ಎಸಿಸಿ ಡೀಲರ್‌ಶಿಪ್ ಕೊಡಿಸುವುದಾಗಿ ನಂಬಿಸಿ ಮುಂಬಯಿ ವ್ಯಕ್ತಿಯಿಂದ ವಂಚನೆ
ಕಾರ್ಕಳ: ಕುಕ್ಕುಂದೂರು ಗ್ರಾಮದ ಜೋಡುರಸ್ತೆಯ ರಾಜಾಪುರ ಕೋ-ಆಪರೇಟಿವ್ ಸೊಸೈಟಿ ಬಳಿ ಇರುವ ಸೌಮ್ಯ ಹಾರ್ಡ್‌ವೇರ್ ಅಂಗಡಿ ಮಾಲಕನಿಗೆ ಎಸಿಸಿ ಸಿಮೆಂಟ್ ಡೀಲರ್‌ಶಿಪ್ ಕೊಡಿಸುವುದಾಗಿ ಹೇಳಿ ಮುಂಬಯಿಯ ವ್ಯಕ್ತಿ 1.25 ಲ.ರೂ. ವಂಚಿಸಿದ ಕುರಿತು ದೂರು ದಾಖಲಾಗಿದೆ.
ಅಂಗಡಿ ಮಾಲಕ ಶರತ್ ಆಚಾರ್ಯ (32) ಎಸಿಸಿ ಸಿಮೆಂಟ್ ಡೀಲರ್‌ಶಿಪ್ ಪಡೆಯುವ ಸಲುವಾಗಿ ಗೂಗಲ್‌ನಲ್ಲಿ ಹುಡುಕಾಡಿದಾಗ ಎಸಿಸಿ ಲಿಮಿಟೆಡ್ ಎಂಬ ವೆಬ್‌ಸೈಟಿನಲ್ಲಿ ದೊರೆತ 7980942036 ಮೊಬೈಲ್ ನಂಬರ್‌ಗೆ ಸೆ. 3ರಂದು ಕರೆಮಾಡಿದ್ದರು. ಆ ಕಡೆಯಿಂದ ಮಾತನಾಡಿದ ವ್ಯಕ್ತಿ ಡೀಲರ್‌ಶಿಪ್ ಕೊಡಿಸುತ್ತೇನೆ ಎಂದು ಹೇಳಿ ರಿಜಿಸ್ಟ್ರೇಷನ್ ಶುಲ್ಕವಾಗಿ 1.25 ಲ.ರೂ. ಕೇಳಿದ್ದಾನೆ. ಈ ಮೊತ್ತವನ್ನು ಶರತ್ ಆಚಾರ್ಯ ಆರೋಪಿಯ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಮುಂಬಯಿ ಅಂಧೇರಿ ಈಸ್ಟ್ ಬ್ರಾಂಚ್‌ನ ಖಾತೆಗೆ ನೆಫ್ಟ್ ಮೂಲಕ ಪಾವತಿಸಿದ್ದಾರೆ. ಬಳಿಕ 1000 ಚೀಲ ಸಿಮೆಂಟ್‌ಗಾಗಿ 3.36 ಲ.ರೂ. ಪಾವತಿಸಲು ಹೇಳಿದ್ದಾನೆ. ಈ ಹಣ ತಾಂತ್ರಿಕ ದೋಷದ ಕಾರಣ ವರ್ಗಾವಣೆಯಾಗಿಲ್ಲ. ಆದರೆ ಮುಂಬಯಿಯ ವ್ಯಕ್ತಿ ರಿಜಿಸ್ಟ್ರೇಷನ್‌ಗೆ ಎಂದು ಪಡೆದುಕೊಂಡ ಹಣವನ್ನು ವಾಪಸು ಕೊಟ್ಟಿಲ್ಲ ಎಂದು ಶರತ್ ಆಚಾರ್ಯ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.