ಚೈತ್ರಾ ಕುಂದಾಪುರ ಇನ್ನೊಂದು ವಂಚನೆ ಪ್ರಕರಣ ಬೆಳಕಿಗೆ

ಬಟ್ಟೆ ಅಂಗಡಿ ತೆಗೆಸಿಕೊಡುವುದಾಗಿ ಕೋಟದ ಯುವಕನಿಂದ ಹಣ ಪಡೆದು ವಂಚನೆ

ಉಡುಪಿ : ಬಹುಕೋಟಿ ರೂ. ವಂಚನೆ ಪ್ರಕರಣದ ಮುಖ್ಯ ಆರೋಪಿಯಾಗಿ ಸೆರೆಯಲ್ಲಿರುವ ಭಾಷಣಕಾರ್ತಿ ಚೈತ್ರಾ ಕುಂದಾಪುರ ತನ್ನೂರಿನಲ್ಲಿ ಇನ್ನೊಂದು ವಂಚನೆ ಎಸಗಿರುವುದು ಬೆಳಕಿಗೆ ಬಂದಿದೆ. ಬಟ್ಟೆ ಅಂಗಡಿಯನ್ನು ತೆರೆದುಕೊಂಡುವುದಾಗಿ ನಂಬಿಸಿ 5 ಲಕ್ಷ ರೂ. ವಂಚಿಸಿದ ಕುರಿತು ಕೋಟಾ ಠಾಣೆಯಲ್ಲಿ ಸಂತ್ರಸ್ತರು ಚೈತ್ರಾ ವಿರುದ್ಧ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.


ಉಡುಪಿಯಲ್ಲಿ ವ್ಯಕ್ತಿಯೊಬ್ಬರಿಗೆ ಬಟ್ಟೆ ಅಂಗಡಿ ತೆರೆಯಲು ಅಗತ್ಯ ಅನುಮತಿ, ವ್ಯವಸ್ಥೆ ಮಾಡಿಕೊಡುವುದಾಗಿ ಚೈತ್ರಾ ಕುಂದಾಪುರ ನಂಬಿಸಿದ್ದಳು. 5 ಲಕ್ಷ ರೂ. ಪಡೆದು ಆ ನಂತರ ಬೆದರಿಸಿ ಹಣ ನೀಡದೆ ವಂಚಿಸಿದ್ದಾಳೆ ಎಂದು ಸಂತ್ರಸ್ತ ಆರೋಪಿಸಿದ್ದಾರೆ.


ಸುದಿನ ಪೂಜಾರಿ ಕೋಡಿ ಎಂಬವರು ವಂಚನೆಗೊಳಗಾದ ವ್ಯಕ್ತಿ. 2015ರಲ್ಲಿ ಸಮಾವೇಶ ಒಂದರಲ್ಲಿ ಸುದಿನ ಪೂಜಾರಿ ಅವರಿಗೆ ಚೈತ್ರಾ ಕುಂದಾಪುರ ಪರಿಚಯವಾಗಿದೆ. ರಾಜಕೀಯ ವ್ಯಕ್ತಿಗಳ ಬಳಿ ಕರೆದುಕೊಂಡು ಹೋಗಿ ನಂಬಿಸಿದ್ದ ಚೈತ್ರಾ, 2018-2023ರ ಅವಧಿಯಲ್ಲಿ ಅಂಗಡಿ ನಿರ್ಮಾಣಕ್ಕೆ 5 ಲಕ್ಷ ರೂ. ಹಂತ ಹಂತವಾಗಿ ಪಡೆದಿದ್ದಾಳೆ. 3 ಲಕ್ಷವನ್ನು ಚೈತ್ರಾ ಖಾತೆಗೆ ವರ್ಗಾಯಿಸಿದ್ದ ಸುದಿನ, ಉಳಿದ ಎರಡು ಲಕ್ಷ ಹಣವನ್ನ ನಗದು ರೂಪದಲ್ಲಿ ನೀಡಿದ್ದರು.


ಸುದಿನ ಅವರು ಲೈಸೆನ್ಸ್‌ ಕುರಿತು ಕೇಳಿದಾಗಲೆಲ್ಲ ಕೊನೆ ಹಂತದಲ್ಲಿದೆ, ಆಗುತ್ತದೆ ಎಂದೆಲ್ಲ ಸುಳ್ಳು ಹೇಳುತ್ತಿದ್ದ ಚೈತ್ರಾ, ಚುನಾವಣಾ ಪ್ರಚಾರ, ಭಾಷಣ, ಕಾರ್ಯಕಾರಿಣಿ ಸಭೆ, ಪಕ್ಷದ ಮುಖಂಡರ ಭೇಟಿ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದಳು. ಅನುಮಾನಗೊಂಡ ಸುದಿನ ಪೂಜಾರಿ ಒತ್ತಾಯಿಸಿದಾಗ ಸುಳ್ಳು ಅತ್ಯಾಚಾರ ಪ್ರಕರಣ ಹಾಕುತ್ತೇನೆ ಬೆದರಿಕೆ ಹಾಕಿದ್ದಾರೆ. ನನ್ನ ಮತ್ತೊಬ್ಬ ಸ್ನೇಹಿತ ಕೂಡಾ 1 ಲಕ್ಷ ಸಾಲ ಮಾಡಿ ಹಣ ನೀಡಿದ್ದಾರೆ. ಈಗ ಲೋನ್ ಅವನ ಹೆಸರಿನಲ್ಲಿ ಹಣ ಅವಳ ಹತ್ತಿರ ಇದೆ. ಇಂತಹ ಮೋಸದಲ್ಲಿ ತುಂಬ ಮಂದಿ ಸಿಕ್ಕಿಬಿದ್ದಿದ್ದಾರೆ. ಅವರೆಲ್ಲ ಬಂದು ದಾಖಲೆ ಸಮೇತ ದೂರು ನೀಡಬೇಕು ಎಂದು ಮಾಧ್ಯಮದ ಮುಂದೆ ಸುದಿನ ಪೂಜಾರಿ ಕೋಡಿ ಹೇಳಿದ್ದಾರೆ.
ಬ್ರಹ್ಮಾವರ ವೃತ್ತ ವ್ಯಾಪ್ತಿಯ ಕೋಟ ಪೊಲೀಸ್ ಠಾಣೆಯಲ್ಲಿ ಚೈತ್ರ ಕುಂದಾಪುರ ವಿರುದ್ಧ ದೂರು ನೀಡಿದ್ದು, ಅದರಂತೆ ಪೊಲೀಸರು ಚೈತ್ರಾ ವಿರುದ್ಧ 506 417, 420 ಐಪಿಸಿ‌ ಸೆಕ್ಷನ್ ಅಡಿ ಎಫ್ಐಆರ್ ದಾಖಲಿಸಿದ್ದಾರೆ.

error: Content is protected !!
Scroll to Top