ಉಡುಪಿ ಜಿಲ್ಲೆಯ ನಿರ್ಧಾರ ಇನ್ನೂ ಬಾಕಿ
ಮಂಗಳೂರು: ಕರಾವಳಿಯಲ್ಲಿ ಗಣೇಶ ಚತುರ್ಥಿಯನ್ನು ಸೆ.19ರಂದು ಆಚರಿಸಲಾಗುತ್ತಿದ್ದು, ಅದೇ ದಿನ ಸರಕಾರಿ ರಜೆ ಘೋಷಣೆ ಮಾಡಬೇಕೆಂದು ಒತ್ತಾಯವಿದೆ. ಈ ಹಿನ್ನಲೆಯಲ್ಲಿ ದ.ಕ. ಜಿಲ್ಲೆಯಾದ್ಯಂತ ಸರಕಾರಿ ರಜೆಯನ್ನು ಸೆ.18ರ ಬದಲು 19ರಂದು ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ದ.ಕ. ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ಉಡುಪಿ ಜಿಲ್ಲೆಯ ರಜೆ ಬದಲಾವಣೆ ಕುರಿತಂತೆ ನಿರ್ಧಾರ ಇನ್ನೂ ಆಗಿಲ್ಲ.
ಸರಕಾರಿ ರಜೆಯ ಕ್ಯಾಲೆಂಡರ್ ಪ್ರಕಾರ ಈ ವರ್ಷ ಗಣೇಶೋತ್ಸವಕ್ಕೆ ಸೆ.18ರಂದು (ಸೋಮವಾರ) ರಜೆ ನೀಡಿರುವುದರಿಂದ ಇನ್ನಿಲ್ಲದ ಗೊಂದಲ ಸೃಷ್ಟಿಯಾಗಿದೆ. ಉತ್ತರ ಕರ್ನಾಟಕ ಭಾಗದವರಿಗೆ ಗಣೇಶೋತ್ಸವದ ಮುನ್ನಾದಿನ ಆಚರಿಸುವ ಗೌರಿ ಹಬ್ಬ ಮುಖ್ಯವಾಗಿರುವುದರಿಂದ ಸೋಮವಾರ ರಜೆ ನೀಡಲಾಗಿದೆ. ಆದರೆ ಕರಾವಳಿಯಲ್ಲಿ ಗಣೇಶೋತ್ಸವವೇ ಮುಖ್ಯ ಹಬ್ಬವಾಗಿರುವುದುರಿಂದ ಹಬ್ಬದ ದಿನ ಕಚೇರಿಗೆ ಹೋಗುವ ಅನಿವಾರ್ಯತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ (ಸೆ.19) ರಜೆ ನೀಡಬೇಕೆಂದು ಸರಕಾರವನ್ನು ಒತ್ತಾಯಿಸಲಾಗಿತ್ತು. ದ.ಕ ಜಿಲ್ಲಾ ಉಸ್ತುವಾರಿ ಸಚಿವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಗಣೇಶೋತ್ಸವವನ್ನು ಸೆ.19ರಂದು ಆಚರಿಸಲಾಗುವ ಹಿನ್ನೆಲೆಯಲ್ಲಿ ಸಾರ್ವತ್ರಿಕ ರಜೆಯನ್ನು ಸೆ. 19ರಂದೇ ನೀಡುವಂತೆ ಸ್ಪೀಕರ್ ಖಾದರ್ ಅವರೂ ಕೋರಿದ್ದರು.