ಕಾರ್ಕಳ : ನಗರದ ವಿವಿಧೆಡೆ ಬೀದಿನಾಯಿಗಳ ಹಾವಳಿ ಹೆಚ್ಚಾಗಿರುವುದು ವಾಹನ ಸಂಚಾರಕ್ಕೆ ತೊಂದರೆಯನ್ನುಂಟು ಮಾಡುತ್ತಿದೆ. ಹಿಂಡು ಹಿಂಡಾಗಿ ನಾಯಿಗಳು ಅಡ್ಡಾದಿಡ್ಡಿ ಓಡಾಡುತ್ತಿರುವುದರಿಂದ ಪಾದಚಾರಿಗಳು, ದ್ವಿಚಕ್ರ ಸವಾರರ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
ಕಾರ್ಕಳ ಬಸ್ ನಿಲ್ದಾಣ, ಸ್ವರಾಜ್ ಮೈದಾನ, ಬಂಡಿಮಠ, ಸಾಲ್ಮರ, ತಾಲೂಕು ಕಚೇರಿ ಜಂಕ್ಷನ್ ಹೀಗೆ ನಗರದೆಲ್ಲೆಡೆ ಬೀದಿನಾಯಿಗಳ ಕಾಟ ವಿಪರೀತವಾಗಿದೆ. ಇವುಗಳ ಉಪಟಳದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ದ್ವಿಚಕ್ರ ಸವಾರರನ್ನು ಬೀದಿನಾಯಿಗಳ ಅಟ್ಟಿಸಿ ಸಾಗುತ್ತಿದೆ. ಹೀಗಾಗಿ ಹಲವು ಬಾರಿ ದ್ವಿಚಕ್ರಗಳು ಅಪಘಾತಕ್ಕೀಡಾದ ನಿದರ್ಶನಗಳಿವೆ.
ವಿದ್ಯಾರ್ಥಿಗಳಲ್ಲಿ ಆತಂಕ
ವಿದ್ಯಾರ್ಥಿಗಳು ಶಾಲೆಗೆ ನಡೆದುಕೊಂಡು ಹೋಗುವಾಗ ನಾಯಿಗಳ ಗುಂಪು ಒಂದಕ್ಕೊಂದು ಕಚ್ಚಾಡುತ್ತಾ ಶರವೇಗದಿಂದ ಓಡಿ ಬರುತ್ತವೆ. ಇದರಿಂದ ವಿದ್ಯಾರ್ಥಿಗಳು ಪ್ರಾಣ ರಕ್ಷಣೆಗಾಗಿ ಓಡುವ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ಅನೇಕ ಮಂದಿ ವಿದ್ಯಾರ್ಥಿಗಳಿಗೆ ಬೀದಿನಾಯಿಗಳು ಕಚ್ಚಿರುತ್ತಿದೆ. ಹುಚ್ಚು ನಾಯಿಗಳು ಆಕ್ರಮಣ ಮಾಡಿದಲ್ಲಿ ಅದರ ಪರಿಣಾಮ ಗಂಭೀರವಾಗಿರಲಿದೆ. ಇನ್ನು ರಸ್ತೆಯುದ್ದಕ್ಕೂ ಬೀದಿ ನಾಯಿಗಳದ್ದೆ ಕಾಟವಿರುವುದರಿಂದ ಕೆಲ ಅಂಗಡಿಗಳಿಗೂ ಜನ ಬರಲು ಹಿಂದೇಟು ಹಾಕುತ್ತಿದ್ದಾರೆ.
ತಕ್ಷಣ ಕ್ರಮ ಕೈಗೊಳ್ಳಲಿ
ಒಟ್ಟಾರೆಯಾಗಿ ಬೀದಿ ನಾಯಿಗಳಿಂದಾಗಿ ಇಲ್ಲಿನ ಪರಿಸರದ ಜನತೆಗೆ, ಅಂಗಡಿಗಳಿಗೆ, ಇಲ್ಲಿ ಸಂಚರಿಸುವವರಿಗೆ ಅಪಾಯದ ಆತಂಕವಿದೆ. ಪ್ರತಿನಿತ್ಯ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಓಡಾಡುವ ಈ ಪರಿಸರದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಸಂಬಂಧಪಟ್ಟ ಆಡಳಿತ ವ್ಯವಸ್ಥೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬೀದಿನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಲು ಯಾವ ಸಂಸ್ಥೆಯವರೂ ಮುಂದೆ ಬರುತ್ತಿಲ್ಲ. ಪುರಸಭೆ ಮೂರು ಮೂರು ಬಾರಿ ಟೆಂಡರ್ ಪ್ರಕಟನೆ ನೀಡಿದಾಗ್ಯೂ ಪ್ರಯೋಜನವಾಗಿಲ್ಲ. ಹೀಗಾಗಿ ಬೀದಿನಾಯಿಗಳ ಉಪಟಳ ನಿಲ್ಲಿಸುವುದು ಪುರಸಭೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ರೂಪಾ ಶೆಟ್ಟಿ
ಮುಖ್ಯಾಧಿಕಾರಿ, ಪುರಸಭೆ ಕಾರ್ಕಳ