ಚೈತ್ರಾ ಹೇಳಿಕೆಯಿಂದ ಸಂಚಲನ-ತಲೆಮರೆಸಿಕೊಂಡ ಸ್ವಾಮೀಜಿ
ಬೆಂಗಳೂರು : ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ 7 ಕೋ ರೂ. ವಸೂಲು ಮಾಡಿದ ಪ್ರಕರಣದಲ್ಲಿ ಇನ್ನೆಷ್ಟು ದೊಡ್ಡ ಕುಳಗಳು ಶಾಮೀಲಾಗಿವೆ ಎಂಬ ಪ್ರಶ್ನೆಯೊಂದು ಉದ್ಭವಿಸಿದೆ. ಚೈತ್ರಾ ಕುಂದಾಪುರ, ಗಗನ್ ಕಡೂರು, ಮೋಹನ್ ಕುಮಾರ್ ಅಲಿಯಾಸ್ ರಮೇಶ್ ಸೇರಿ ಆರು ಮಂದಿಯನ್ನು ಪ್ರಕರಣಕ್ಕೆ ಸಂಬಂಧಿಸಿ ಬೆಂಗಳುರು ಪೊಲೀಸರು ಬಂಧಿಸಿದ್ದಾರೆ.
ಚೈತ್ರಾ ಕುಂದಾಪುರ ಎಂಬ ಮಾಜಿ ಪತ್ರಕರ್ತೆ ಸಿಸಿಬಿ ಪೊಲೀಸರ ವಶದಲ್ಲಿ ಇರುವಾಗಲೇ ಸ್ವಾಮೀಜಿ ಬಂಧನವಾಗಲಿ ಆಗ ದೊಡ್ಡ ದೊಡ್ಡವರ ಹೆಸರು ಕೂಡ ಬಹಿರಂಗವಾಗುತ್ತದೆ ಎಂದು ಸ್ಫೋಟಕ ಹೇಳಿಕೆ ನೀಡಿರುವುದು ಈ ಹಗರಣ ನೋಡಿದಷ್ಟು ಸರಳವಾಗಿಲ್ಲ ಎಂಬ ಅನುಮಾನ ಹುಟ್ಟಿಸಿದೆ.
ಸಿಸಿಬಿ ಕಚೇರಿ ಮುಂದೆ ಪೊಲೀಸ್ ವಾಹನದಿಂದ ಕೆಳಗಡೆ ಇಳಿಯುತ್ತಿದ್ದಂತೆ ಮಾಧ್ಯಮಗಳ ಕ್ಯಾಮೆರಾ ಮುಂದೆ ಮಾತನಾಡಿದ ಚೈತ್ರಾ, ಸ್ವಾಮೀಜಿ ಬಂಧನವಾಗಲಿ ಆಗ ಎಲ್ಲ ಸತ್ಯ ಹೊರಗಡೆ ಬರುತ್ತದೆ. ಇದರಲ್ಲಿ ದೊಡ್ಡ ದೊಡ್ಡವರ ಹೆಸರು ಕೂಡ ಬಹಿರಂಗವಾಗುತ್ತದೆ. ಇಂದಿರಾ ಕ್ಯಾಂಟೀನ್ ಬಿಲ್ಗಾಗಿ ಈ ರೀತಿ ಷಡ್ಯಂತ್ರ ಮಾಡಿದ್ದಾರೆ ಎಂದು ಹೇಳಿದ್ದಾಳೆ.
ಚೈತ್ರಾಳ ಈ ಹೇಳಿಕೆ ಇದೀಗ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಪ್ರಕರಣದಲ್ಲಿ ಅಭಿನವ ಹಾಲಶ್ರೀ ಎಂಬ ಸ್ವಾಮೀಜಿಯೂ ಇದ್ದಾರೆ ಎಂಬ ಸುದ್ದಿ ನಿನ್ನೆಯಿಂದ ಹರಿದಾಡುತ್ತಿದೆ. ಅವರ ಬಳೀಯಿರುದ ರಹಸ್ಯ ಏನು? ಸ್ವಾಮೀಜಿ ನೇತೃತ್ವದಲ್ಲಿ ನಡೆದಿರುವುದಾದರೂ ಏನು? ಮೂವರ ನಡುವೆ ನಡೆದ ಮಾತುಕತೆ ಆದರು ಏನು? ಈ ಪ್ರಕರಣದಲ್ಲಿ ದೊಡ್ಡವರು ಸಹ ಶಾಮೀಲು ಆಗಿದ್ದಾರಾ? ಸ್ವಾಮೀಜಿ ಬಂಧನದ ಬಳಿಕ ಎಲ್ಲವೂ ಗೊತ್ತಾಗಲಿದೆಯಾ? ಎಂಬ ಪ್ರಶ್ನೆ ಈಗ ಉದ್ಭವಿಸಿದೆ.
ಹೊಸಪೇಟೆ ಜಿಲ್ಲೆಯ ಹಿರೇ ಹಡಗಲಿಯ ಹಾಲುಸ್ವಾಮಿ ಮಠದ ಅಭಿನವ ಶ್ರೀ ಹಾಲುಶ್ರೀ ಸ್ವಾಮೀಜಿ ಕೂಡ ಈ ಪ್ರಕರಣದಲ್ಲಿ ಇದ್ದು, ಮೂರನೇ ಆರೋಪಿಯಾಗಿದ್ದಾರೆ. ಚೈತ್ರಾ ಕುಂದಾಪುರ ಅರೆಸ್ಟ್ ಆಗುತ್ತಿದ್ದಂತೆಯೇ ಸ್ವಾಮೀಜಿ ನಾಪತ್ತೆಯಾಗಿದ್ದಾರೆ. ಮಠಕ್ಕೆ ಬರದೇ ಫೋನ್ ಸಂಪರ್ಕಕ್ಕೆ ಸಿಗದೇ ತಲೆಮರೆಸಿಕೊಂಡಿದ್ದಾರೆ. ಹೀಗಾಗಿ ಸಿಸಿಬಿ ಪೊಲೀಸರು ಸ್ವಾಮೀಜಿ ಬಂಧನಕ್ಕೆ ಬಲೆ ಬೀಸಿದ್ದು, ಅವರು ಸಿಕ್ಕ ಬಳಿಕ ಈ ಪ್ರಕರಣ ಮತ್ತಷ್ಟು ಸ್ಫೋಟಕ ಅಂಶಗಳು ಬಯಲಾಗಲಿವೆ.