಒಯ್ದು ಚಿಕಿತ್ಸೆ ಕೊಡಿಸಿ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ಒಯ್ಯಲಾಗಿದೆ. ಅಲ್ಲಿ ಅವರು ಒಳರೋಗಿಯಾಗಿ ದಾಖಲಾಗಿದ್ದಾರೆ. ಡಿಕ್ಕಿ ಹೊಡೆದು ಪಲಾಯನ ಮಾಡಿರುವ ಆಟೋರಿಕ್ಷಾದ ನಂಬರ್‌ KA-19 AA-6575 ಎಂದು ಸ್ಥಳೀಯರು ಗುರುತಿಸಿದ್ದಾರೆ. ನಾಗರಾಜ ಶೆಟ್ಟಿಯವರು ನೀಡಿದ ದೂರಿನ ಪ್ರಕಾರ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾಡ್ಜ್‌ನಲ್ಲಿ ಮಟ್ಕಾ ದಂಧೆ : ಇಬ್ಬರು ಸೆರೆ

ಹೆಬ್ರಿ : ಹೆಬ್ರಿ ಪೇಟೆಯ ಲಾಡ್ಜ್‌ವೊಂದರಲ್ಲಿ ನಡೆಯುತ್ತಿದ್ದ ಮಟ್ಕಾ ದಂಧೆಯನ್ನು ಭೇದಿಸಿರುವ ಪೊಲೀಸರು ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ. ಹೆಬ್ರಿ ಪೇಟೆಯಲ್ಲಿರುವ ಗಣೇಶ್‌ ಲಾಡ್ಜ್‌ನ ಕೊಠಡಿಯೊಂದರಲ್ಲಿ ಮಟ್ಕಾ ದಂಧೆ ನಡೆಯುತ್ತಿರುವ ಕುರಿತು ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ಸೋಮವಾರ ದಾಳಿ ಮಾಡಿದ ಹೆಬ್ರಿ ಪೊಲೀಸ್‌ ಠಾಣೆ ಉಪನಿರೀಕ್ಷಕ ಮಹೇಶ ಟಿ.ಎಂ. ನೇತೃತ್ವದ ಪೊಲೀಸ್‌ ತಂಡ ಆರೋಪಿಗಳಾದ ಸುಜಿತ್‌ ಮತ್ತು ಮಂಜುನಾಥ್‌ ಎಂಬಿಬ್ಬರನ್ನು ಬಂಧಿಸಿ 840 ರೂ. ನಗದು ಮತ್ತು ಮಟ್ಕಾ ಚೀಟಿ ಬರೆಯಲು ಉಪಯೋಗಿಸುತ್ತಿದ್ದ ಪರಿಕರಗಳನ್ನು ವಶಪಡಿಸಿಕೊಂಡಿದೆ. ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.

ಮಾರಿಗುಡಿ ಬಳಿ ನಿಲ್ಲಿಸಿದ್ದ ಬೈಕ್‌ ಕಳವು

ಕಾರ್ಕಳ : ಪೇಟೆಯ ಮಾರಿಗುಡಿ ಬಳಿ ನಿಲ್ಲಿಸಿದ್ದ ಬೈಕ್‌ ಕಳವಾದ ಘಟನೆ ಸೆ. 19 ರಂದು ಸಂಭವಿಸಿದೆ. ಪ್ರಶಾಂತ ಆಚಾರ್ಯ ಎಂಬವರು ಅನಂತಶಯನದಿಂದ ಕಾರ್ಕಳ ಪೇಟೆಗೆ ಬಂದು ಮಾರಿಗುಡಿ ಮುಂಭಾಗದಲ್ಲಿ ಬೈಕ್‌ ನಿಲ್ಲಿಸಿ ಲಾಕ್‌ ಮಾಡಿ ಹೋಗಿದ್ದರು. ಸಂಜೆ 5.15ಕ್ಕೆ ವಾಪಸು ಬಂದು ನೋಡಿದಾಗ ನಿಲ್ಲಿಸಿದಲ್ಲಿ ಬೈಕ್‌ ಇರಲಿಲ್ಲ. ಸುತ್ತಮುತ್ತ ಹುಡುಕಾಡಿದರೂ ಸಿಗದಾಗ ಬಳಿಕ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಲ್ಯಾ : ಜುಗಾರಿ ಆಡುತ್ತಿದ್ದ ಐವರ ಬಂಧನ

ಕಾರ್ಕಳ : ಕಲ್ಯಾ ಗ್ರಾಮದ ಪಡ್ಯಾ ಎಂಬಲ್ಲಿ ಸರಕಾರಿ ಹಾಡಿಯಲ್ಲಿ ಜುಗಾರಿ ಆಡುತ್ತಿದ್ದ ಐದು ಮಂದಿಯನ್ನು ಸೆ. 18 ರಂದು ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಪಳ್ಳಿ ಬಂದಲ್ಪಾಡಿ ಹೌಸ್ ರತ್ನಾಕರ (37), ಶಿರ್ವ ಮಟ್ಟಾರು ಸುದೀಪ್ (24), ಕಲ್ಯಾ ಗ್ರಾಮ ಪಡ್ಯಾದ ಸಂದೀಪ (28), ಕುಂಟಾಡಿ ಮೂಡುಬಾಲ್ಮೆ ಹೌಸ್ ಸಂತೋಷ್ ಪೂಜಾರಿ (35), ನಿಟ್ಟೆ ಅತ್ತೂರು ಚೇತನಹಳ್ಳಿ ದಾಮೋದರ ಆಚಾರ್ಯ (38) ಸೆರೆಯಾದವರು. ಆರೋಪಿಗಳಿಂದ 4690 ರೂ. ನಗದು ಮತ್ತು ಜುಗಾರಿ ಆಡಲು ಬಳಸಿದ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







































































error: Content is protected !!
Scroll to Top