ಸೌಜನ್ಯ ಹೋರಾಟದ ನೆಪದಲ್ಲಿ ಕಾರ್ಕಳದಲ್ಲಿ ಶಾಂತಿಯನ್ನು ಕದಡದಿರಿ – ನೀರೆ ಕೃಷ್ಣ ಶೆಟ್ಟಿ

ಕಾರ್ಕಳ : ಅತ್ಯಾಚಾರಕ್ಕೊಳಗಾದ ಸೌಜನ್ಯಳಿಗೆ ಸಮರ್ಪಕ ನ್ಯಾಯ ಸಿಗಬೇಕು. ಆದರೆ ಸೌಜನ್ಯಳ ಹೆಸರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಅಪಪ್ರಚಾರ ಸಲ್ಲದು. ಸೌಜನ್ಯ ಪ್ರಕರಣದ ಹೋರಾಟದ ನೆಪದಲ್ಲಿ ಕಾರ್ಕಳದಲ್ಲಿ ಶಾಂತಿಯನ್ನು ಕದಡಿ, ಅಶಾಂತಿಯನ್ನು ಸೃಷ್ಟಿಸುವ ಹುನ್ನಾರವನ್ನು ಕಾರ್ಕಳದ ಜನತೆ ಎಂದಿಗೂ ಸಹಿಸುವುದಿಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಹಿತ ರಕ್ಷಣಾ ಸಮಿತಿಯ ತಾಲೂಕು ಕಾರ್ಯದರ್ಶಿ ನೀರೆ ಕೃಷ್ಣ ಶೆಟ್ಟಿ ಎಚ್ಚರಿಸಿದ್ದಾರೆ. ಅವರು ಸೆ. 16 ರಂದು ಪ್ರಕಾಶ್‌ ಹೊಟೇಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ವಿಷಾದನೀಯ
ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಾಗರಿಕ ಸಮಾಜ ತಲೆತಗ್ಗಿಸುವಂತದ್ದಾಗಿದೆ. ಸೌಜನ್ಯಳಿಗೆ ಖಂಡಿತವಾಗಿಯೂ ನ್ಯಾಯ ಸಿಗಬೇಕು. ಈ ಕುರಿತು ನಡೆಯುವ ನ್ಯಾಯಬದ್ಧ ಹೋರಾಟಕ್ಕೆ ನಮ್ಮ ಬೆಂಬಲವೂ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಸೌಜನ್ಯ ಪರ ಹೋರಾಟದ ದಿಕ್ಕು ತಪ್ಪುತ್ತಿದ್ದು, ಯಾವುದೋ ಒಂದು ಕುಟುಂಬದ ಮೇಲೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ಯಾವುದೇ ದಾಖಲೆ ಇಲ್ಲದೇ ಆರೋಪಿಸುತ್ತಿರುವುದು ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ವಿಷಾದನೀಯ ಎಂದರು.

ದ್ವೇಷಕ್ಕೆ ದಾರಿ
ನಮ್ಮೆಲ್ಲರ ಧಾರ್ಮಿಕ ಭಾವನೆಗಳಿಗೆ ಕುಂದು ಉಂಟುಮಾಡುವ ಮತ್ತು ಡಾ. ವಿರೇಂದ್ರ ಹೆಗ್ಗಡೆಯವರನ್ನು ತೇಜೋವಧೆ ಮಾಡುವಂತಹ ಮಾತುಗಳನ್ನು ಸಾರ್ವಜನಿಕ ಸಭೆಗಳಲ್ಲಿ ಬಹಿರಂಗವಾಗಿ ಭಾಷಣದ ಮುಖಾಂತರ ಹೇಳುವ ಮೂಲಕ ಜನಸಾಮಾನ್ಯರಲ್ಲಿ ಗೊಂದಲ ಉಂಟು ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಅವರು ಇದರಿಂದ ಸಮಾಜದಲ್ಲಿ ಧರ್ಮ ಧರ್ಮಗಳ ಮಧ್ಯೆ ವೈಮನಸ್ಸು, ದ್ವೇಷ ಹುಟ್ಟಿಕೊಳ್ಳುವುದರೊಂದಿಗೆ ಅಶಾಂತಿ ನೆಲೆಯಾಗುವ ಸಾಧ್ಯತೆಯಿದೆ. ಮಹೇಶ್‌ ಶೆಟ್ಟಿ ತಿಮರೋಡಿ ನ್ಯಾಯಾಲಯದಲ್ಲಿ ಮರು ತನಿಖೆಗೆ ಮೇಲ್ಮನವಿ ಸಲ್ಲಿಸದೆ ಊರು ಊರು ಸುತ್ತಿಕೊಂಡು ಯಾವುದೋ ದುರುದ್ದೇಶದಿಂದ ಸಭೆಯನ್ನು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ನ್ಯಾಯಾಂಗ ನಿಂದನೆ
ಈಗಾಗಲೇ ಬೆಂಗಳೂರು ಸಿಟಿ ಸಿವಿಲ್‌ ಮತ್ತು ಸೆಷನ್ಸ್ ಜಡ್ಜ್ ನ್ಯಾಯಾಲಯದಲ್ಲಿ ಧರ್ಮಸ್ಥಳದ ಬಗ್ಗೆ ಹಾಗೂ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಡೆಯವರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡದಂತೆ ನಿರ್ಬಂಧಕಾಜ್ಞೆ ಆಗಿರುತ್ತದೆ. ಆದರೆ, ಘನ ನ್ಯಾಯಾಲಯದ ಆದೇಶಕ್ಕೆ ಬೆಲೆ ನೀಡದೆ ದುರ್ವರ್ತನೆ ತೋರುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಇತರರು ನ್ಯಾಯಾಂಗ ನಿಂದನೆ ಮಾಡುತ್ತಿದ್ದಾರೆ ಎಂದರು.

ಸಭೆಯನ್ನು ಬಹಿಷ್ಕರಿಸಿ
ಸೆ. 24 ರಂದು ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಅವರ ತಂಡ ಕಾರ್ಕಳದ ಕುಕ್ಕುಂದೂರಿನಲ್ಲಿ ಆಯೋಜಿಸಿರುವ ಸಮಾಜ ಘಾತುಕ ಹಾಗೂ ಸಾಕ್ಷಾಧಾರಗಳಿಲ್ಲದೆ ಅವಹೇಳನಕಾರಿಯಾಗಿ, ಪ್ರಚೋದನಾಕಾರಿಯಾಗಿ ಮಾತನಾಡುವ ಸಾರ್ವಜನಿಕ ಸಭೆಯನ್ನು ಸಮಾಜದ ಶಾಂತಿಯ ದೃಷ್ಟಿಯಲ್ಲಿ ಸಾರ್ವಜನಿಕರು ಬಹಿಷ್ಕರಿಸಬೇಕು ಎಂದು ವಿನಂತಿಸಿಕೊಂಡ ಅವರು ಈ ಮೂಲಕ ಧರ್ಮ ರಕ್ಷಣೆಗೆ ಸಹಕರಿಸಬೇಕೆಂದು ಮನವಿ ಮಾಡಿಕೊಂಡರು.
ಸುದ್ದಿಗೋಷ್ಠಿಯಲ್ಲಿ ವಿವಿಧ ಸಮಿತಿಯ ಪದಾಧಿಕಾರಿಗಳಾದ ಉದಯ್ ಕುಮಾರ್ ಹೆಗ್ಡೆ, ಸುಧಾಕರ್ ಶೆಟ್ಟಿ, ಯಶೋಧ ಶೆಟ್ಟಿ, ಅಂತೂನಿ ಡಿಸೋಜಾ ನಕ್ರೆ, ಕಮಲಾಕ್ಷ ನಾಯಕ್, ಮಹೇಶ್, ತ್ರಿವಿಕ್ರಮ ಕಿಣಿ ಉಪಸ್ಥಿತರಿದ್ದರು.













































































































































































error: Content is protected !!
Scroll to Top