ಬೆಂಗಳೂರು : ಬಿಜೆಪಿ ಟಿಕೆಟ್ ಹಗರಣದಲ್ಲಿ ಮೂರನೇ ಆರೋಪಿಯಾಗಿರುವ ವಿಜಯನಗರ ಜಿಲ್ಲೆಯ ಹಿರೇಹಡಗಲಿ ತಾಲೂಕಿನ ಅಭಿನವ ಹಾಲಶ್ರೀ ಸ್ವಾಮೀಜಿಯವರನ್ನು ಅಪರಾಧ ನಿಗ್ರಹ ದಳದ ಪೊಲೀಸರು ಒಡಿಶಾದಲ್ಲಿ ವಶಕ್ಕೆ ಪಡೆದಿದ್ದಾರೆ. ಗೋವಿಂದ ಬಾಬು ಪೂಜಾರಿ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಬಂಧನದ ಬಳಿಕ ಸ್ವಾಮೀಜಿ ನಾಪತ್ತೆಯಾಗಿದ್ದರು.
ಹಾಲಶ್ರೀ ಅವರು ಆಶ್ರಮದಲ್ಲಿದ್ದ ಕಾರನ್ನು ಖುದ್ದಾಗಿ ಚಾಲನೆ ಮಾಡಿಕೊಂಡು ಹೋಗಿರುವ ಬಗ್ಗೆ ಮಾಹಿತಿ ಇತ್ತು. ಮೂರು ದಿನಗಳ ಹಿಂದೆ ಸ್ವಾಮೀಜಿಯವರ ಖಾಸಗಿ ಡ್ರೈವರ್ ಲಿಂಗರಾಜುನನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು ಆತನ ವಿಚಾರಣೆ ನಡೆಸಿದಾಗ, ಸ್ವಾಮೀಜಿಯವರು ಕಾರಿನಲ್ಲಿ ಮೈಸೂರಿಗೆ ಹೋಗಿದ್ದಾಗಿ ತಿಳಿಸಿದ್ದರು. ಅಲ್ಲಿ ಕಾರಿನ ನಂಬರ್ ಪ್ಲೇಟ್ ಕಳಚಿಟ್ಟು ಅಲ್ಲಿಂದ ಹೈದರಾಬಾದ್ ಗೆ ತೆರಳಿದ್ದಾಗಿ ಮಾಹಿತಿ ದೊರಕಿತ್ತು. ಹಾಗಾಗಿ, ಸಿಸಿಬಿ ಪೊಲೀಸರ ತಂಡವೊಂದು ಹೈದರಾಬಾದ್ ನಲ್ಲಿ ಹಾಲಶ್ರೀ ಪತ್ತೆಗಾಗಿ ಬಲೆ ಬೀಸಿತ್ತು.
ಸೆ. 19ರಂದು ಹಾಲಶ್ರೀ ಸ್ವಾಮೀಜಿಯವರನ್ನು ಒಡಿಶಾದಲ್ಲಿ ಬಂಧಿಸಲಾಗಿದೆ. ಒಡಿಶಾದ ಕಟಕ್ ನಲ್ಲಿನ ಖಾಸಗಿ ಹೋಟೆಲ್ ಒಂದರಲ್ಲಿ ತಂಗಿದ್ದ ಸ್ವಾಮೀಜಿಯನ್ನು ಪೊಲೀಸರು ವಶಕ್ಕೆ ಪಡೆದಿರುತ್ತಾರೆ. ಬುಧವಾರ ಸಂಜೆ ಹಾಲಶ್ರೀ ಅವರನ್ನು ಬೆಂಗಳೂರಿಗೆ ಕರೆತಂದು ಕೋರ್ಟ್‌ಗೆ ಹಾಜರು ಪಡಿಸಲಿದ್ದಾರೆ. ಹಾಲಶ್ರೀ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಜಾಮೀನು ಸಿಗೋ ಮುನ್ನವೇ ಸಿಸಿಬಿ ಪೊಲೀಸರಿಂದ ಅರೆಸ್ಟ್ ಆಗಿರುತ್ತಾರೆ.
ವಂಚನೆ ಪ್ರಕರಣ : ಅಭಿನವ ಹಾಲಶ್ರೀ ಸ್ವಾಮೀಜಿ ಬಂಧನ
