ಮೂಡುಬಿದಿರೆಯಲ್ಲಿ ಕ್ರಿ.ಪೂ.700ರ ಟೆರಾಕೋಟಾ ಪ್ರತಿಮೆಗಳು ಪತ್ತೆ

ದೈವಾರಾಧನೆಯ ಸಂಶೋಧನೆಗೆ ಆಧಾರವಾಗುವ ಅವಶೇಷಗಳು

ಮೂಡುಬಿದಿರೆ : ಮೂಡುಬಿದಿರೆಯ ಸಮೀಪದ ಮೂಡುಕೊಣಾಜೆಯಲ್ಲಿ ಇತ್ತೀಚೆಗೆ ಪುರಾತತ್ತ್ವ ಶಾಸ್ತ್ರದ ಪರಿಶೋಧನೆಯಲ್ಲಿ ಪತ್ತೆಯಾಗಿರುವ ಟೆರಾಕೋಟಾ ಪ್ರತಿಮೆಗಳು ಕ್ರಿ.ಪೂ.800-700ಕ್ಕೆ ಹಿಂದಿನವು ಎಂದು ಶಿರ್ವ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ನಿವೃತ್ತ ಸಹಪ್ರಾಧ್ಯಾಪಕ ಟಿ.ಮುರುಗೇಶಿ ಹೇಳಿದ್ದಾರೆ.
ಮೂಳೆ ಮತ್ತು ಕಬ್ಬಿಣದ ತುಂಡುಗಳೊಂದಿಗೆ ತಯಾರಿಸಿದ ವಿಶಿಷ್ಟವಾದ ಪ್ರಾಚೀನ ಟೆರಾಕೋಟಾ ಅವಶೇಷಗಳು ಇಲ್ಲಿ ಸಿಕ್ಕಿವೆ.
ಎಂಟು ಪ್ರತಿಮೆಗಳಲ್ಲಿ ಎರಡು ಗೋವುಗಳು, ಒಂದು ಮಾತೃದೇವತೆ, ಎರಡು ನವಿಲುಗಳು, ಒಂದು ಕುದುರೆ. ಮಾತೃದೇವತೆಯ ಕೈ ಮತ್ತು ಅಜ್ಞಾತ ವಸ್ತುವನ್ನು ಪ್ರತಿನಿಧಿಸುವ ಪ್ರತಿಮೆಗಳಿವೆ.
ಮೂಡುಕೊಣಾಜೆಯ ಮೆಗಾಲಿಥಿಕ್ ಸ್ಥಳವನ್ನು 1980ರ ದಶಕದಲ್ಲಿ ಇತಿಹಾಸಕಾರ ಮತ್ತು ಸಂಶೋಧಕ ಪುಂಡಿಕಾಯಿ ಗಣಪಯ್ಯ ಭಟ್ ಕಂಡುಹಿಡಿದಿದ್ದರು. ಈ ಅಪರೂಪದ ಸಂಶೋಧನೆ ತಾಣವು ಮೂಡುಬಿದಿರೆ-ಶಿರ್ತಾಡಿ ರಸ್ತೆಯಲ್ಲಿ ಮೂಡುಬಿದಿರೆಯಿಂದ ಸುಮಾರು 8 ಕಿ.ಮೀ ದೂರದಲ್ಲಿದೆ. ಇದು ಕಲ್ಲಿನ ಬೆಟ್ಟದ ಇಳಿಜಾರಿನಲ್ಲಿ ಒಂಬತ್ತು ಡಾಲ್ಮೆನ್‌ಗಳನ್ನು ಒಳಗೊಂಡಿರುವ ಅತಿದೊಡ್ಡ ಮೆಗಾಲಿಥಿಕ್ ಡಾಲ್ಮೆನ್ ತಾಣವಾಗಿದೆ. ಆದರೆ ಎರಡು ಡಾಲ್ಮನ್‌ಗಳು ಮಾತ್ರ ಹಾಗೇ ಉಳಿದಿದ್ದು, ಉಳಿದ ಸಮಾಧಿಗಳು ಹಾಳಾಗಿವೆ.
ಮೂಡುಕೊಣಾಜೆಯಲ್ಲಿ ಸಿಕ್ಕಿರುವ ಟೆರಾಕೋಟಾ ಪ್ರತಿಮೆಗಳು ಭಾರತದ ಅಪರೂಪದ ಸಂಶೋಧನೆಗಳಾಗಿವೆ. ನಿಧಿ ಕಳ್ಳರು ಅಗೆದ ಡಾಲ್ಮೆನ್‌ಗಳ ಮೇಲ್ಮೈಯಲ್ಲಿ ಅವು ಕಂಡುಬಂದಿವೆ. ಡಾಲ್ಮೆನ್‌ಗಳಲ್ಲಿ ಕಂಡುಬರುವ ಗೋವುಗಳು ಡಾಲ್ಮೆನ್‌ಗಳ ಕಾಲಗಣನೆಯನ್ನು ನಿರ್ಧರಿಸಲು ಸಹಾಯ ಮಾಡುತ್ತವೆ. ಮೆಗಾಲಿಥಿಕ್ ಸಮಾಧಿಯಲ್ಲಿ ಕಂಡುಬರುವ ಟೆರಾಕೋಟಾಗಳು ಕರಾವಳಿಯ ಭೂತಾರಾಧನೆ ಅಥವಾ ದೈವಾರಾಧನೆಯ ಅಧ್ಯಯನಕ್ಕೆ ಗಟ್ಟಿಯಾದ ಆಧಾರವನ್ನು ಒದಗಿಸುತ್ತವೆ.

error: Content is protected !!
Scroll to Top