ಹರಿಪ್ರಸಾದ್ ಪರ ಮಾತನಾಡಿದ್ದಕ್ಕೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ ಸ್ವಾಮೀಜಿ
ಬೆಂಗಳೂರು: ಶಿಕ್ಷಣ ಸಚಿವ ಮಧು ಬಂಗಾರಪ್ಪ ಬೆಂಬಲಿಗರು ತನಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಅವರು ಶನಿವಾರ ಗಂಭೀರ ಆರೋಪ ಮಾಡಿದ್ದಾರೆ.
ಮಧು ಬಂಗಾರಪ್ಪ ಬೆಂಬಲಿಗರಿಂದ ನನಗೆ ಜೀವ ಬೆದರಿಕೆ ಇದೆ. ಹೀಗಾಗಿ ಪೊಲೀಸ್ ಕಮಿಷನರ್ ಭೇಟಿ ಮಾಡಿ, ಮಧು ಬಂಗಾರಪ್ಪ ವಿರುದ್ಧ ದೂರು ನೀಡುತ್ತೇನೆ ಎಂದು ಹೇಳಿದ್ದಾರೆ.
ಬಿ.ಕೆ.ಹರಿಪ್ರಸಾದ್ ಅವರು ಹಿಂದುಳಿದ ವರ್ಗದವರು. ಅವರಿಗೆ ಸ್ಥಾನಮಾನ ಕೇಳುವುದರಲ್ಲಿ ಏನು ತಪ್ಪಿದೆ? ಬೇರೆ ಸಮುದಾಯದವರು ಹೋರಾಟ ಮಾಡಿಲ್ವಾ. ಸಮುದಾಯಕ್ಕೆ ಮಧು ಬಂಗಾರಪ್ಪ ಅವರ ಕೊಡುಗೆಯೇನು ಎಂದು ಸ್ವಾಮೀಜಿ ಪ್ರಶ್ನಿಸಿದ್ದಾರೆ.
ಈಡಿಗ ಸಮುದಾಯವನ್ನು ಸರ್ಕಾರವೇ ಒಡೆಯುತ್ತಿದೆ. ಸ್ವಾಮೀಜಿಗಳ ವಿರುದ್ಧ ಎತ್ತಿಕಟ್ಟುವ ಕೆಲಸ ಆಗುತ್ತಿದೆ. ನಾರಾಯಣ ಗುರು ರಥ ಬಂದಾಗ ಒಂದೇ ಒಂದು ಹಾರವನ್ನು ಮಧು ಬಂಗಾರಪ್ಪ ಹಾಕಿದರಾ. ನಾನು ಸಮುದಾಯದ ಭೂಮಿ ಕೊಳ್ಳೆ ಹೊಡೆದಿಲ್ಲ. ಸೈಟ್ ಮಾಡಿ ಮಾರಾಟ ಮಾಡಿಲ್ಲ. ಬಿ.ಕೆ ಹರಿಪಸ್ರಾದ್ ಸಹ ಭೂಮಿ ಕಳ್ಳತನ ಮಾಡಿದವರಲ್ಲ ಎಂದಿದ್ದಾರೆ.
ಸ್ವಾಮೀಜಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ಪ್ರಣವಾನಂದ ಶ್ರೀ ಈಡಿಗ ಸ್ವಾಮೀಜಿ ಅಲ್ಲವೇ ಅಲ್ಲ. ಸುಮ್ಮನೆ ಬುರುಡೆ ಬಿಟ್ಟುಕೊಂಡು ಬಂದಿದ್ದಾರೆ ಎಂದು ಕಿಡಿಕಾರಿದ್ದಾರೆ.