ಕಾರ್ಕಳ : ಚೌತಿಯ ದಿನವಾದ ಮಂಗಳವಾರ ಕಾರ್ಕಳ – ಹೆಬ್ರಿ ತಾಲೂಕಿನಾದ್ಯಂತ ಗಣಪತಿ ಹಬ್ಬವನ್ನು ಸಂಭ್ರಮ, ಸಡಗರ ಮತ್ತು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ವಿವಿಧ ದೇವಸ್ಥಾನಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಕೆಯಾಯಿತು. ಉಭಯ ತಾಲೂಕಿನ 84 ಸ್ಥಳಗಳಲ್ಲಿ ವಿವಿಧ ಗಣೇಶೋತ್ಸವ ಸಮಿತಿಗಳು ಪ್ರತಿಷ್ಠಾಪಿಸಲ್ಪಟ್ಟ ವಿಘ್ನ ವಿನಾಶಕನಿಗೆ ಭಕ್ತಗಢಣ ಭಕ್ತಿಯಿಂದ ನಮಿಸಿತು. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಗಜವದನನ ಆರಾಧನೆ ನಡೆಯಿತು.
ಕಾರ್ಕಳ ಬಿ. ಮಂಜುನಾಥ ಪೈ ಸಾಂಸ್ಕೃತಿಕ ಸಭಾಭವನದಲ್ಲಿ 40ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ನಡೆಯಿತು. ಈ ವೇಳೆ ಏಕದಂತನಿಗೆ 18 ಲಕ್ಷ ರೂ. ಮೌಲ್ಯದ ಬೆಳ್ಳಿಯ ಪ್ರಭಾವಳಿಯನ್ನು ಸಮರ್ಪಿಸಲಾಯಿತು. ಜೋಡುರಸ್ತೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ 40ನೇ ವರ್ಷದ ಗಣೇಶೋತ್ಸವ ಜರುಗಿತು. ಕಾಬೆಟ್ಟು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ವೇಣುಗೋಪಾಲ ದೇವಸ್ಥಾನದಲ್ಲಿ 38ನೇ ವರ್ಷದ ಗಣೇಶೋತ್ಸವ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಸ್‌ಸ್ಟ್ಯಾಂಡ್ ಇದರ ವತಿಯಿಂದ ಬಸ್ ನಿಲ್ದಾಣದಲ್ಲಿ 16ನೇ ವರ್ಷದ ಗಣೇಶೋತ್ಸವ ನೆರವೇರಿತು. ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 15 ವರ್ಷದ ಗಣೇಶೋತ್ಸವ, ಬೈಲೂರು ಗಾಂಧಿಸ್ಮಾರಕ ಭವನದಲ್ಲಿ 43ನೇ ವರ್ಷದ ಹಾಗೂ ಹೆಬ್ರಿ ತಾಲೂಕು ಕುಚ್ಚೂರಿನಲ್ಲಿ 27ನೇ ವರ್ಷದ ಗಣೇಶೋತ್ಸವ ಜರಗಿತು. ತೆಳ್ಳಾರು ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗ-ದಾರಗ, ಆದಿ ಆಲಡೆ ಕ್ಷೇತ್ರದಲ್ಲಿ, ಬೈಲೂರು ಶ್ರೀರಾಮ ಮಂದಿರ, ಸೂರಾಲು, ದಿಡಿಂಬಿರಿ, ಮಾಳ, ಪಳ್ಳಿ ನಿಂಜೂರು, ರಂಗನಪಲ್ಕೆ, ಅಡಪಾಡಿ, ದುರ್ಗ, ತೆಳ್ಳಾರು ಮುಂಡ್ಲಿ ಹೀಗೆ ಎಲ್ಲಡೆ ಗಜಾನನ ಆರಾಧನೆ ಜರುಗಿತು.
ಹಣ್ಣಿನ ದರ ಯಥಾಸ್ಥಿತಿ – ಹೂವಿಗೆ ಏರಿಕೆ
ಗಣೇಶ ಹಬ್ಬದ ಪ್ರಯುಕ್ತ ಮಾರ್ಕೆಟ್ ನಲ್ಲಿ ತರಕಾರಿ, ಹೂ, ಹಣ್ಣು ಖರೀದಿ ಭರಾಟೆ ಜೋರಾಗಿಯೇ ಇತ್ತು. ಹಬ್ಬದ ಪ್ರಯುಕ್ತ ತರಕಾರಿ ಹಣ್ಣಿನ ದರದಲ್ಲಿ ಹೇಳುವಂತಹ ದರ ಏರಿಕೆ ಕಂಡುಬರದಿದ್ದರೂ ಹೂವಿನ ಬೆಲೆಯಲ್ಲಿ ಏರಿಕೆಯಾಗಿದೆ. ಒಂದು ಕೆ.ಜಿ. ಸೇಬು ಬೆಲೆ 100 ರೂ., ಮೂಸಂಬಿ ಹಣ್ಣು 50 ರೂ., ದ್ರಾಕ್ಷಿ 120-160 ರೂ., ದಾಳಿಂಬೆ 170 – 200 ರೂ., ಚಿಕ್ಕು 80 ರೂ. ಕದಳಿ ಬಾಳೆ 120 ರೂ.ಗೆ ಮಾರಾಟವಾಗುತ್ತಿತ್ತು. ಕಳೆದ ಒಂದು ತಿಂಗಳಿನಿಂದ ಇದೇ ಧಾರಣೆಯಿತ್ತು. ಕಾಕಡ ಒಂದು ಮೊಳ ಮಲ್ಲಿಗೆಗೆ 40 ರೂ., ಸೇವಂತಿಗೆ 20 ರೂ., ಒಂದು ಚೆಂಡು ಮಲ್ಲಿಗೆಗೆ 500 ರೂ. ಹಾಗೂ ಜಾಜಿ ಮಲ್ಲಿಗೆಗೆ 200 ರೂ. ದರವಿತ್ತು. ಹೂವಿನ ದರ ಎರಡು ದಿನಗಳ ಹಿಂದೆ ಏರಿಕೆ ಕಂಡುಬಂದಿದ್ದೂ ನಾಳೆಯಿಂದ ದರ ಇಳಿಕೆಯಾಗಲಿದೆ ಎಂದು ಹೂವಿನ ವ್ಯಾಪಾರಿ ತಿಳಿಸಿದರು.





