ಹೊಸ ಸಂಸತ್ ಭವನದಲ್ಲಿ ಮೊದಲ ದಿನವೇ ಇತಿಹಾಸ
ನಾರಿ ಶಕ್ತಿ ವಂದನ್ ಅಧಿನಿಯಮ್‌ನಿಂದ ಮೂರನೇ ಒಂದು ಭಾಗ ಸ್ಥಾನ ಮಹಿಳೆಯರಿಗೆ ಮೀಸಲು
ಹೊಸದಿಲ್ಲಿ : ಹೊಸ ಸಂಸತ್ನಲ್ಲಿ ನಡೆದ ಕಲಾಪದ ಮೊದಲ ದಿನದ ಕಲಾಪದಲ್ಲೇ ಮಹಿಳಾ ಮೀಸಲಾತಿ ಮಸೂದೆ ಮಂಡನೆ ಮಾಡುವ ಮೂಲಕ ಕೇಂದ್ರ ಸರಕಾರ ಇತಿಹಾಸ ಸೃಷ್ಟಿಸಿದೆ. ಇದನ್ನು ನಾರಿ ಶಕ್ತಿ ವಂದನ್ ಅಧಿನಿಯಮ್ ಎಂದು ಹೆಸರಿಸಲಾಗಿದೆ. ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಒಟ್ಟು ಸ್ಥಾನದ ಮೂರನೇ ಒಂದು ಭಾಗ ಮಹಿಳೆಯರಿಗೆ ಮೀಸಲಾಗುವುದನ್ನು ಈ ಕಾಯಿದೆ ಖಾತರಿಪಡಿಸುತ್ತದೆ.
ದೇಶದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ಸೇರಬೇಕೆಂದು ನಾವು ಬಯಸುತ್ತೇವೆ. ದೇಶದಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿ ಪ್ರಕ್ರಿಯೆಯನ್ನು ಜಗತ್ತು ಗುರುತಿಸಿದೆ. ಇದು ಕ್ರೀಡೆಯಿಂದ ಸ್ಟಾರ್ಟ್‌ಅಪ್‌ಗಳವರೆಗೆ ಜೀವನದ ವಿವಿಧ ಆಯಾಮಗಳಲ್ಲಿ ಭಾರತೀಯ ಮಹಿಳೆಯರು ನೀಡಿದ ಕೊಡುಗೆಗಳಿಗೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಸೂದೆ ಕುರಿತು ಹೇಳಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ. ಹೊಸ ಸಂಸತ್ ಭವನದಲ್ಲಿ ಮಾಡಿದ ತಮ್ಮ ಮೊದಲ ಭಾಷಣದಲ್ಲಿ ಪ್ರಧಾನಿ ಮೋದಿ ಮಹಿಳಾ ಮೀಸಲಾತಿ ಮಸೂದೆಯನ್ನು ಘೋಷಿಸಿದರು. ಕಳೆದ 27 ವರ್ಷಗಳಲ್ಲಿ ಹಲವಾರು ಬಾರಿ ಮಸೂದೆಯನ್ನು ಮಂಡಿಸಲಾಗಿದೆ, ಆದರೆ ಪದೇಪದೆ ಅದಕ್ಕೆ ತಡೆಯೊಡ್ಡಲಾಗಿತ್ತು.
ಪ್ರತಿ ದೇಶದ ಇತಿಹಾಸದಲ್ಲಿ ಮೈಲುಗಲ್ಲುಗಳು ಎಂದು ಪರಿಗಣಿಸಲಾದ ಕೆಲವು ದಿನಗಳಿವೆ. ಇಂದು ನಾವು ಹೊಸ ಇತಿಹಾಸವನ್ನು ಸೃಷ್ಟಿಸಿದ್ದೇವೆ. ಪ್ರತಿಯೊಂದು ದೇಶದ ಅಭಿವೃದ್ಧಿಯ ಪಯಣದಲ್ಲಿ ಇಂತಹ ಮೈಲುಗಲ್ಲುಗಳು ಬರುತ್ತವೆ. ಇಂದಿನ ಕ್ಷಣ, ಇಂದಿನ ದಿನವು ಇತಿಹಾಸದಲ್ಲಿ ದಾಖಲಾಗಲಿದೆ ಎಂದು ನಾನು ಅತ್ಯಂತ ಆತ್ಮವಿಶ್ವಾಸ ಮತ್ತು ಹೆಮ್ಮೆಯಿಂದ ಹೇಳುತ್ತಿದ್ದೇನೆ ಎಂದರು.
ಹಿಂದಿನ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಅವರಿಗೆ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲು ಸಾಧ್ಯವಾಗಲಿಲ್ಲ. ‘ನಾರಿ ಶಕ್ತಿ ವಂದನ್ ಅಧಿನಿಯಮ್’ ಹೆಚ್ಚಿನ ಮಹಿಳೆಯರು ಸಂಸತ್, ವಿಧಾನಸಭೆಗಳ ಸದಸ್ಯರಾಗುವುದನ್ನು ಖಚಿತಪಡಿಸುತ್ತದೆ ಎಂದು ಹೇಳಿದ್ದಾರೆ
ಲೋಕಸಭೆಯಲ್ಲಿ ಸಚಿವ ಅರ್ಜುನ್ ರಾಮ್ ಮೇಘವಾಲ್ ವಿಧೇಯಕವನ್ನು ಮಂಡಿಸುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧರಿ ಅವರು ಮಸೂದೆಯ ಇತಿಹಾಸದ ಬಗ್ಗೆ ಪ್ರಶ್ನಿಸಿದ್ದು ಸಂಸತ್ನಲ್ಲಿ ಗದ್ದಲಕ್ಕೆ ಕಾಋಣವಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಷಾ, ಚೌಧರಿ ಅವರ ಹೇಳಿಕೆಗಳನ್ನು ಖಂಡಿಸಿದ್ದು ಅವರ ವಾದಗಳಿಗೆ ಪುರಾವೆಗಳನ್ನು ಪ್ರಸ್ತುತಪಡಿಸಬೇಕು ಎಂದು ಹೇಳಿದರು.