ಚಿಕ್ಕಮಗಳೂರು : ಚಾರ್ಮಾಡಿ ಘಾಟ್‌ನಲ್ಲಿ ದಟ್ಟ ಮಂಜು ಹಾಗೂ ಮಳೆಯಿಂದ ದಾರಿ ಕಾಣದೆ ಲಾರಿಯೊಂದು 100 ಅಡಿ ಪ್ರಪಾತಕ್ಕೆ ಬಿದ್ದಿದೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಸೋಮನಕಾಡು ಬಳಿ ಸೆ. 15ರ ರಾತ್ರಿ ಘಟನೆ ನಡೆದಿದೆ. ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನೀರಿನ ಬಾಟಲಿ ತುಂಬಿದ್ದ ಲಾರಿ ಪುತ್ತೂರಿನಿಂದ ಚಿತ್ರದುರ್ಗಕ್ಕೆ ಚಾರ್ಮಾಡಿ ಘಾಟ್ ಮೂಲಕ ಸಾಗಿಸುತ್ತಿತ್ತು.
ಚಾರ್ಮಾಡಿ ಘಾಟಿನಲ್ಲಿ ದಟ್ಟ ಮಂಜು ಮತ್ತು ಮಳೆಯಿಂದ ರಸ್ತೆ ಕಂಡಿಲ್ಲ. ಚಾಲಕ ನಿಯಂತ್ರಣ ತಪ್ಪಿದ ಲಾರಿ ತಡೆಗೋಡೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಬೀಳುವಾಗ 100 ಅಡಿ ಪ್ರಪಾತದಲ್ಲಿ ಮರಕ್ಕೆ ಸಿಕ್ಕಿಕೊಂಡಿದೆ. ಇದರಿಂದ ಅದೃಷ್ವಶಾತ್ ಚಾಲಕ ಹಾಗೂ ಕ್ಲೀನರ್‌ನ ಜೀವ ಉಳಿದಿದೆ. ಲಾರಿ ಪ್ರಪಾತಕ್ಕೆ ಬಿದ್ದ ತಕ್ಷಣ ಸ್ಥಳೀಯರು ಲಾರಿ ಚಾಲಕ-ಕ್ಲೀನರ್ ಅನ್ನು ರಕ್ಷಣೆ ಮಾಡಿದ್ದಾರೆ. ಒಂದು ವೇಳೆ ಲಾರಿ ಮರಕ್ಕೆ ಸಿಕ್ಕಿಕೊಳ್ಳದಿದ್ದಲ್ಲಿ ಸಾವಿರ ಅಡಿ ಪ್ರಪಾತಕ್ಕೆ ಹೋಗಿ ಬೀಳುತ್ತಿತ್ತು ಎನ್ನಲಾಗಿದೆ. ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.