ಪಾದಯಾತ್ರೆಯಲ್ಲಿ ನಾವೂ ಭಾಗವಹಿಸುತ್ತೇವೆ, ಸತ್ಯ ಅಂದೇ ಬಹಿರಂಗವಾಗಲಿ – ಶುಭದ ರಾವ್
ಕಾರ್ಕಳ : ಪರಶುರಾಮ ಥೀಮ್ ಪಾರ್ಕ್ ಕಾಮಗಾರಿ ಸಂಪೂರ್ಣಗೊಳಿಸಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಬೈಲೂರು ಪರಿಸರದ ಬಿಜೆಪಿ ಪಕ್ಷ ಪ್ರಮುಖರು, ಸಂಘ ಸಂಸ್ಥೆಗಳು ಸೇರಿದಂತೆ ಸೆ. 23 ರಂದು ಕಾರ್ಕಳದಿಂದ ಬೈಲೂರಿಗೆ ಪಾದಾಯಾತ್ರೆ ನಡೆಸಲಿದ್ದಾರೆ. ಈ ಪಾದಯಾತ್ರೆಯಲ್ಲಿ ನಾವೂ ಭಾಗವಹಿಸುತ್ತೇವೆ, ಪರಶುರಾಮನ ಪ್ರತಿಮೆ ಯಾವುದರಿಂದ ನಿರ್ಮಾಣ ಮಾಡಲಾಗಿದೆ ಎನ್ನುವ ಸತ್ಯ ಅಂದೇ ಬಹಿರಂಗವಾಗಲಿ ಎಂದು ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದ ರಾವ್ ಆಗ್ರಹಿಸಿದ್ದಾರೆ.
ನಮಗೂ ಮಾತನಾಡಲು ಅವಕಾಶ ನೀಡಿ
ಚುನಾವಣಾ ಪೂರ್ವದಲ್ಲಿ ಶಾಸಕ ಸುನಿಲ್ ಕುಮಾರ್ ಮುತುವರ್ಜಿಯಲ್ಲಿ ನಿರ್ಮಾಣವಾಗಿರುವ ಪರಶುರಾಮನ ಥೀಮ್ ಪಾರ್ಕ್ ಹಲವು ಗೊಂದಲಗಳಿಗೆ ಕಾರಣವಾಗಿವೆ. ಕಂಚಿನದ್ದು ಎಂದು ಸ್ಥಾಪಿಸಲಾದ ಪರಶುರಾಮನ ಪ್ರತಿಮೆಯ ಬಗ್ಗೆ ಹಲವಾರು ಸಂಶಯಗಳಿದ್ದು, ಸತ್ಯ ಏನು ಎಂದು ತಿಳಿಯುವ ಪ್ರಯತ್ನವಾಗಬೇಕಿದೆ. ಹಾಗಾಗಿ ಈ ವಿಚಾರವಾಗಿ ಸೆ. 23 ರಂದು ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ನಾವೂ ಭಾಗವಹಿಸುತ್ತೇವೆ, ನಮಗೂ ಥೀಮ್ ಪಾರ್ಕಿನ ವಿಚಾರವಾಗಿ ಮಾತನಾಡಲು ಅವಕಾಶ ನೀಡಬೇಕು, ಅಂದೇ ಮೂರ್ತಿಯ ನೈಜ್ಯತೆಯ ಬಗ್ಗೆ ಸತ್ಯಾಸತ್ಯತೆ ಬಹಿರಂಗವಾಗಿ ಗೊಂದಲ ನಿವಾರಣೆಯಾಗಲಿ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಥೀಮ್ ಪಾರ್ಕ್ ವಿರೋಧಿಯಲ್ಲ
ಕಾಂಗ್ರೇಸ್ ಥೀಮ್ ಪಾರ್ಕ್ ಬಗ್ಗೆ ಯಾವತ್ತೂ ವಿರೋದ ಮಾಡಲಿಲ್ಲ, ಮಾಡುವುದೂ ಇಲ್ಲ. ನಮ್ಮ ಆಗ್ರಹ ಕೇವಲ ಪ್ರತಿಮೆ ಯಾವುದರಿಂದ ಮಾಡಲಾಗಿದೆ ಎನ್ನುವುದಾಗಿದೆ. ಪ್ರತಿಮೆಯ ಬಗ್ಗೆ ಸಂಶಯ ಬಂದಾಗ ಪ್ರಶ್ನಿಸುವುದು ನಮ್ಮ ಕರ್ತವ್ಯ, ಯಾಕೆಂದರೆ ಅಲ್ಲಿ ವಿನಿಯೋಗವಾಗಿದ್ದು ಜನರ ತೆರಿಗೆ ಹಣ. ಕಂಚಿನ ಪ್ರತಿಮೆ ಎಂದು ನಂಬಿಸಿ ಬೇರೆಯೆ ವಸ್ತುವಿನಿಂದ ಪರಶುರಾಮನ ಪ್ರತಿಮೆ ಮಾಡಿದ್ದರ ಪರಿಣಾಮ ಇಷ್ಟೆಲ್ಲಾ ಗೊಂದಲಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ದಿಕ್ಕಾರವಿದೆ
ಇದು ದೇಶದಲ್ಲೇ ಪ್ರಥಮ, ತನ್ನ ಸರಕಾರವಿದ್ದರೂ ಪಾರ್ಕ್ ನಿರ್ಮಾಣಕ್ಕೆ ಜಮೀನು ಕಾದಿರಿಸದೆ ಅದರ ವಿರುದ್ಧವೇ ಆದೇಶ ಹೊರಡಿಸಲಾಗಿದೆ. ಅಂದು ಮೌನವಿದ್ದ ಶಾಸಕರು ಇಂದು ಮೈ ಪರಚಿಕೊಳ್ಳುತ್ತಿದ್ದಾರೆ. ತನ್ನ ಮುತುರ್ವಜಿಯಲ್ಲಿ ಪ್ರತಿಷ್ಠಾಪಿಸಿದ ಪ್ರತಿಮೆ ಕಂಚಿನಿಂದಲೇ ಮಾಡಲಾಗಿದೆ ಎಂದು ಹೇಳುವ ದೈರ್ಯ ತೋರದ ಶಾಸಕರು ಈ ಎಲ್ಲಾ ಗೊಂದಲಗಳಿಗೆ ಕಾರಣವಾಗಿದ್ದಾರೆ. ರಾಜಕೀಯ ಪ್ರಚಾರಕ್ಕಾಗಿ ನಕಲಿ ಮೂರ್ತಿ ಸ್ಥಾಪಿಸಿದ ಅವರಿಗೆ ನನ್ನ ದಿಕ್ಕಾರವಿದೆ ಎಂದರು.
ಥೀಮ್ ಪಾರ್ಕ್ ಪರವಾಗಿ ಪ್ರತಿಭಟಿಸುವ ಮತ್ತು ಈ ಬಗ್ಗೆ ಹೇಳಿಕೆ ನೀಡುವ ನಾಯಕರು ವಿಷಯಾಂತರ ಮಾಡದೆ ಮೂರ್ತಿಯ ಅಸಲಿಯತೆಯ ಬಗ್ಗೆ ಮೊದಲು ತಿಳಿದುಕೊಂಡು ಮಾತನಾಡಲಿ. ಒಬ್ಬ ವ್ಯಕ್ತಿಯ ರಾಜಕೀಯ ತೆವಲಿಗೆ ಇಡೀ ರಾಜ್ಯದ ಜನರನ್ನು ಮೂರ್ಖರನ್ನಾಗಿಸುವ ಪ್ರಯತ್ನ ನಿಲ್ಲಲಿ ಎಂದು ಎಂದು ಶುಭದ ರಾವ್ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.