ಕೇಂದ್ರ ಸಚಿವರು ಗೊತ್ತು ಎಂದು ನಂಬಿಸಿ ಮೋಸ
ಉಡುಪಿ : ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿಯಿಂದ 7 ಕೋಟಿ ರೂಪಾಯಿ ಪಡೆದು ವಂಚಿಸಿದ ಪ್ರಕರಣದಲ್ಲಿ ಬಂಧನಕ್ಕೊಳಗಾದ ಚೈತ್ರಾ ಕುಂದಾಪುರ ಖ್ಯಾತಿಗೆ ಕಾರಣವಾಗಿದ್ದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿದ್ದ ಒಂದು ಟ್ವೀಟ್. ಈ ಟ್ವೀಟನ್ನೇ ಬಳಸಿಕೊಂಡು ಚೈತ್ರಾ ಕ್ಷಿಪ್ರವಾಗಿ ಪ್ರಚಾರಕ್ಕೆ ಬಂದಿದ್ದಳು.
ಕರಾವಳಿ ಮೂಲದ ಪ್ರಮುಖ ಪತ್ರಿಕೆಯೊಂದರಲ್ಲಿ ಉಪಸಂಪಾದಕಿಯಾಗಿ ಕಾರ್ಯ ನಿರ್ವಹಿಸಿದ್ದ ಈಕೆ ಅಲ್ಲಿಂದ ಬಿಟ್ಟ ಬಳಿಕ ಮಾಧ್ಯಮದ ಸಹವಾಸ ತೊರೆದು ಪ್ರಖರ ಹಿಂದು ಭಾಷಣಕಾರ್ತಿಯಾಗಿ ಗುರುತಿಸಿಕೊಂಡಿದ್ದಳು. 2018ರಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿದ ಡೇರಿಂಗ್ ಗರ್ಲ್ ಎಂಬ ಟ್ವೀಟ್ ಚೈತ್ರಾಳನ್ನು ಖ್ಯಾತಿಯ ತುತ್ತತುದಿಗೇರಿಸಿತ್ತು.
ಕೇಂದ್ರ ಸರ್ಕಾರದ ವಿರುದ್ಧ 2018ರಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಭಾರತ್ ಬಂದ್ ನಡೆಸಿದ್ದವು. ಈ ವೇಳೆ ಉಡುಪಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಂಗಡಿಮುಂಗಟ್ಟು ಬಂದ್ ಮಾಡುವ ವೇಳೆ ಒಬ್ಬಂಟಿಯಾಗಿ ರಸ್ತೆಗಿಳಿದು ಅವರನ್ನು ತರಾಟೆಗೆ ತೆಗೆದುಕೊಂಡಿದ್ದ ಚೈತ್ರಾ, ಮೋದಿ ಪರ ಘೋಷಣೆ ಕೂಗಿ ಕಾಂಗ್ರೆಸ್ ವಿರುದ್ಧ ಅಬ್ಬರಿಸಿದ್ದಳು.
ಇದರ ವೀಡಿಯೋ ಸಾಮಾಜಿಕ ಜಾಲಗಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಬಿಜೆಪಿ ವರಿಷ್ಠರ ಕಣ್ಣಿಗೂ ಬಿದ್ದಿತ್ತು. ವೀಡಿಯೋ ನೋಡಿ ರೀಟ್ವೀಟ್ ಮಾಡಿದ ನಿರ್ಮಲಾ ಸೀತಾರಾಮನ್, ಚೈತ್ರಾಳನ್ನು ಡೇರಿಂಗ್ ಗರ್ಲ್ ಎಂದು ಬಣ್ಣಿಸಿದ್ದರು.
ಇದನ್ನೇ ಬಂಡವಾಳವನ್ನಾಗಿಸಿಕೊಂಡ ಚೈತ್ರಾ, ತನಗೆ ನಿರ್ಮಲಾ ಸೀತರಾಮನ್ ಅವರ ಜತೆ ಲಿಂಕ್ ಇರುವುದಾಗಿ ಬಿಂಬಿಸಿಕೊಂಡು ಉಡುಪಿ ಮಾತ್ರವಲ್ಲದೆ ರಾಜ್ಯಾದ್ಯಂತ ತನ್ನ ಹವಾ ಕ್ರಿಯೇಟ್ ಮಾಡಿಕೊಂಡಿದ್ದಳು. ಇದನ್ನು ನಂಬಿ ಉದ್ಯಮಿ ಗೋವಿಂದ ಪೂಜಾರಿ ಟಿಕೆಟ್ ಸಿಗುವ ಭರವಸೆಯಿಂದ ಚೈತ್ರಾ ಹೆಣೆದ ಷಡ್ಯಂತ್ರದೊಳಗೆ ಬಿದ್ದಿದ್ದರು ಎಂದು ತಿಳಿದುಬಂದಿದೆ.
ಉಡುಪಿಗೆ ನಾನೇ ಅಭ್ಯರ್ಥಿ
ತನಗೆ ಕೇಂದ್ರದ ಪ್ರಭಾವಿ ಸಚಿವರ ಪರಿಚಯವಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಮುಂದಿನ ಚುನಾವಣೆಗೆ ಟಿಕೆಟ್ ಇಲ್ಲ. ಮುಂದಿನ ಉಡುಪಿ-ಚಿಕ್ಕಮಗಳೂರು ಲೋಕಸಭೆ ಅಭ್ಯರ್ಥಿ ನಾನೇ ಅಭ್ಯರ್ಥಿ ಎಂದು ಪುಕಾರು ಹಬ್ಬಿಸಿದ್ದಳು. ಕರಾವಳಿ ಭಾಗದ ರಾಜಕೀಯದ ಬಗ್ಗೆ ಹೆಚ್ಚೇನೂ ಅರಿವಿಲ್ಲದ ಉತ್ತರ ಕರ್ನಾಟಕದ ಕೆಲವು ಹಿಂದು ಸಂಘಟನೆಗಳು ಚೈತ್ರಾಳ ಈ ನೌಟಂಕಿಗಳನ್ನು ನಂಬಿದ್ದರು. ಉತ್ತರ ಕರ್ನಾಟಕದಲ್ಲೇ ಚೈತ್ರಾ ಪ್ರಖರ ಹಿಂದು ಭಾಷಣಕಾರ್ತಿಯಾಗಿ ಹೆಚ್ಚು ಗುರುತಿಸಿಕೊಂಡಿದ್ದಳು.
ಉತ್ತರ ಕರ್ನಾಟಕ ಭಾಗದ ಹಲವೆಡೆ ಭಾರೀ ಬೇಡಿಕೆಯ ಭಾಷಣಗಾರ್ತಿಯಾಗಿ ಆ ಭಾಗಗಳ ಜನರಿಂದ ಅಕ್ಕ ಎಂದು ಕರೆಸಿಕೊಳ್ಳುತ್ತಿದ್ದಳು. ಹಲವು ಹಿಂದೂ ಪರ, ಬಿಜೆಪಿ ಪರ ಸಭೆಗಳಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಳು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚೈತ್ರಾಗೆ ಹೇಳಿಕೊಳ್ಳುವಂಥ ಜನಪ್ರಿಯತೆ ಇರಲಿಲ್ಲ. ಸುಬ್ರಹ್ಮಣ್ಯದ ಗಲಾಟೆ ಬಳಿಕ ಬಿಜೆಪಿ ಮತ್ತು ಹಿಂದು ಸಂಘಟನೆಗಳನ್ನು ಆಕೆಯನ್ನು ದೂರ ಇಟ್ಟಿದ್ದವು. ಉಗ್ರ ಭಾಷಣಕ್ಕೆ ಸಂಬಂಧಿಸಿ ಚೈತ್ರಾ ವಿರುದ್ಧ ಹಲವು ಪ್ರಕರಣಗಳು ಕೂಡ ವಿವಿಧೆಡೆ ದಾಖಲಾಗಿವೆ.