ಕೇರಳದಲ್ಲಿ ಆರನೇ ಪ್ರಕರಣ ಪತ್ತೆಯಾದ ಬಳಿಕ ಕರ್ನಾಟಕದಿಂದ ಮಾರ್ಗಸೂಚಿ
ಬೆಂಗಳೂರು : ಕೇರಳದಲ್ಲಿ ಇನ್ನೋರ್ವ ವ್ಯಕ್ತಿಗೆ ನಿಫಾ ಸೋಂಕು ತಗಲಿರುವುದು ದೃಢಪಟ್ಟ ಬೆನ್ನಲ್ಲೇ ಕರ್ನಾಟಕ ಸರಕಾರ ಜನರಿಗೆ ಮುನ್ನೆಚ್ಚರಿಕೆಯ ಸಲಹೆ-ಸೂಚನೆಗಳನ್ನು ಹೊರಡಿಸಿದೆ.
ಕೇರಳದ ಸೋಂಕು ಪೀಡಿತ ಪ್ರದೇಶಗಳಿಗೆ ಜನರು ಅನಗತ್ಯವಾಗಿ ಪ್ರಯಾಣಿಸದಂತೆ ಸರ್ಕಾರ ಹೇಳಿದ್ದು, ಗಡಿ ಜಿಲ್ಲೆಗಳಾದ ಕೊಡಗು, ದಕ್ಷಿಣ ಕನ್ನಡ, ಮೈಸೂರು, ಚಾಮರಾಜನಗರಗಳಲ್ಲಿ ತೀವ್ರ ಕಟ್ಟೆಚ್ಚರ, ತಪಾಸಣೆ, ಕಣ್ಗಾವಲನ್ನು ಹೆಚ್ಚಿಸಲು ಸೂಚಿಸಿದೆ.
ಕೇರಳದ ಕೋಝಿಕ್ಕೋಡ್‌ನಲ್ಲಿ ಮತ್ತೊಬ್ಬರಿಗೆ ನಿಫಾ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ಕೇರಳ ಆರೋಗ್ಯ ಸಚಿವರ ಕಚೇರಿ ದೃಢಪಡಿಸಿದೆ. ಸೋಂಕು ತಗುಲಿರುವ 39 ವರ್ಷದ ವ್ಯಕ್ತಿಯನ್ನು ಕೋಝಿಕ್ಕೋಡ್‌ನ ಆಸ್ಪತ್ರೆಯಲ್ಲಿ ನಿಗಾ ಇರಿಸಲಾಗಿದೆ. ಈ ಮೂಲಕ ಕೇರಳದಲ್ಲಿ ನಿಫಾ ವೈರಸ್‌ಗೆ ತುತ್ತಾಗಿರುವವರ ಸಂಖ್ಯೆ 6ಕ್ಕೇರಿದೆ.
ಕೇರಳದಲ್ಲಿ ನಿಫಾ ವೈರಸ್‌ಗೆ ಈಗಾಗಲೇ ಇಬ್ಬರು ಬಲಿಯಾಗಿದ್ದಾರೆ. ಪುಣೆಯಲ್ಲಿರುವ ಐಸಿಎಂಆರ್‌ನ ರಾಷ್ಟ್ರೀಯ ವೈರಾಲಜಿ ಸಂಸ್ಥೆ ತನ್ನ ಮೊಬೈಲ್ ಬಿಎಸ್‌ಎಲ್-3 (ಬಯೋಸೇಫ್ಟಿ ಲೆವೆಲ್-3) ಪ್ರಯೋಗಾಲಯವನ್ನು ಕೋಝಿಕ್ಕೋಡ್‌ಗೆ ನಿಫಾ ವೈರಸ್‌ನ ಮಾದರಿಗಳನ್ನು ಪರೀಕ್ಷಿಸಲು ಕಳುಹಿಸಿದೆ.
ಮುನ್ನೆಚ್ಚರಿಕೆಗಳು
ನಿಯಂತ್ರಣಕ್ಕೆ ಬಾರದ ಶೀತ, ಜ್ವರ, ತಲೆನೋವು ಅಥವಾ ಕೆಮ್ಮಿನ ಲಕ್ಷಣ ಕಂಡುಬಂದರೆ ಮಾಸ್ಕ್ ಧರಿಸಲು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಮತ್ತು ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಲು ಸಲಹೆ ನೀಡಲಾಗಿದೆ.
ಬಾವಲಿಗಳು ಇರುವ ಪ್ರದೇಶಗಳ ತೆಂಗು ಮತ್ತು ತಾಳೆ ಮರಗಳಿಂದ ತೆರೆದ ಪಾತ್ರೆಗಳಲ್ಲಿ ಸಂಗ್ರಹಿಸಿದ ಮದ್ಯವನ್ನು ಸೇವಿಸಬಾರದು.
ಕೇರಳಲದಲ್ಲಿ ಕಂಡುಬಂದಿರುವ ವೈರಸ್ ಸ್ಟ್ರೈನ್ ಬಾಂಗ್ಲಾದೇಶದ ರೂಪಾಂತರವಾಗಿದ್ದು ಅದು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ.