ಉಭಯ ತಂಡಗಳಿಗೆ ಔಪಚಾರಿಕ ಪಂದ್ಯ
ಕೊಲಂಬೊ : ಏಷ್ಯಾಕಪ್ ಟೂರ್ನಿಯಲ್ಲಿ ಇಂದು ಭಾರತ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಲಿದೆ. ಈಗಾಗಲೇ ಫೈನಲ್ ಪಂದ್ಯ ಭಾರತ ಹಾಗೂ ಶ್ರೀಲಂಕಾ ನಡುವೆ ಎಂದು ತೀರ್ಮಾನವಾಗಿರುವುದರಿಂದ ಎರಡೂ ತಂಡಗಳಿಗೆ ಇದೊಂದು ಔಪಚಾರಿಕ ಪಂದ್ಯವಷ್ಟೆ. ಹೀಗಾಗಿ ಎರಡೂ ತಂಡಗಳು ಸಾಕಷ್ಟು ಬದಲಾವಣೆ ಮಾಡಿಕೊಂಡು ನಿರಾಳವಾಗಿ ಮೈದಾನಕ್ಕಿಳಿಯಲಿವೆ.
ಗುರುವಾರ ನಡೆದ ಪಾಕಿಸ್ಥಾನ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ 2 ವಿಕೆಟ್ಗಳ ರೋಚಕ ಜಯ ಸಾಧಿಸಿ ಫೈನಲ್ಗೆ ಲಗ್ಗೆಯಿಟ್ಟಿದೆ. ಇದರ ನಡುವೆ ಇಂದು ಏಷ್ಯಾಕಪ್ ಸೂಪರ್-4 ನ ಕೊನೆಯ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ಹಾಗೂ ಶಕಿಬ್ ಅಲ್ ಹಸನ್ ನೇತೃತ್ವದ ಬಾಂಗ್ಲಾದೇಶ ಮುಖಾಮುಖಿ ಆಗಲಿದೆ.
ಟೂರ್ನಿಯಿಂದ ಈಗಾಗಲೇ ಹೊರಬಿದ್ದಿರುವ ಬಾಂಗ್ಲಾ ಈ ಬಾರಿ ಉತ್ತಮ ಪ್ರದರ್ಶನ ತೋರಲಿಲ್ಲ. ನಾಯಕ ಶಕೀಬ್ ಅಲ್ ಹಸನ್ ಸಂಪೂರ್ಣವಾಗಿ ಫಾರ್ಮ್ ಕಳೆದುಕೊಂಡಿದ್ದಾರೆ. ಲಿಟ್ಟನ್ ದಾಸ್, ಮೆಹಿದಿ ಹಸನ್ ಮಿರಾಜ್, ಮುಶ್ಫಿಕರ್ ರಹೀಮ್ ಕೂಡ ತಂಡಕ್ಕೆ ಕಾಣಿಕೆ ನೀಡುತ್ತಿಲ್ಲ. ತೌಹಿದ್ ಮಾತ್ರ ಕಳೆದ ಲಂಕಾ ವಿರುದ್ಧ 82 ರನ್ ಸಿಡಿಸಿದ್ದರು. ಬೌಲಿಂಗ್ನಲ್ಲಿ ಬಾಂಗ್ಲಾ ಪರ ತಸ್ಕಿನ್ ಅಹ್ಮದ್, ಹಸನ್ ಮಹಮೂದ್ ಮತ್ತು ಶೊರಿಫುಲ್ ಇಸ್ಲಾಂ ಮಾರಕವಾಗಿ ಪರಿಣಮಿಸಿದ್ದಾರೆ.
ಭಾರತ-ಬಾಂಗ್ಲಾ ಪಂದ್ಯ ನಡೆಯಲಿರುವ ಆರ್. ಪ್ರೇಮದಾಸ ಸ್ಟೇಡಿಯಂನ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಪಂದ್ಯ ಸಾಗಿದಂತೆ ಟ್ರ್ಯಾಕ್ ನಿಧಾನವಾಗುತ್ತದೆ, ಆಗ ಬ್ಯಾಟರ್‌ಗಳಿಗೆ ರನ್ ಗಳಿಸಲು ಕಷ್ಟವಾಗುತ್ತದೆ. ಮತ್ತೊಂದೆಡೆ, ವೇಗದ ಬೌಲರ್‌ಗಳು ಕೂಡ ಈ ಮೈದಾನದಲ್ಲಿ ಯಶಸ್ಸು ಸಾಧಿಸುತ್ತಾರೆ. ಪಂದ್ಯದ ಮಧ್ಯದಲ್ಲಿ ಬ್ಯಾಟರ್‌ಗಳಿಗೆ ಈ ಪಿಚ್ ಹೆಚ್ಚು ಸಹಾಯ ಮಾಡಲಿದೆ. ಈ ಮೈದಾನದಲ್ಲಿ ಟೀಮ್ ಇಂಡಿಯಾ ಉತ್ತಮ ದಾಖಲೆಯನ್ನು ಹೊಂದಿದೆ, ತನ್ನ ಕೊನೆಯ 10 ಪಂದ್ಯಗಳಲ್ಲಿ 9 ಅನ್ನು ಗೆದ್ದಿದೆ.