ರಜೆ ಗೊಂದಲ ನಿವಾರಿಸಿದ ಸರಕಾರ
ಉಡುಪಿ : ಗಣೇಶೋತ್ಸವದ ಸಾರ್ವತ್ರಿಕ ರಜೆ ಕುರಿತಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಂಟಾಗಿದ್ದ ಗೊಂದಲ ಬಗೆಹರಿದಿದೆ. ಗಣೇಶ ಚತುರ್ಥಿಯ ಪ್ರಯುಕ್ತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸೋಮವಾರದ ಬದಲಾಗಿ ಮಂಗಳವಾರ ರಜೆ ನೀಡಲು ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಗಣೇಶ ಹಬ್ಬದ ಆಚರಣೆಯ ದಿನದ ಬಗ್ಗೆ ಗೊಂದಲಗಳಿವೆ. ಹಲವೆಡೆ ಸೋಮವಾರ (ಸೆ.18) ಹಬ್ಬ ಆಚರಿಸುತ್ತಿದ್ದರೆ ಮತ್ತೆ ಕೆಲವೆಡೆ ಮಂಗಳವಾರ (ಸೆ.19) ಆಚರಿಸಲಾಗುತ್ತಿದೆ. ಸರ್ಕಾರ ನಿಗದಿ ಪಡಿಸಿದ ರಜೆ ಸೋಮವಾರ ಎಂದಿದೆ. ಹೀಗಾಗಿ ರಜೆಯ ಬಗ್ಗೆ ಗೊಂದಲ ಮೂಡಿತ್ತು. ಮಂಗಳವಾರವೇ ಸರಕಾರಿ ರಜೆ ನೀಡಬೇಕೆಂದು ಹಲವರು ಸರಕಾರವನ್ನು ಒತ್ತಾಯಿಸಿದ್ದರು. ಕರಾವಳಿಯಲ್ಲಿ ಗಣೇಶೋತ್ಸವವೇ ಪ್ರಮುಖ ಹಬ್ಬವಾಗಿರುವುದರಿಂದ ಸೋಮವಾರ ರಜೆ ಕೊಟ್ಟಿದ್ದರೆ ಜನರಿಗೆ ಬಹಳ ಸಮಸ್ಯೆಯಾಗುತ್ತಿತ್ತು. ಇದನ್ನು ಪರಿಗಣಿಸಿ ಸರಕಾರ ಮಂಗಳವಾರ ರಜೆ ಕೊಡಲು ಆದೇಶಿಸಿದೆ.