ಇಂದು ಇಂಜಿನಿಯರ್ಸ್ ಡೇ
ಆಧುನಿಕ ಭಾರತದ ಅಸಾಮಾನ್ಯ ನಿರ್ಮಾಪಕರಾದ ನಮ್ಮ ಇಂಜಿನಿಯರ್‌ಗಳಿಗೆ ಅವರದ್ದೇ ಆದ ದಿನದ ಶುಭಾಶಯಗಳು. ಇದು ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಸರ್ ಎಂ. ವಿಶ್ವೇಶ್ವರಯ್ಯ ಅವರ ಹುಟ್ಟಿದ ಹಬ್ಬ ಅನ್ನೋದು ವಿಶೇಷ.
ಈ ನೆಪದಲ್ಲಿ ಆಧುನಿಕ ಭಾರತದ ಹತ್ತು ಇಂಜಿನಿಯರಿಂಗ್ ವಿಸ್ಮಯಗಳ ಬಗ್ಗೆ ಬರೆಯಲು ತುಂಬಾ ಹೆಮ್ಮೆ ಪಡುತ್ತೇನೆ. ಇವೆಲ್ಲವೂ ಭಾರತದ ಶ್ರೇಷ್ಠ ಇಂಜಿನಿಯರಿಂಗ್ ಕೌಶಲಗಳ ಎರಕ ಎಂದು ನನಗೆ ಅನ್ನಿಸುತ್ತದೆ.
1) ಅಟಲ್ ಸುರಂಗ-ಹಿಮಾಚಲ ಪ್ರದೇಶ
2020ರಲ್ಲಿ ಪೂರ್ತಿ ಆದ ಈ ಸುರಂಗ ಮನಾಲಿ ಮತ್ತು ಲಾಹೌಟ್ ಸ್ಪಿಟಿ ಕಣಿವೆಗಳನ್ನು ಜೋಡಿಸುತ್ತದೆ. ಅದು ಪ್ರಯಾಣದ ದೂರವನ್ನು 46 ಕಿಲೋಮೀಟರ್ ಕಡಿಮೆ ಮಾಡುತ್ತದೆ ಮತ್ತು 4-5 ಘಂಟೆ ಸಮಯವನ್ನು ಉಳಿಸಿ ಕೊಡುತ್ತದೆ. ಗುಡ್ಡಗಾಡು ಪ್ರದೇಶದ ಮೂಲಕ ಅದು ಹೋಗುವುದರಿಂದ ಪ್ರಯಾಣದ ಅನುಭವ ತುಂಬಾ ರೋಚಕ ಆಗಿದೆ. ಅದರ ಉದ್ದ 9.02 ಕಿಲೋಮೀಟರ್.
2) ಬಾಂದ್ರಾ ವರ್ಲಿ ಸಮುದ್ರ ಸೇತುವೆ-ಮುಂಬಯಿ

ಮುಂಬಯಿಯ ಬಾಂದ್ರಾ ಮತ್ತು ವರ್ಲಿ ಎಂಬ ಎರಡು ನಗರಗಳನ್ನು ಬೆಸೆಯುವ ಈ ಸಮುದ್ರ ಸೇತುವೆ ಇಂಜಿನಿಯರಿಂಗ್ ವಿಸ್ಮಯ. ಶಕ್ತಿಯುತವಾದ ಕೇಬಲ್ ಮೂಲಕ ನಿರ್ಮಾಣವಾದ ಭಾರತದ ಅತಿ ದೊಡ್ಡ ಸೇತುವೆ ಇದು. ಭೂಕಂಪ ಸಂಭವಿಸಿದರೆ 7 ರಿಕ್ಟರ್ ಸ್ಕೇಲ್‌ವರೆಗೆ ತಡೆದುಕೊಳ್ಳುವ ಶಕ್ತಿ ಈ ಸೇತುವೆಗೆ ಇದೆ ಎನ್ನುವುದು ನಿಜಕ್ಕೂ ಅದ್ಭುತ.
3) ಪೀರ್ ಪಂಜಾಲ್ ರೈಲು ಸೇತುವೆ-ಜಮ್ಮು ಕಾಶ್ಮೀರ

ಜಮ್ಮು-ಕಾಶ್ಮೀರಕ್ಕೆ ತಾಗಿಕೊಂಡಿರುವ ಹಿಮಾಲಯದ ಗರ್ಭವನ್ನು ಸೀಳಿಕೊಂಡು ಹೋಗುವ ಈ ರೈಲು ಸೇತುವೆ ಭಾರತದಲ್ಲಿಯೇ ಅತ್ಯಂತ ಉದ್ದವಾದದ್ದು. ಅತ್ಯಂತ ಗಟ್ಟಿಯಾದ ಸೇತುವೆ ಇದು. ಜಮ್ಮು-ಕಾಶ್ಮೀರ ಮತ್ತು ಶ್ರೀನಗರವನ್ನು ಕನೆಕ್ಟ್ ಮಾಡುತ್ತದೆ. ಅತ್ಯಾಧುನಿಕ ತಂತ್ರಜ್ಞಾನದ ಕೊಡುಗೆ ಇದು.
4) ಧೋಲಾ ಸದಿಯ ಸೇತುವೆ-ಅಸ್ಸಾಂ

ಭಾರತದ ಅತಿ ಉದ್ದವಾದ ರಸ್ತೆ ಸೇತುವೆ ಇದು. ಬ್ರಹ್ಮಪುತ್ರ ನದಿಯ ಮೇಲೆ ನಿರ್ಮಾಣವಾದ ಈ ಸೇತುವೆ 9.15 ಕಿಲೋಮೀಟರ್ ಉದ್ದವಾಗಿದೆ. ಭಾರತೀಯ ಸೇನೆಯ ಆಹಾರ ಮತ್ತು ಯುದ್ಧ ಸಾಮಗ್ರಿಗಳನ್ನು ಸಾಗಿಸಲು ಈ ಸೇತುವೆ ತುಂಬಾ ಉಪಯುಕ್ತವಾಗಿದೆ.
5) ಚೆನಾಬ್ ಸೇತುವೆ-ಜಮ್ಮು ಮತ್ತು ಕಾಶ್ಮೀರ

ಭಾರತದ ಮಾತ್ರವಲ್ಲ ಜಗತ್ತಿನ ಅತಿ ಎತ್ತರವಾದ ಸ್ಟೀಲ್ ಬ್ರಿಜ್ ಇದು. 1.35 ಕಿಲೋಮೀಟರ್ ಉದ್ದವಾದ ಈ ಸೇತುವೆ ಅತ್ಯಂತ ಗಟ್ಟಿಯಾದ ಉಕ್ಕಿನಿಂದ ಮಾಡಲ್ಪಟ್ಟಿದ್ದು ಸಾವಿರಾರು ವರ್ಷಗಳ ಬಾಳಿಕೆ ಬರುವಂತೆ ಗಟ್ಟಿ ಮಾಡಲಾಗಿದೆ.
6) ಬೋಗಿಬೀಲ್ ಸೇತುವೆ-ಅಸ್ಸಾಂ

ಸೇತುವೆ ಅಂದರೆ ಹೀಗಿರಬೇಕು ಅನ್ನುವುದು ನಿಮಗೆ ಇದನ್ನು ನೋಡಿದ ಮೇಲೆ ಕನ್ವಿನ್ಸ್ ಆಗದಿದ್ದರೆ ಖಂಡಿತವಾಗಿ ಹೇಳಿ! ಒಂದೇ ಸೇತುವೆಯ ಮೇಲೆ ಎರಡು ಅಂತಸ್ತುಗಳಲ್ಲಿ ಬಸ್ಸು, ಟ್ರಕ್ ಮೊದಲಾದವುಗಳು ಹೋಗಲು ಅವಕಾಶ ಇದ್ದರೆ ಮತ್ತೊಂದು ಅಂತಸ್ತಿನಲ್ಲಿ ರೈಲು ಹಳಿಗಳ ಮೇಲೆ ರೈಲು ಅದೇ ಕಾಲಕ್ಕೆ ಹೋಗುವ ವ್ಯವಸ್ಥೆ ಇದೆ. ನಿರ್ಮಾಣವೂ ಗಟ್ಟಿಯಾಗಿದೆ. ಪೂರ್ತಿಯಾಗಿ ಉಕ್ಕಿನಿಂದ ತಯಾರಾದ ಡಬಲ್ ಡೆಕ್ಕರ್ ಸೇತುವೆಯು ಭಾರತದ ಅತ್ಯಾಧುನಿಕ ಇಂಜಿನಿಯರಿಂಗ್ ವಿಸ್ಮಯಕ್ಕೆ ಸಾಕ್ಷಿಯಾಗಿ ನಿಂತಿದೆ.
7) ದುರ್ಗಮ್ ಚೆರುವು ಕೇಬಲ್ ಸೇತುವೆ-ಹೈದರಾಬಾದ್

ಹೈದರಾಬಾದ್ ನಗರದಲ್ಲಿ ಅತ್ಯಂತ ವಿಸ್ತಾರವಾದ ದುರ್ಗಮ್ ಚೆರುವು ಸರೋವರದ ಮೇಲೆ ಇರುವ ಈ ಸೇತುವೆ 2019ರಲ್ಲಿ ಲೋಕಾರ್ಪಣೆ ಆಗಿದೆ. ಅತ್ಯಂತ ಸುಂದರವಾದ ಮತ್ತು ಆಧುನಿಕ ಇಂಜಿನಿಯರಿಂಗ್ ತಂತ್ರಜ್ಞಾನಕ್ಕೆ ಸಾಕ್ಷಿ ಆಗಿರುವ ಈ ಕೇಬಲ್ ಬ್ರಿಜ್ ಖಂಡಿತವಾಗಿ ಭಾರತದ ಹೆಮ್ಮೆ ಆಗಿದೆ.
8) ಸರ್ದಾರ್ ಪಟೇಲ್ ಪ್ರತಿಮೆ-ಗುಜರಾತ್

ಭಾರತದ ಮೊದಲ ಗೃಹಮಂತ್ರಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಉಕ್ಕಿನ ಪ್ರತಿಮೆ ಆಧುನಿಕ ಇಂಜಿನಿಯರಿಂಗ್ ವಿಸ್ಮಯಗಳಲ್ಲಿ ಒಂದು. 182 ಮೀಟರ್ ಎತ್ತರವಿರುವ ಈ ಪ್ರತಿಮೆಯು ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂಬ ಕೀರ್ತಿಯನ್ನು ಪಡೆದಿದೆ. ಅತಿ ಹೆಚ್ಚು ಪ್ರವಾಸಿಗರನ್ನು ಸೆಳೆದಿರುವ ದಾಖಲೆ ಕೂಡ ಅದು ಮಾಡಿದೆ.
9) ಪಾಂಬನ್ ಸೇತುವೆ-ತಮಿಳುನಾಡು

ಭಾರತದ ಶ್ರೇಷ್ಠ ಇಂಜಿನಿಯರ್ ಮೆಟ್ರೋ ಮ್ಯಾನ್ ಇ. ಶ್ರೀಧರನ್ ಅವರ ಕನಸಿನ ಯೋಜನೆ ಇದು. ರಾಮೇಶ್ವರಂ ದ್ವೀಪದಿಂದ ತಮಿಳುನಾಡನ್ನು ಕನೆಕ್ಟ್ ಮಾಡುವ ಈ ಸೇತುವೆ 72 ಮೀಟರ್ ಉದ್ದ ಇದೆ. ದೊಡ್ಡ ಹಡಗುಗಳು ಬಂದಾಗ ಈ ಸೇತುವೆಯನ್ನು ಲಿಫ್ಟ್ ಮಾಡಿ ಹಡಗುಗಳಿಗೆ ಜಾಗ ಮಾಡಿಕೊಡುವ ವ್ಯವಸ್ಥೆ ಅದ್ಭುತ. ಜಗತ್ತಿನಲ್ಲಿಯೇ ಇದು ಪ್ರಥಮ ಪ್ರಯೋಗ.
10) ಸಿಗ್ನೇಚರ್ ಸೇತುವೆ-ದೆಹಲಿ

ಯಮುನಾ ನದಿಯ ಮೇಲೆ ಕಟ್ಟಲಾದ ಈ ಸೇತುವೆ 2018ರಲ್ಲಿ ಲೋಕಾರ್ಪಣೆ ಆಗಿದೆ. 675 ಮೀಟರ್ ಉದ್ದ, 35 ಮೀಟರ್ ಅಗಲ ಇದೆ. 154 ಮೀಟರ್ ಎತ್ತರದ ಕೇಬಲ್ ಗೋಪುರ (Pylon) ಈ ಸೇತುವೆಯನ್ನು ಎತ್ತಿಹಿಡಿದಿದೆ.
ಭರತ ವಾಕ್ಯ
ಆಧುನಿಕ ಭಾರತವು ಇಂದು ವಿಶ್ವಗುರುವಾಗಿ ಮೂಡಿಬರುತ್ತಿದೆ. ಅದರಲ್ಲಿ ಇಂಜಿನಿಯರ್‌ಗಳ ಕೊಡುಗೆ ಭಾರಿ ದೊಡ್ಡದು. ಮನುಷ್ಯನ ಅಸಾಧಾರಣ ಬುದ್ಧಿವಂತಿಕೆ, ಸೃಜನಶೀಲತೆ ಹಾಗೂ ಸವಾಲುಗಳನ್ನು ಸಮರ್ಥವಾಗಿ ಸ್ವೀಕರಿಸುವ ಮನೋಭಾವ ಇವುಗಳಿಂದ ಇಂಥ ಸಾವಿರಾರು ಇಂಜಿನಿಯರಿಂಗ್ ವಿಸ್ಮಯಗಳನ್ನು ಭಾರತ ಪಡೆಯುವಂತಾಯಿತು. ಅದರಲ್ಲಿಯೂ ಸಿವಿಲ್ ಇಂಜಿನಿಯರ್‌ಗಳ ಕೊಡುಗೆಗಳನ್ನು ಭಾರತ ಮರೆಯುವ ಹಾಗೆಯೇ ಇಲ್ಲ.
