ಕಂದಾಯ ಇಲಾಖೆ ಸಿಬ್ಬಂದಿ ಸಮಯ ಪಾಲನೆ ಕಡ್ಡಾಯ

ಕಚೇರಿಗೆ ತಡವಾಗಿ ಬಂದು ಬೇಗ ನಿರ್ಗಮಿಸುವ ಚಾಳಿಗೆ ಕಡಿವಾಣ ಹಾಕಲು ಕ್ರಮ

ಬೆಂಗಳೂರು : ಕಂದಾಯ ಇಲಾಖೆ ಅಧಿಕಾರಿಗಳು ತಡವಾಗಿ ಕಚೇರಿಗೆ ಬಂದು ಬೇಗನೆ ನಿರ್ಗಮಿಸುವ ಮತ್ತು ಕರ್ತವ್ಯದ ವೇಳೆ ತಿರುಗಾಡುವ ಚಾಳಿಗೆ ಕಡಿವಾಣ ಹಾಕಲು ಸರಕಾರ ಮುಂದಾಗಿದೆ.
ಈ ಕುರಿತು ಸುತ್ತೋಲೆ ಹೊರಡಿಸಿರುವ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ್‌ ಕುಮಾರ್‌ ಕಟಾರಿಯಾ, ಎಲ್ಲ ಸಿಬ್ಬಂದಿ 10.30ರ ಒಳಗಾಗಿ ಕಚೇರಿಗೆ ತಲುಪಿರಬೇಕೆಂದು ಸೂಚಿಸಿದ್ದಾರೆ.
ಸಂಜೆ ಕಚೇರಿಯಿಂದ ನಿರ್ಗಮಿಸುವ ಮೊದಲು ವಿಭಾಗದ ಸಂಬಂಧಪಟ್ಟ ಜಂಟಿ ಅಥವಾ ಉಪ ಕಾರ್ಯದರ್ಶಿಯ ಅನುಮತಿ ಪಡೆದುಕೊಳ್ಳಬೇಕು. ಗಂಟೆಗಟ್ಟಲೆ ಟೀ-ಕಾಫಿಗೆಂದು ಕಚೇರಿ ಬಿಟ್ಟು ಹೋಗುವುದು, ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಬಂದಾಗ ವಿನಾಕಾರಣ ತಾಸುಗಟ್ಟಲೆ ಕಾಯಿಸುವುದು ಸಲ್ಲದು ಎಂದು ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

error: Content is protected !!
Scroll to Top