ಒಂದು ಕಾಲಕ್ಕೆ ಸೃಷ್ಠಿಯ ಸಮಯವೂ. . . . ಪ್ರಳಯ ಕಾಲವೂ ಏಕಕಾಲವಾಗುವ ಸಂದರ್ಭ ಶುದ್ಧಾತ್ಮ ಶಕ್ತಿಯೊಂದು ತನ್ನ ಪ್ರಖರ ನಿಶ್ವಿತ ಪ್ರಭೆಯಿಂದ ಪ್ರಪಂಚ ಸೃಷ್ಠಿಯ ಸಂಕಲ್ಪ ಮಾಡಿಕೊಂಡಿತು. ಆ ಪ್ರಭೆಯು ಅಗ್ನಿಯಾಗಿ, ಅಗ್ನಿಗೆ ಆತ್ಮ ಚೈತನ್ಯವೂ ಆಹುತಿಯಾಗಿ “ವಿಶ್ವ” ವೆಂಬ ಬ್ರಹ್ಮಾಂಡದ ಪುನರ್ಭಾವಕ್ಕೆ ನಾಂದಿ ಹಾಡಿತು. ನಭೂತೋ ಆಗಿರುವ ಕಾಲದಲ್ಲಿ ಬ್ರಹ್ಮಾಂಡದ ಭವಿಷ್ಯಕ್ಕೆ ಬದುಕು ಕೊಡುವ ದೃಷ್ಠಿಯಿಂದ ತನ್ನ ಲೀಲೆಯನ್ನು ಸೃಷ್ಠಿ-ಸ್ಥಿತಿ-ಲಯ-ತಿರೋದಾನ-ಅನುಗ್ರಹಗಳೆಂಬ ಕಾರ್ಯ ಪ್ರಕಲ್ಪದಲ್ಲಿ ತೊಡಗಿಸಿಕೊಂಡಿತೆಂದು ಸನಾತನ ಧರ್ಮ ಮೂಲವಾಗಿರುವ ವೇದವು ಭಗವಂತನ ಕುರಿತು ಆದೇಶ ನೀಡುತ್ತದೆ.
ಸಕಲ ಜಗತ್ತಿಗೂ – ಜಗತ್ತಿನ ಸಕಲ ನಿರ್ಮಾಣಕ್ಕೂ ಯಾರು ಕಾರಣನಾಗಿರುವನೋ? ಅವನು ಒಬ್ಬನೇ ಆಗಿದ್ದಾನೆ “ಯೋದೇವಾನಾಂ ನಾಮಧಾ ಏಕ ಏವ” (ಋಗ್ವೇದ) ಎಂದು ವೇದನುಡಿ. ಚರಾಚರಾತ್ಮಕ ರೂಪದ ಈ ಜಗತ್ತಿನ ಸಂಚರಿಸಬಹುದಾದ ಮನುಷ್ಯ -ಪ್ರಾಣಿ – ಪಕ್ಷಿಗಳು, ಚಲನ ಶಕ್ತಿಯಿಲ್ಲದ ಚೈತನ್ಯ ರೂಪದ ವೃಕ್ಷ ಸಂಕುಲಗಳು, ನಿಶ್ಚಲವಾದ ಪರ್ವತಾದಿಗಳ ಸೃಷ್ಠಿಗೆ ಕಾರಣನಾದ ಪರಮೋಚ್ಛ ಶಕ್ತಿಗೆ “ವಿಶ್ವಕರ್ಮಾ” ಎಂದು ಹೆಸರು.
ಕಾಲಾತೀತವಾದ ಸೃಷ್ಟಿಯ ಶಕ್ತಿ ಕಾಲವಾಗಿ ಪರಿಣಮಿಸಿತು. ತನಗೆ ತಾನೇ ಪ್ರಶ್ನೆಯನ್ನೂ…ಉತ್ತರವನ್ನೂ….ನಿಯೋಜಿಸುತ್ತಾ ಭವಿಷ್ಯದಲ್ಲಿ “ಸಂಪ್ರಶ್ನಾ”ನಾಗಿ ಉಳಿದು ಕಣ್ಣ ದೃಷ್ಠಿಗೆ ತಿಳಿಯದವನಾದ. ಒಂದೇ ಆಗಿದ್ದವನು ಬಹುವಾಗುವ ಇಚ್ಛೆಯನ್ನು ಪ್ರಕಟಪಡಿಸುವ ಕಾಲವು ಪ್ರಪಂಚ ಆಗಲ್ಪಟ್ಟಿತು. ಸ್ವೀಕರಿಸಬಲ್ಲ-ತಿರಸ್ಕರಿಸಬಲ್ಲ ಹಾಗೂ ಆಧಾರ ಸ್ವರೂಪನೂ ನಿರಾಧಾರವಾಗಿರುವವನೂ ಆದ ಭಗವಂತ ಭೂಮಿ(ಪೃಥ್ವಿ), ನೀರು(ಆಪ:), ತೇಜ:(ಅಗ್ನಿ), ವಾಯು(ಗಾಳಿ), ಆಕಾಶ(ಅವಕಾಶ)ವಾಗಿ ಯೋಜಿಸಲ್ಪಟ್ಟ. ಈ ಐದು ಭೂತಗಳು ಸೇರಿ ಒಂದಾದಾಗ ಮಾತ್ರ ಪ್ರಪಂಚ ಆಗಲ್ಪಡುವುದು. ಹಾಗಾಗಿಯೇ ಈ ವಿಶ್ವಕರ್ಮಾ ಎನ್ನುವ ಭಗವತ್ ಶಕ್ತಿಯನ್ನು “ತಸ್ಯಾಚ್ಛ ದೇವಾ ಬಹುದಾ ಸಂಪ್ರಸೂತಾ:” ಎಂದು ವೇದೋಪನಿಷತ್ತುಗಳು ಕೊಂಡಾಡಿದವು. ಋಗ್ವೇದದಲ್ಲಿ ನಿರೂಪಿಸಿದ ಹಾಗೇ ಬಹು ಆಗಿರುವವನು ಒಂದಾಗಿದ್ದಾನೆ ಎಂದು ಹೇಳಿರುವಾಗ, ಬಹುವಾಗಿರುವುದಾದರೂ ಹೇಗೆ ?
ಗ್ರಹಿಸಬಲ್ಲ – ಸ್ರವಿಸಬಲ್ಲ ಸ್ಥಳವನ್ನು ಮುಖ ಎಂದು ಕರೆಯುತ್ತಾರೆ. ಈ ಜಗತ್ತು ಪಂಚಭೂತಗಳಿಂದ ಆವೃತವಾಗಿರುವುದರಿಂದ ಒಬ್ಬನಾದ ಪರಮೇಶ್ವರ ಪಂಚಮುಖಿಯಾಗಿ ನಿರೂಪಿಸಲ್ಪಟ್ಟ. ಪಂಚಭೂತಗಳು ಒಂದಕ್ಕೊಂದು ಸ್ಪರ್ಶ ಆಗುವ ಕಾಲದಲ್ಲಿ ಇನ್ನೊಂದನ್ನು ಸೃಷ್ಠಿಮಾಡುವ ಕಾರ್ಯವನ್ನು ಎಸಗುವ ಮುಖಾಂತರ “ಸಹಸ್ರಶೀರ್ಷ”ನಾದ. ಪ್ರಪಂಚದಲ್ಲಿ ಪಂಚಸತ್ವವನ್ನು ವಿಶ್ವಕ್ಕೆ ಕೊಡುವ ಸಮಯದಲ್ಲಿ ಸದ್ಯೋಜಾತ ವಾಮದೇವ, ಅಘೋರ, ತತ್ಪುರುಷ, ಈಶಾನ ಎಂಬ ಐದು ದೇವತಾ ಸ್ವರೂಪವನ್ನು ಪಡೆದುಕೊಂಡನು. ಇದು ದೇವನ ಅತ್ಯಂತ ಶ್ರೇಷ್ಠವಾದ ಅತೀ ಎತ್ತರದ ಪದವಿ. ಊಧ್ರ್ವ ಸ್ಥಾನವನ್ನು ಪಡೆದು ಬ್ರಹ್ಮಾಂಡವನ್ನು ಕಾಪಾಡುವವನು ಬ್ರಹ್ಮನೆನಿಸಿಕೊಳ್ಳುತ್ತಾನೆ. ಹಾಗಾಗಿ ಈ ದೇವನಿಗೆ “ಪರಂಬ್ರಹ್ಮ”ನೆಂದು ಹೆಸರು.
ಮನು, ಮಯ, ತ್ವಷ್ಠ, ಶಿಲ್ಪಿ, ವಿಶ್ವಜ್ಞ ರೆಂಬ ಐದು ಬ್ರಹ್ಮರ ಸೃಷ್ಠಿಯು ಪರಂಬ್ರಹ್ಮನಿಂದಾಯಿತು. ಬ್ರಹ್ಮ ಎಂದರೆ ಪಂಡಿತ ಎಂದು ಅರ್ಥೈಸುವ ನಿಟ್ಟಿನಲ್ಲಿ ಅಪಾರ ಜ್ಞಾನವಂತರಾಗಿ ಮುಂದುವರೆಯುತ್ತಾರೆ. ಸೃಷ್ಟಿಕರ್ತನ ಆಯುಷ್ಯದ ಪೂರ್ವಾರ್ಧ ಕಳೆದು ಪರಾರ್ಧದ ಕಲ್ಪಾಂತರದ ಕಾಲದಲ್ಲಿ ಬದಲಾವಣೆಯನ್ನು ಕಾಣುತ್ತಾ ಕರ್ಮ, ಜ್ಞಾನಸಂಪನ್ನರಾದ ಋಷಿ ಪರಂಪರೆಯು ಕಾಣಲ್ಪಡುತ್ತದೆ. ಕಲ್ಪದೊಳಗಿರುವ ಯುಗಾಂತರದಲ್ಲಿ ಬಹುಮುಖವಾದ ಜ್ಞಾನ ಸಂಪತ್ತು ಬ್ರಹ್ಮ ತೇಜಸ್ಸುಗಳು ಸಾನಗ, ಸನಾತನ, ಅಹಭೂನ, ಪ್ರತ್ನ, ಸುಪರ್ಣ ರೆಂಬ ಐದು ಇಷ್ಠಿಕೋಪಾಸಕರಾದ ಋಷಿ ಪರಂಪರೆಯಿಂದ ಬೆಳೆಯಿತು.
ಪಂಚಭೂತಗಳ ಸ್ಥಿತಿಯ ವ್ಯವಸ್ಥೆಗಾಗಿ ಭಗವದ್ವಾಣಿಯಾಗಿ ವೇದಗಳು ಪ್ರಸರಿಸಿದವು. ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ, ಪ್ರಣವವೇದ (ಶುಕ್ಲಯಜುರ್ವೇದ) ಎಂಬ ಐದು ವೇದಗಳು ಸೃಷ್ಠಿಯ ವ್ಯವಹಾರ ಕ್ರಿಯೆಗಳಿಗೆ ಸಾಕಾರವಾದವು. ಯುಗ ಮಹಿಮೆಯ ಕಾರಣದಿಂದ ವೇದಗಳು ನಾಲ್ಕು ಆದವು. ಅದು ಸಂಕೀರ್ಣವಾಗಿ “ವೇದತ್ರಯೀ” ಎನ್ನುವಲ್ಲಿಗೆ ಬಂದಿರುವುದು ನಮ್ಮ ದೌರ್ಭಾಗ್ಯ. ಅದು ಏನೇ ಇರಲಿ. ಇರುವ ವೇದವು ಸಾರುವಂತೆ ಐದು ವೇದಗಳಲ್ಲಿ ಮಾನನೀಯವಾಗಿ ಸ್ಥಾನ ಪಡೆದಿರುವ “ವಿಶ್ವಕರ್ಮಾಸೂಕ್ತ”ದ ಮಂತ್ರಗಳು ಸಾರುವ ಅರ್ಥದಿಂದ ವಿಶ್ವಕರ್ಮನೇ ಸೃಷ್ಠಿಗೆ ಮೂಲ ಎಂದು ನಮಗೆ ತಿಳಿಯುವುದು.
ಸೃಷ್ಠಿಯ ಹಿಂದೆ ಕೈಚಳಕ ಮಾಡಿದ ದಿವ್ಯಚೇತನಾ ಶಕ್ತಿ ವಿಶ್ವಕರ್ಮ ದೇವರು ಎಂದು ಸಾಬಿತಾಗುತ್ತದೆ. ಸಹಸ್ರಮುಖಿಯಾದ ಭಗವಂತ ಪಂಚ ಮುಖಿಯಾಗಿ ಇದ್ದು, ಚತುರ್ಮುಖ ಬ್ರಹ್ಮನಾಗಿ ಲೋಕಮುಖಕ್ಕೆ ಕಾಣುವ ಕಾಲದಲ್ಲಿ ಬ್ರಹ್ಮ, ವಿಷ್ಣು, ರುದ್ರ, ಇಂದ್ರ, ಸೂರ್ಯರೆಂಬಂತೆ ಪುರಾಣ ಪುರುಷ ಸ್ವರೂಪದಲ್ಲಿ ಜಗದ್ರಕ್ಷಕರಾಗಿ ಆವಿರ್ಭವಿಸುತ್ತಾರೆ. ಕಳೆದ ಇಪ್ಪತ್ತೇಳು ಚತುರ್ಯುಗಳ ಕಾಲದಲ್ಲಿ ಬದಲಾವಣೆಯಾಗುತ್ತಾ ಬಂದಿರುವ ದೇವತಾ ಸತ್ಯ ಯುಗಗಳು ಇಂದಿಗೆ ಸ್ಮರಣೀಯವಾಗಿರುವಂತಹದು. ಪಂಚಭೂತ್ಮಾಕವಾದ ಭೂಮಿಕೆಯಲ್ಲಿ ಪಂಚೇದ್ರಿಯ ಶಕ್ತಿಯಿಂದ ನಿರೂಪಣೆಗೊಂಡಿರುವ ಈ ಪ್ರಪಂಚದಲ್ಲಿ ನಾವು ಬಿಂದು ಮಾತ್ರ. ಸತ್ಯ ಯುಗಗಳ ಕಾಲದಲ್ಲಿ ಬದುಕಿಗೆ ಅಥವಾ ಹುಟ್ಟುವಿಕೆಗೆ ಮತ್ತು ಅಂತ್ಯಕ್ಕೆ ಹಾಗೂ ಮೋಕ್ಷ ಎನ್ನುವ ತ್ರಿಕರಣಶುದ್ಧ ಪದವಿಗೆ ಅರ್ಹತಾ ಪತ್ರವನ್ನು ಕೊಡುವ ದೇವರ ದೇವನಾದ ವಿಶ್ವಕರ್ಮ ದೇವರ ಪೂಜೆಯನ್ನು ಮಾಡುವುದು ಮನುಕುಲ ಪ್ರಪಂಚಕ್ಕೆ ಅತ್ಯಂತ ಶ್ರೇಷ್ಠ ಕರ್ತವ್ಯವಾಗಿರುತ್ತದೆ. ವೇದ ಮಂತ್ರ ದೃಷ್ಠಾರರಾಗಿರುವ ಋಷಿ ಮಂಡಲದಲ್ಲಿ ಸ್ವರ್ಣ ಕಿರೀಟಿಯಾಗಿ ಅಭಿಷಿಕ್ತನಾದ ಭೌವನ ಮಹರ್ಷಿಯೇ ಈ ವಿಶ್ವಕರ್ಮ ಸೂಕ್ತದ ದೃಷ್ಠಾರ.
ಭೌವನ ಋಷಿಯೇ ಈ ಪ್ರಪಂಚದ ಸೃಷ್ಠಿಗೆ ಕಾರಣ ಯಾರು ಎಂದು ತಿಳಿಯಲು ತಪಸ್ಸನ್ನಾಚರಿಸಿ ತಪೋಬಲದಿಂದ ಭಗವತ್ ಶಕ್ತಿಯಾದ ವೇದ ವಾಣಿಯ ಅಂತರ್‍ಶ್ರವಣ ಶಕ್ತಿಗೆ ಕೇಳಲ್ಪಡುತ್ತದೆ. ಆ ವೇದವಾಣಿಯನ್ನು ಭೂಮಂಡಲದಲ್ಲಿ ಇರಿಸಿದವನೇ ಈ ಭೌವನ ಋಷಿ. ಹಾಗಾಗಿ ಈ ಜಗತ್ತಿಗೆ ಭುವನ ಎಂಬ ಹೆಸರು ಇದೆ. ಜಗತ್ತಿನೆಲ್ಲೆಡೆ ಹರಡಿಕೊಂಡಿರುವ ಅಪರಿಮಿತವಾಗಿ ದಿವ್ಯ ಶಕ್ತಿ ನಮ್ಮೊಳಗೆ ಸೇರಿ, ಪಂಚೇದ್ರಿಯ, ಕರ್ಮೇಂದ್ರಿಯಗಳಾಗಿ, ಬುದ್ಧಿ, ಮನಸ್ಸುಗಳೊಂದಿಗೆ ಲೋಕೋನ್ನತಿಗಾಗಿ ಪಂಚಕ್ರಿಯೆಗಳನ್ನು ತಮ್ಮ ಪಾಲಿಗೆ ಭೋಧಿಸಿದ್ದಾರೆ.
ಸಾನಗ ಋಷಿ ಪರಂಪರೆ – ಕಬ್ಬಿಣದಿಂದ ಲೋಹ ಶಿಲ್ಪ (ಅಯಶ್ಶಿಲ್ಪ)
ಸನಾತನ ಋಷಿ ಪರಂಪರೆ – ಮರದಿಂದ ಕಾಷ್ಠ ಶಿಲ್ಪ
ಅಹಭೂನಸ ಋಷಿ ಪರಂಪರೆ – ಕಂಚು ಹಿತ್ತಾಳೆ ತಾಮ್ರದಿಂದ ಎರಕ ಶಿಲ್ಪ
ಪ್ರತ್ನಸ ಋಷಿ ಪರಂಪರೆ – ಕಲ್ಲುಬಂಡೆಯಿಂದ ಶಿಲಾ ಶಿಲ್ಪ
ಸುಪರ್ಣಸ ಋಷಿ ಪರಂಪರೆ – ಚಿನ್ನ ಬೆಳ್ಳಿಯ ಸ್ವಣ ಶಿಲ್ಪ (ರತ್ನ ಖಚಿತ ಆಭರಣ ಶಿಲ್ಪ)
ಈ ರೀತಿಯಾಗಿ ಸೃಷ್ಟಿಕರ್ತ ಭಗವಂತನಿಂದ ಪ್ರಣೀತವಾದ ಪಂಚಕರ್ಮಗಳನ್ನು, ತಮ್ಮ ಕುಲಕಸುಬಾಗಿ ನಿರ್ವಹಿಸಿಕೊಂಡು ಬಂದಿರುವ ಪರಂಪರೆಗೆ ವೈಶ್ವಕರ್ಮಣ ಸಮಾಜ, ವಿಶ್ವಬ್ರಾಹ್ಮಣರು, ಶಿಲ್ಪಿ ಬ್ರಾಹ್ಮಣರು ಎಂದು ಲೋಕಕೀರ್ತಿಯ ಮನ್ನಣೆಗೆ ಪಾತ್ರರಾಗಿದ್ದಾರೆ. ವೇದಾಧ್ಯಯನ ಮತ್ತು ಶಾಸ್ತ್ರೀಯ ಶಿಲ್ಪ ನಿರ್ಮಾಣಕ್ಕೆ ಕಲಿಯುಗದಲ್ಲಿ ಬ್ರಾಹ್ಮಣ್ಯವು ಅತ್ಯಂತ ಸಾಮಿಪ್ಯವರ್ತಿಯಾಗಿರುವುದು. ಶಿಲ್ಪ, ಜ್ಞಾನ, ಕರ್ಮ, ಬುದ್ಧಿ, ಮನಸ್ಸು ಇವುಗಳನ್ನು ತನ್ನ ಸವೀರ್ಯತ್ವದಲ್ಲಿ ಇರಿಸಿಕೊಂಡ ಕರ್ಮಸಾಧನೆ ಮಾಡುವವರಿಗೆ “ಸ್ಥಪತಿ” ಎನ್ನುತ್ತಾರೆ. ನಮ್ಮ ಇಡೀ ಜಗತ್ತಿನ ನಿರ್ಮಾತೃವಾದ ಸ್ಥಪತಿ ವಿಶ್ವಕರ್ಮ ದೇವರಿಗೆ ಅನಂತ ಅಭಿವಾದನೆಯನ್ನು ನಾವು ನಿತ್ಯನಿರಂತರ ಸಮರ್ಪಣೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತೀವರ್ಷ ಕನ್ಯಾಮಾಸದ ಪ್ರಾರಂಭದ ದಿನ ಸಂಕ್ರಮಣದಂದು ಸೃಷ್ಟಿಕರ್ತ “ವಿಶ್ವಕರ್ಮ ದೇವರ ಪೂಜಾ ದಿನ” ಎಂದು ಆಚರಿಸಿಕೊಂಡು ಬಂದಿರುವುದು ಸೂತ-ಶೌನಕ ಮುನಿಗಳ ಕಾಲದಿಂದ ಇದೆ. ಇಂದಿಗೂ ಸನಾತನ ಧರ್ಮದ ಈ ಪುಣ್ಯಭೂಮಿಯ ಪ್ರಜಾಪ್ರಭುತ್ವದ ಆಡಳಿತ ಸಮಯದಲ್ಲಿಯೂ ರಾಷ್ಟ್ರಮಾನ್ಯತೆ ಪಡೆದಿರುವ ಪೂಜಾದಿನ ಕನ್ಯಾಸಂಕ್ರಮಣದ ದಿನ. ಈ ಪುಣ್ಯಕಾಲದಲ್ಲಿ ಭಗವತ್ ಸ್ಮರಣೆಯಲ್ಲಿ ನಿರತರಾಗಿರುವ ಮನುಕೋಟಿ ಕುಲಗಳಿಗೆ ಸರ್ವೇಶ್ವರನಾದ ಪರಮಾತ್ಮ ನಮ್ಮನ್ನೆಲ್ಲಾ ಹರಸಲೆಂದು ಪ್ರಾರ್ಥನೆ. ಜೀವನದಲ್ಲಿ ಕ್ಷೋಭೆ ಇಲ್ಲದೆ ಸಜ್ಜನ ಸುಬಂಧುಗಳೊಂದಿಗೆ ಸಸ್ನೇಹದ, ಸನ್ಮಿತ್ರತ್ವದಲ್ಲಿ ಬೆಳೆದು ಉತ್ತಮ ಶಿಲ್ಪಜ್ಞಾನ, ಬ್ರಹ್ಮಜ್ಞಾನ, ವೇದಜ್ಞಾನ, ಆಚಾರ, ವಿಚಾರ, ಆಹಾರ, ಸಂಸ್ಕೃತಿ, ಸಂಸ್ಕಾರ ಜ್ಞಾನ ಸಂಪನ್ನರಾಗಿ ಬಾಳಿ ಬದುಕುವ ಭಕ್ತ ಜನಾಂಗಕ್ಕೆ ಬಂಗಾರದಂತಹ ಭವಿಷ್ಯ ನೀಡಲೆಂದು ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನಲ್ಲಿ ನಾವೆಲ್ಲರೂ ಕರ ಜೋಡಿಸಿ, ಶಿರಭಾಗಿ ಮನಃಪ್ರಾರ್ಥನೆಯನ್ನು ಮಾಡೋಣ.
