ವಿವಿಧ ರೀತಿಯ ಅಪರಾಧ, ಸ್ವರಕ್ಷಣೆಗಾಗಿ ಅಥವಾ ಸ್ವತ್ತಿನ ರಕ್ಷಣೆಗಾಗಿ ಆಯುಧಗಳಾಗಿ ವಿನ್ಯಾಸಗೊಳಿಸಿದ ಬಂದೂಕುಗಳು ಮತ್ತು ಅದಕ್ಕೆ ಸಂಬಂಧಪಟ್ಟ ಮದ್ದುಗುಂಡುಗಳ ತಯಾರಿಕೆ, ಸ್ವಾದೀನತೆ, ಉಪಯೋಗ, ಮಾರಾಟ, ಆಮದು, ರಫ್ತು ಮತ್ತು ಸಾಗಣೆ ಇವುಗಳನ್ನು ನಿಯಂತ್ರಿಸಲು ಭಾರತೀಯ ಶಸ್ತ್ರಾಸ್ತ್ರ ಕಾಯಿದೆ 1959 ಎಂಬ ಕಾನೂನನ್ನು ಕೇಂದ್ರ ಸರಕಾರವು ದಿನಾಂಕ 1959 ಡಿಸೆಂಬರ್ 23 ರಂದು ಜಾರಿಗೆ ತಂದಿದ್ದು ಅದು ಕಾಲ ಕ್ರಮೇಣ ವಿವಿಧ ರೀತಿಯ ತಿದ್ದುಪಡಿಗಳೊಂದಿಗೆ ನಮ್ಮ ದೇಶಾದ್ಯಂತ ಜಾರಿಯಲ್ಲಿರುತ್ತದೆ. ಶಸ್ತ್ರಾಸ್ತ್ರಗಳು ಎಂದರೆ ಕೇವಲ ಬಂದೂಕುಗಳು ಮಾತ್ರವಲ್ಲದೆ ಈ ಕಾಯ್ದೆಯಲ್ಲಿ ವಿವರಿಸಿರುವ ಇತರ ಮಾರಕ ಆಯುಧಗಳು, ಚೂಪಾದ ತುದಿಗಳನ್ನು ಹೊಂದಿರುವ ಸ್ವತ್ತುಗಳು ಅಥವಾ ಮಾರಕ ಆಯುಧಗಳು, ಮತ್ತು ಇದರ ತಯಾರಿಕೆಗಾಗಿ ಬಳಸುವ ಯಂತ್ರೋಪಕರಣಗಳು ಸೇರಿರುತ್ತದೆ. ಈ ಕಾನೂನಿನ ಅನ್ವಯ ಯಾವುದೇ ವ್ಯಕ್ತಿ ಸರಕಾರದಿಂದ ಸೂಕ್ತ ಪರವಾಮಗಿ ಅಂದರೆ ಲೈಸೆನ್ಸ್ ಇಲ್ಲದೇ ಯಾವುದೇ ಬಂದೂಕು ಅಥವಾ ಮದ್ದುಗುಂಡುಗಳನ್ನು ಸ್ವಾಧೀನ ಹೊಂದಿದಲ್ಲಿ ಅಥವಾ ಇತರರಿಂದ ಸ್ವಾಧೀನತೆ ಪಡೆದಲ್ಲಿ, ಸಾಗಿಸಿದಲ್ಲಿ ಅಥವಾ ಉಪಯೋಗಿಸಿದಲ್ಲಿ ಆತ ಶಿಕ್ಷಾರ್ಹ ಅಪರಾಧ ಮಾಡಿದಂತಾಗಿ ಕಾನೂನು ನಿಗದಿಪಡಿಸಿದ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.
ಇತ್ತೀಚೆಗೆ 2019ರಲ್ಲಿ ಈ ಕಾನೂನನ್ನು ಪರಿಣಾಮಕಾರಿಯಾಗಿ ಬಳಸುವ ಮತ್ತು ಜಾರಿಗೆ ತರುವ ಉದ್ದೇಶದಿಂದ ಹಲವು ರೀತಿಯ ತಿದ್ದುಪಡಿಗಳನ್ನು ಸಹ ಕೇಂದ್ರ ಸರಕಾರವು ಮಾಡಿದ್ದು ಇದರ ಪ್ರಕಾರ ಸರಕಾರವು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ ಪ್ರಕಾರ ಯಾವುದೇ ವ್ಯಕ್ತಿಗೆ ನೀಡುವ ಪರವಾನಗಿ ಅವಧಿಯನ್ನು 3 ವರ್ಷಗಳಿಂದ 5 ವರ್ಷಗಳ ವರೆಗೆ ಹೆಚ್ಚಿಸಲಾಗಿರುತ್ತದೆ. ಈ ಕಾಯ್ದೆಯಡಿಯ ವಿವಿಧ ಅಪರಾಧಗಳಿಗೆ ವಿಧಿಸುವ ಶಿಕ್ಷೆ ಅಥವಾ ದಂಡವನ್ನು ಹೆಚ್ಚಿಸಲಾಗಿದೆ. ಈ ಕಾಯ್ದೆಯು ತಿದ್ದುಪಡಿ ಆದ ಪ್ರಕಾರ ಯಾವುದೇ ಒಬ್ಬ ವ್ಯಕ್ತಿ ಬಂದೂಕನ್ನು ಹೊಂದಲು, ಸಾಗಿಸಲು ಅಥವಾ ಇತರರಿಂದ ಸ್ವಾದೀನ ಪಡೆಯಲು ಒಟ್ಟು 3 ಬಂದೂಕುಗಳಿಗೆ ಮಾತ್ರ ಸರಕಾರದಿಂದ ಪರವಾನಗಿಯನ್ನು ಪಡೆಯಬಹುದಾಗಿದೆ. ಬಂದೂಕಿನ ಮಾಲಿಕ ಶಸ್ತ್ರಾಸ್ತ್ರ ಪಡೆಯ ಸದಸ್ಯನಾಗಿದ್ದರೆ ಆತ ತನ್ನ ಬಂದೂಕನ್ನು ಸಂಬಂಧಪಟ್ಟ ಯುನಿಟ್ ಶಸ್ತ್ರಾಗಾರದಲ್ಲಿ ಠೇವಣಿ ಇಡಬಹುದಾಗಿದೆ ಮತ್ತು ಹೆಚ್ಚುವರಿ ಬಂದೂಕುಗಳನ್ನು ಡಿಲೈಸೆನ್ಸ್ ಮಾಡಬಹುದಾಗಿದೆ. ಪರವಾನಿಗೆ ಇಲ್ಲದೆ ಬಂದೂಕುಗಳ ತಯಾರಿಕೆ, ಮಾರಾಟ, ಬಳಕೆ, ವರ್ಗಾವಣೆ, ಪರಿವರ್ತನೆ, ಪರೀಕ್ಷೆ ಅಥವಾ ಪ್ರೂಫಿಂಗ್ ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಅಲ್ಲದೆ ಯಾವುದೇ ಬಂದೂಕಿನ ಬ್ಯಾರೆಲ್‌ನ್ನು ಕಡಿಮೆ ಮಾಡುವುದನ್ನು, ಪರವಾನಗಿ ಇಲ್ಲದೆ ಅನುಕರಣೆ ಬಂದೂಕುಗಳನ್ನು ಬಂದೂಕುಗಳಾಗಿ ಪರಿವರ್ತಿಸುವುದನ್ನು ನಿಷೇಧಿಸಲಾಗಿರುತ್ತದೆ.
ಲೈಸೆನ್ಸ್ ಇಲ್ಲದ ಬಂದೂಕುಗಳನ್ನು ಪಡೆಯುವುದು ಅಥವಾ ಒಂದು ವರ್ಗದ ಬಂದೂಕನ್ನು ಇನ್ನೊಂದಕ್ಕೆ ಪರಿವರ್ತಿಸುವುದನ್ನು ನಿಷೇಧಿಸಲಾಗಿದೆ. ಈ ಕಾನೂನಿನ ಪ್ರಕಾರದ ವಿವಿದ ಅಪರಾಧಗಳಿಗೆ ಶಿಕ್ಷೆಯನ್ನು ಸಹ ಹೆಚ್ಚಿಸಲಾಗಿರುತ್ತದೆ. ಯಾವುದೇ ವ್ಯಕ್ತಿ ಪರವಾನಗಿ ರಹಿತವಾಗಿ ನಿಷೇದಿತ ಮದ್ದು ಗುಂಡುಗಳನ್ನು ಸ್ವಾಧೀನಹೊಂದಿದಲ್ಲಿ ಅಥವಾ ಸಾಗಿಸಿದಲ್ಲಿ ದಂಡದ ಜೊತೆಗೆ ಐದು ವರ್ಷದಿಂದ ಹತ್ತು ವರ್ಷಗಳವರೇಗಿನ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ನಿಷೇಧಿತ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ಬಳಕೆಯು ಯಾವುದೇ ವ್ಯಕ್ತಿಯ ಸಾವಿಗೆ ಕಾರಣವಾಗುವ ಪ್ರಕರಣಕ್ಕೆ ಸಂಬಂಧಪಟ್ಟ ವ್ಯಕ್ತಿಯು ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ಹಾಗೂ ದಂಡನೆಗೆ ಗುರಿಯಾಗಬೇಕಾಗುತ್ತದೆ. ಮೇಲ್ಕಾಣಿಸಿದ ಕಾನೂನು ತಿದ್ದುಪಡಿ ಆದ ಪ್ರಕಾರ ಈ ಕೆಳಗೆ ತಿಳಿಸಿದ ಕೃತ್ಯಗಳನ್ನು ಅಂದರೆ,
(1) ಪೋಲಿಸ್ ಅಥವಾ ಶಸಸ್ತ್ರ ಪಡೆಗಳಿಂದ ಬಂದೂಕನ್ನು ಬಲವಂತವಾಗಿ ಕಿತ್ತುಕೊಳ್ಳುವುದು ಘೋರ ಅಪರಾಧವಾಗಿದ್ದು ಸಂಬಂಧಪಟ್ಟ ಅಪರಾಧಿಯು 10 ವರ್ಷದಿಂದ ಜೀವಾವಧಿವರೆಗಿನ ಶಿಕ್ಷೆ ಅನುಭವಿಸಬೇಕಾಗುತ್ತದೆ.
(2) ಸಂಭ್ರಮ ಆಚರಣೆಯ ಸಂದರ್ಭದಲ್ಲಿ ಮಾನವ ಜೀವ ಅಥವಾ ಇತರರ ವೈಯುಕ್ತಿಕ ಸುರಕ್ಷತಗೆ ಅಪಾಯವನ್ನುಂಟುಮಾಡುವ ರೀತಿಯಲ್ಲಿ ಮದ್ದುಗುಂಡುಗಳನ್ನು ಹಾರಿಸುವುದು ಮತ್ತು ಬಂದೂಕುಗಳನ್ನು ಬಳಸುವುದು, ಶಿಕ್ಷಾರ್ಹ ಅಪರಾಧವಾಗಿದ್ದು ಕಾನೂನಿನ ಅನ್ವಯ ಸಂಬಂಧಪಟ್ಟ ಅಪರಾಧಿಯು ಎರಡು ವರ್ಷಗಳವರೆಗಿನ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂಪಾಯಿಗಳವರೆಗೆ ದಂಡನೆಗೆ ಗುರಿಯಾಗಬೇಕಾಗುತ್ತದೆ.
