ರಾಜಪಥ-ಕೊಡುವುದರಲ್ಲಿ ಇರುವ ಖುಷಿ ಪಡೆಯುವುದರಲ್ಲಿ ಇಲ್ಲ

ಎಲ್ಲವನ್ನೂ ಕೊಟ್ಟು ಸಂತೃಪ್ತರಾದ ಕಲ್ಯಾಣಂ ಸುಂದರಂ ಎಂಬ ಮಹಾದಾನಿ

ಒಮ್ಮೆ ಸಮುದ್ರಗಳೆಲ್ಲವೂ ಸೇರಿ ಬ್ರಹ್ಮದೇವರ ಬಳಿಗೆ ನಿಯೋಗವನ್ನು ತೆಗೆದುಕೊಂಡು ಹೋದವಂತೆ.
ಬ್ರಹ್ಮದೇವರ ಮುಂದೆ ಅವುಗಳು ಇಟ್ಟ ಅಳಲು ಹೀಗಿತ್ತು-ಬ್ರಹ್ಮ ದೇವಾ, ನಮ್ಮಲ್ಲಿ ಅಗಾಧವಾದ ಜಲರಾಶಿ ಇದೆ. ಆದರೆ ಅದರಿಂದ ಯಾರಿಗೂ ಉಪಯೋಗ ಇಲ್ಲ. ನಮ್ಮ ಎಲ್ಲ ನೀರು ಉಪ್ಪಾಗಿದೆ. ಅದು ಯಾವ ಕೆಲಸಕ್ಕೂ ಉಪಯೋಗ ಆಗುವುದಿಲ್ಲ. ಆದರೆ ನದಿಗಳ ಬಳಿ ಕಡಿಮೆ ನೀರಿದೆ. ಅವುಗಳ ನೀರು ಸಿಹಿ ಆಗಿದೆ. ಎಲ್ಲರೂ ನದಿಯ ನೀರು ಉಪಯೋಗ ಮಾಡುತ್ತಾರೆ. ನಮ್ಮ ನೀರು ಯಾರಿಗೂ ಬೇಡ. ಯಾಕೆ ನೀನು ಈ ತಾರತಮ್ಯ ಮಾಡಿದೆ?
ಬ್ರಹ್ಮದೇವ ನಗುತ್ತ ಕೊಟ್ಟ ಉತ್ತರ ಮಾರ್ಮಿಕ ಆಗಿತ್ತು-ನದಿಗಳು ತಮ್ಮ ನೀರನ್ನು ತೆಗೆದುಕೊಂಡು ಹೋಗಿ ನಿಮಗೆ ಕೊಡುತ್ತವೆ. ಅವುಗಳು ತಮ್ಮೊಳಗೆ ಏನೂ ಇಟ್ಟುಕೊಳ್ಳುವುದಿಲ್ಲ. ನೀವು ಹಾಗಲ್ಲ. ನದಿಗಳು ಕೊಟ್ಟ ಎಲ್ಲ ನೀರನ್ನೂ ಪಡೆದುಕೊಳ್ಳುತ್ತೀರಿ. ನಿಮಗೆ ಏನನ್ನೂ ಕೊಟ್ಟು ಗೊತ್ತಿಲ್ಲ. ಆದ್ದರಿಂದ ನಿಮ್ಮ ನೀರು ಉಪ್ಪಾಗಿದೆ. ನದಿಗಳು ಕೊಡುತ್ತವೆ, ಆದ್ದರಿಂದ ಅವುಗಳ ನೀರು ಸಿಹಿ ಆಗಿದೆ. ಹೌದಲ್ಲ?

ಕೊಡುವುದರಲ್ಲಿ ಇರುವ ಖುಷಿಯು ಪಡೆದುಕೊಳ್ಳುವುದರಲ್ಲಿ ಇಲ್ಲ

ನಾವು ಪ್ರತಿಫಲದ ಆಸೆ ಇಲ್ಲದೆ ಸತ್ಪಾತ್ರರಿಗೆ ಮಾಡಿದ ಸಹಾಯ ಬಡ್ಡಿ ಸಮೇತ ಹಿಂದೆ ಬರುತ್ತದೆ ಅನ್ನುವುದು ನನಗೆ ಹತ್ತಾರು ಬಾರಿ ಅನುಭವಕ್ಕೆ ಬಂದಿದೆ.

ಒಮ್ಮೆ ಏನಾಯಿತು ಅಂದರೆ…ರಜೆಯಲ್ಲಿ ನಾನು ನಮ್ಮ ಶಾಲೆಯ ಶಿಕ್ಷಕರ ಕೊಠಡಿಯಲ್ಲಿ ಕುಳಿತು ವಿದ್ಯಾರ್ಥಿಗಳ ಆನ್ಸರ್ ಪೇಪರ್ ತಿದ್ದುತ್ತ ಇದ್ದೆ. ಬೇರೆ ಯಾವ ಶಿಕ್ಷಕರೂ ಬಂದಿರಲಿಲ್ಲ. ಆಗ ಒಬ್ಬಳು ನನ್ನ ಹಳೆ ವಿದ್ಯಾರ್ಥಿನಿ ಬಂದು ನನಗೆ ಅವಳ ಮದುವೆಯ ಕಾಗದ ಕೊಟ್ಟು ಬರಬೇಕು ಸರ್ ಎಂದು ಭಕ್ತಿಯಿಂದ ಪಾದಸ್ಪರ್ಶ ಮಾಡಿದಳು. ನನಗೆ ಅವಳ ಮನೆಯ ಕಷ್ಟಗಳು ಗೊತ್ತಿದ್ದವು. ಅಪ್ಪ ಹಾಸಿಗೆ ಸೇರಿದ್ದು, ಅಮ್ಮ ಕೂಲಿ ಕೆಲಸ ಮಾಡುತ್ತಿರುವುದು, ಇನ್ನೂ ಇಬ್ಬರು ತಂಗಿಯರು ಇರುವುದು ಎಲ್ಲವೂ ಗೊತ್ತಿತ್ತು. ಏನೋ ಸಹಾಯ ಮಾಡಬೇಕು ಅನ್ನಿಸಿತು. ಕಿಸೆಯಲ್ಲಿ ಕೈ ಹಾಕಿದಾಗ ಐನೂರು ರೂಪಾಯಿಗಳ ನಾಲ್ಕು ನೋಟುಗಳು ಕೈಗೆ ಎಟುಕಿದವು. ಆ ಎರಡು ಸಾವಿರ ರೂಪಾಯಿ ಆಕೆಯ ಕೈಯ್ಯಲ್ಲಿ ಕೊಟ್ಟು ಆಶೀರ್ವಾದ ಮಾಡಿ ಕಳಿಸಿಕೊಟ್ಟೆ. ಯಾರಿಗೂ ಹೇಳೋದು ಬೇಡ ಅಂತ ಕೂಡ ಹೇಳಿದೆ. ಅವಳ ಕಣ್ಣಲ್ಲಿ ಒಂದೆರಡು ಹನಿ ನೀರು ಜಿನುಗಿದ್ದು ಕಂಡಿತ್ತು.

ಅವಳು ಹೋದ ನಂತರ…

ನನ್ನ ಮನಸ್ಸಿನಲ್ಲಿ ನನ್ನ ಬಗ್ಗೆ ಸಿಟ್ಟು ಬರಲು ಆರಂಭವಾಯಿತು. ಏಕೆಂದರೆ ನನ್ನ ಕಿಸೆ ಅಂದು ಖಾಲಿ ಆಗಿತ್ತು. ಅದು ಎಟಿಎಂನ ಕಾಲ ಅಲ್ಲ. ಅಲ್ಲಿಂದ ಮನೆಗೆ ಬರಲು ಕನಿಷ್ಠ 30 ಕಿಲೋಮೀಟರ್ ದೂರ ಇದೆ. ಅಲ್ಲಿ ಯಾರ ಹತ್ತಿರ ಸಾಲ ಕೇಳುವುದು? ನನ್ನ ಹತ್ತಿರ ಬಸ್ಸಿಗೂ ದುಡ್ಡು ಇರಲಿಲ್ಲ. ಮನಸಿನಲ್ಲಿ ಒಂದು ಭಾರಿ ವಿಷಾದದ ಎಳೆ ಹರಿದಾಡಿತು.
ಛೇ, ಅಷ್ಟೊಂದು ದುಡ್ಡು ಕೊಡಬಾರದಿತ್ತು. ಬಸ್ಸಿಗಾದರೂ ದುಡ್ಡು ಉಳಿಸಬೇಕಿತ್ತು. ಛೆ, ಎರಡು ಸಾವಿರ ಹೋಯ್ತಲ್ಲ. ನನಗೆ ಭಾರೀ ದುಃಖ ಬಂತು. ಕೊನೆಗೆ ಬಸ್ಸಿನಲ್ಲಿ ಕೂತು ಕಂಡಕ್ಟರ್ ಗೆಳೆತನ ಮಾಡಿಕೊಂಡು ಟಿಕೆಟ್ ಇಲ್ಲದೆ ನನ್ನೂರಿಗೆ ಬಂದು ತಲುಪುವ ತನಕ ಮನಸಿನಲ್ಲಿ ಅದೇ ವಿಷಾದ ಆವರಿಸಿತ್ತು.
ನನ್ನೂರಿನ ಬಸ್ ಸ್ಟಾಂಡಿನಲ್ಲಿ ಇಳಿಯುವಾಗ ‘ಸರ್, ಸರ್’ ಎಂದು ಯಾರೋ ಕರೆದಂತಾಯಿತು. ಹಿಂದೆ ತಿರುಗಿ ನೋಡಿದಾಗ ಒಬ್ಬ ಎತ್ತರದ ಹುಡುಗ ನಗುತ್ತ ನಿಂತಿದ್ದ. ‘ಸರ್, ನನ್ನ ಗುರುತು ಆಗಲಿಲ್ಲವಾ?’ ಎಂದು ಕೇಳಿದ. ನಾನು ಇಲ್ಲ ಅಂದೆ.
‘ಸರ್, ನಾನು ನಿಮ್ಮ ವಿದ್ಯಾರ್ಥಿ. ಹತ್ತು ವರ್ಷಗಳ ಹಿಂದೆ ನಿಮ್ಮ ಟ್ಯೂಷನ್ ತರಗತಿಯಲ್ಲಿ ಕೂತಿದ್ದೆ. ಒಳ್ಳೆ ಮಾರ್ಕ್ಸು ಬಂದಿತ್ತು. ಆದರೆ ನಿಮ್ಮ ಫೀಸ್ ಕೊಡಲು ಆಗ ನನಗೆ ಅನುಕೂಲ ಇರಲಿಲ್ಲ. ಈಗ ವ್ಯಾಪಾರ ಮಾಡಿ ಲೈಫಲ್ಲಿ ಸೆಟಲ್ ಆಗಿದ್ದೇನೆ. ನಿಮ್ಮ ಫೀಸ್ ಕೊಡಲು ಬಾಕಿ ಇಟ್ಟದಕ್ಕೆ ನನ್ನನ್ನು ಕ್ಷಮಿಸಿ. ದಯವಿಟ್ಟು ನಿಮ್ಮ ಫೀಸ್ ತೆಗೆದುಕೊಳ್ಳಿ ಎಂದು ನನ್ನ ಕೈಗೆ ಐನೂರು ರೂಪಾಯಿಗಳ ನಾಲ್ಕು ಕೆಂಪು ನೋಟು ಕೊಟ್ಟು ಥ್ಯಾಂಕ್ಸ್ ಹೇಳಿ ಹೊರಟುಹೋದ.
ನಾನು ಆ ಮದುವೆಯ ಹುಡುಗಿಗೆ ಕೊಟ್ಟ 2K ದುಡ್ಡು ನನಗೆ ಅರ್ಧ ಘಂಟೆಯಲ್ಲಿ ಬಡ್ಡಿ ಸೇರಿಸಿ ಹಿಂದೆ ಬಂದಿತ್ತು. ಆ ಬಡ್ಡಿಯನ್ನು ‘ಹ್ಯಾಪಿನೆಸ್ ‘ ಎಂದು ನಾನು ಕರೆಯುತ್ತೇನೆ. ಯಾವುದೇ ಸ್ವಾರ್ಥ ಇಲ್ಲದೆ, ಪ್ರಚಾರದ ಆಸೆ ಇಲ್ಲದೆ, ಯಾವುದೇ ವಿಷಾದ ಇಲ್ಲದೆ ನಾವು ಇನ್ನೊಬ್ಬರಿಗೆ ಮಾಡಿದ ಸಹಾಯ, ಕೊಟ್ಟ ಕೊಡುಗೆಗಳು ಬಡ್ಡಿ ಸಮೇತ ಹಿಂದೆ ಬರುವುದು ಖಂಡಿತ.

ಕಲ್ಯಾಣ ಸುಂದರಂ ಎಂಬ ನಡೆದಾಡುವ ಸಂತ

ತಮಿಳುನಾಡಿನಲ್ಲಿ ಒಬ್ಬ ಸಾಮಾನ್ಯರಲ್ಲಿ ಸಾಮಾನ್ಯರಾದ ಕಲ್ಯಾಣ ಸುಂದರಂ ಇತ್ತೀಚೆಗೆ ಇದೇ ಕಾರಣಕ್ಕೆ ಭಾರಿ ಸುದ್ದಿಯಾದರು. ಅವರೊಂದು ಕಾಲೇಜಿನಲ್ಲಿ ಲೈಬ್ರೇರಿಯನ್ ಆಗಿದ್ದವರು. ಒಬ್ಬಂಟಿಯಾಗಿ ಬದುಕಿದವರು. ಹಿಂದೆ ಮುಂದೆ ಯಾರೂ ಇರಲಿಲ್ಲ. ಆ ಮನುಷ್ಯ ತನ್ನ ಸಂಪಾದನೆಯ ಎಲ್ಲವನ್ನೂ ಅನಾಥ ಮಕ್ಕಳಿಗೆ ದಾನ ಮಾಡಿ ಭಾರಿ ಸುದ್ದಿಯಾದರು. ಅವರು ತಮಗಾಗಿ ಏನನ್ನೂ ಉಳಿಸಿಕೊಳ್ಳಲಿಲ್ಲ. ಕೊನೆಗೆ ತನಗೆ ದೊರೆತ ಪೆನ್ಶನ್, ಗ್ರಾಚ್ಯುವಿಟಿ, ಪ್ರಾವಿಡೆಂಟ್ ಫಂಡ್ ಎಲ್ಲವನ್ನೂ ದಾನ ಮಾಡಿ ಖಾಲಿ ಆದರು. ತನ್ನ ಹೊಟ್ಟೆಪಾಡಿಗಾಗಿ ಒಂದು ಸಣ್ಣ ಹೋಟೆಲಿನಲ್ಲಿ ಸಪ್ಲೈ ಕೆಲಸ ಮಾಡಿ ಬದುಕಿದರು. ಬೋರ್‌ವೆಲ್ ನೀರು ಕುಡಿದು ಬದುಕಿದರು.

ಮ್ಯಾನ್ ಆಫ್ ದ ಮಿಲೇನಿಯಂ

ಕಲ್ಯಾಣ ಸುಂದರಂ ಕೀರ್ತಿ ಜಗದಗಲ ಹರಡಿತು. ಅವರಿಗೆ ಒಂದು ಅಮೆರಿಕನ್ ಸಂಸ್ಥೆ ‘ಮ್ಯಾನ್ ಆಫ್ ದ ಮಿಲೇನಿಯಂ’ ಎಂಬ ಪ್ರಶಸ್ತಿ ಕೊಟ್ಟು ಅದರ ಜೊತೆಗೆ 30 ಕೋಟಿ ರೂಪಾಯಿ ಬಹುಮಾನ ಕೊಟ್ಟಿತು. ಈ ಮನುಷ್ಯ ಅದನ್ನೂ ಅನಾಥ ಮಕ್ಕಳಿಗೆ ದಾನ ಮಾಡಿ ಮತ್ತೆ ಕೈ ಖಾಲಿ ಮಾಡಿ ಕೂತರು.
‘ನಾನೊಬ್ಬ ಅನಾಥನಾಗಿ ಈ ಜಗತ್ತಿಗೆ ಬಂದೆ. ಅನಾಥನಾಗಿ ಹಿಂದೆ ಹೋಗುತ್ತೇನೆ. ನನಗೇಕೆ ದುಡ್ಡು?’ ಎಂದವರು ನಗುತ್ತ ಕೇಳುವಾಗ ನೀವು ಅವರಿಗೆ ಸೆಲ್ಯೂಟ್ ಹೊಡೆಯದೆ ಇರಲು ಸಾಧ್ಯವೇ ಇಲ್ಲ.
ಸೂಪರ್‌ಸ್ಟಾರ್ ರಜನಿಕಾಂತ್ ಅವರು ಕಲ್ಯಾಣ ಸುಂದರಂ ಅವರನ್ನು ಒಂದು ಸಮಾರಂಭದಲ್ಲಿ ತನ್ನ ದತ್ತು ಅಪ್ಪನಾಗಿ ಸ್ವೀಕಾರ ಮಾಡಿದ ಸುದ್ದಿ ಕೂಡ ನನಗೆ ರೋಮಾಂಚನ ಕೊಟ್ಟಿದೆ.
ಇಂಥಹ ವ್ಯಕ್ತಿಗಳಿಂದ ನಮಗೆ ಕಾಲಕಾಲಕ್ಕೆ ಮಳೆ ಬರ್ತಾ ಇದೆ!































































































































































error: Content is protected !!
Scroll to Top