ಕಾರ್ಕಳ ಕಸಾಪದಿಂದ ಕನ್ನಡ ಡಿಂಡಿಮ, ವಿಶ್ವೇಶ್ವರಯ್ಯ ಸಂಸ್ಮರಣೆ
ಕಾರ್ಕಳ : ಕನ್ನಡ ಸಾಹಿತ್ಯ ಪರಿಷತ್, ಕಾರ್ಕಳ ಘಟಕದ ವತಿಯಿಂದ ಪ್ರೌಢಶಾಲೆಯ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸುವ ಕನ್ನಡ ಡಿಂಡಿಮ ಎಂಬ ವಿಶೇಷವಾದ ಕಾರ್ಯಕ್ರಮ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಅವರ ಹುಟ್ಟಿದ ಹಬ್ಬದ ಆಚರಣೆಯ ಕಾರ್ಯಕ್ರಮಗಳು ಇನ್ನ ಆಯುರ್ವೇದ ಭೂಷಣ ಎಂ.ವಿ ಶಾಸ್ತ್ರಿ ಪ್ರೌಢಶಾಲೆಯಲ್ಲಿ ಜರಗಿತು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಡಿಂಡಿಮ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಇನ್ನ ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಿತಾ ಶೆಟ್ಟಿ ಶುಭಕೋರಿದರು. ಇನ್ನ ಎಂ.ವಿ ಶಾಸ್ತ್ರಿ ಪ್ರೌಢಶಾಲೆಯ ಮುಖ್ಯಗುರು ರಾಜೇಂದ್ರ ಭಟ್ ಕೆ. ಅವರು ಸರ್ ಎಂ ವಿಶ್ವೇಶ್ವರಯ್ಯ ಅವರ ಬಗ್ಗೆ ವಿಸ್ತಾರವಾಗಿ ಮಾತಾಡಿ, ಮೋಕ್ಷಗುಂಡಂ ವಿಶ್ವೇಶ್ವರಯ್ಯ ನೂರಾರು ಸಂಸ್ಥೆಗಳನ್ನು ಹುಟ್ಟುಹಾಕಿ ಬೆಳೆಸುವ ಕೆಲಸ ಮಾಡಿದರು. ಅವರು ಮೈಸೂರು ದಿವಾನರಾಗಿ ಇದ್ದಾಗ ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರ ಪ್ರೇರಣೆಯಿಂದ ಕನ್ನಡ ಸಾಹಿತ್ಯ ಪರಿಷತ್ ಉದ್ಘಾಟನೆ ಆದದ್ದು ಮರೆಯಲಾಗದ ಘಟನೆ ಆಗಿದೆ. ಅವರು ಆಧುನಿಕ ಕರ್ನಾಟಕದ ನಿರ್ಮಾಪಕ ಅನ್ನುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದರು.
ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮದ ಅಂಗವಾಗಿ ಈಗಾಗಲೇ 150ಕ್ಕೂ ಅಧಿಕ ಮಹನೀಯರನ್ನು ಪರಿಷತ್ ಸನ್ಮಾನ ಮಾಡಿದೆ. ಕನ್ನಡದ ಸೇವೆಯನ್ನು ಪ್ರತಿಯೊಬ್ಬರೂ ಸಲ್ಲಿಸಲು ಸಿದ್ಧರಾಗಬೇಕು ಎಂದು ನುಡಿದರು.
ಆಶಯದ ನುಡಿಗಳನ್ನು ಆಡಿದ ಕಾರ್ಕಳ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ, ಕನ್ನಡ ಸಾಹಿತ್ಯದ ತೇರನ್ನು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಅಂಗಳಕ್ಕೆ ತಲುಪಿಸುವುದು ಕನ್ನಡ ಡಿಂಡಿಮ ಕಾರ್ಯಕ್ರಮದ ಉದ್ದೇಶ, ಅದರ ಯಶಸ್ಸಿಗೆ ಎಲ್ಲರ ಬೆಂಬಲ ಅಗತ್ಯ ಎಂದರು.
‘ಹಿರಿಯರೆಡೆಗೆ ಸಾಹಿತ್ಯದ ನಡಿಗೆ’ ಕಾರ್ಯಕ್ರಮದ ಅಂಗವಾಗಿ ಇನ್ನಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಯ ಎಸ್. ಕೋಟ್ಯಾನ್ ಅವರ ಸಮಾಜ ಸೇವೆಯನ್ನು ಪರಿಗಣಿಸಿ ಅವರಿಗೆ ಮಾನಪತ್ರ, ಫಲಪುಷ್ಪ, ಭುವನೇಶ್ವರಿಯ ಮೂರ್ತಿ ಮತ್ತು ಹಾರ ಸಹಿತ ಸನ್ಮಾನಿಸಲಾಯಿತು. ಕಸಾಪ ಗೌರವ ಕೋಶಾಧಿಕಾರಿ ಅರುಣ್ ರಾವ್ ಮುಂಡ್ಕೂರು ಮಾನಪತ್ರವನ್ನು ಓದಿದರು. ಜಯ ಎಸ್. ಕೋಟ್ಯಾನ್ ಸನ್ಮಾನಕ್ಕೆ ಉತ್ತರಿಸಿ ಸಾಹಿತ್ಯ ಪರಿಷತ್ ಸಂಸ್ಥೆಗೆ ಧನ್ಯವಾದ ಅರ್ಪಿಸಿದರು.
ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಪಕ್ ಕೋಟ್ಯಾನ್ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿ, ಕನ್ನಡ ಮಾಧ್ಯಮ ಶಾಲೆಗಳು ಉಳಿಯಬೇಕು. ಶಾಲೆಗಳು ಅಳಿದರೆ ಕನ್ನಡ ಸಂಸ್ಕೃತಿ ನಾಶವಾಗುತ್ತದೆ ಎಂದು ಹೇಳಿದರು. ಮುಖ್ಯಶಿಕ್ಷಕ ರಾಜೇಂದ್ರ ಭಟ್ ಕೆ. ಸಲ್ಲಿಸಿದ ಕನ್ನಡದ ಸೇವೆಯನ್ನು ಪರಿಗಣಿಸಿ ಸಾಹಿತ್ಯ ಪರಿಷತ್ ಅವರನ್ನು ಸನ್ಮಾನ ಮಾಡಿ ಗೌರವಿಸಿತು.
ಅವರು ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸುವ ಸಾಹಿತ್ಯದ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಕನ್ನಡ ಅಧ್ಯಾಪಕಿ ವಾಣಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಶಿಕ್ಷಕ ದಿನೇಶ್ ನಾಯಕ್ ಧನ್ಯವಾದ ಸಲ್ಲಿಸಿದರು. ನಂತರ ಶಾಲೆಯ ವಿದ್ಯಾರ್ಥಿಗಳಿಂದ ಗೀತ ಗಾಯನ, ಸ್ವರಚಿತ ಕವನ ವಾಚನ ಮತ್ತು ಅಭಿನಯ ಗೀತೆಗಳ ಪ್ರದರ್ಶನ ನಡೆಯಿತು.