ಮೂರು ತಿಂಗಳಲ್ಲಿ ಹಂತ ಹಂತವಾಗಿ ಚಿನ್ನ ತಂದು ಅಡವು
ಉಡುಪಿ : ನಕಲಿ ಚಿನ್ನ ಅಡವಿಟ್ಟು ಸಹಕಾರಿ ಸಂಸ್ಥೆಗೆ 20.62 ಲಕ್ಷ ರೂ. ವಂಚಿಸಿದ ಘಟನೆ ಉಡುಪಿಯಲ್ಲಿ ಸಂಭವಿಸಿದೆ.
ಬ್ರಹ್ಮಗಿರಿಯಲ್ಲಿರುವ ಆದರ್ಶ ಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ರಿಯಾಝ್ ಎಂಬಾತ ಜು.17ರಿಂದ ಸೆ.2ರ ನಡುವೆ ಹಂತಹಂತವಾಗಿ ಒಟ್ಟು 527.8 ಗ್ರಾಂ ನಕಲಿ ಚಿನ್ನವನ್ನು ಅಡವಿರಿಸಿ 20.62 ಲಕ್ಷ ರೂ. ಸಾಲವಾಗಿ ಪಡೆದು ವಂಚಿಸಿರುವುದಾಗಿ ಸಂಸ್ಥೆಯ ಕಾರ್ಯದರ್ಶಿ ಜಲೇಂದ್ರ ಕೋಟ್ಯಾನ್ ದೂರು ನೀಡಿದ್ದಾರೆ.
ರಿಯಾಝ್ ಸೆ.5ರಂದು ತನ್ನ ಹೆಂಡತಿ ಹಾಗೂ ದಾವೂದ್ ಅಬೂಬಕ್ಕರ್ ಎಂಬವರೊಂದಿಗೆ ಕಾರಿನಲ್ಲಿ ಸೊಸೈಟಿಗೆ ಬಂದು ಎರಡು ನೆಕ್ಲೇಸ್ ಆಧಾರದಲ್ಲಿ ಸಾಲ ಕೇಳಿದಾಗ ಸಂಶಯಗೊಂಡ ಜಲೇಂದ್ರ ಕೋಟ್ಯಾನ್, ಸಂಘದ ಸರಾಫರ ಮೂಲಕ ಆಭರಣವನ್ನು ಪರಿಶೀಲಿಸಿದಾಗ ಅದು ನಕಲಿ ಎಂದು ಗೊತ್ತಾಗಿದ್ದು, ಆಗ ಆಪಾದಿತ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದ. ಇದರಿಂದ ಸಂಶಯಗೊಂಡ ಅವರು, ಆತ ಹಿಂದೆ ಅಡವಿಟ್ಟ ಚಿನ್ನಾಭರಣ ಗಳನ್ನು ಸಹ ಪರೀಕ್ಷೆಗೊಳಪಡಿಸಿದಾಗ ಎಲ್ಲವೂ ನಕಲಿ ಎಂದು ಗೊತ್ತಾಗಿದೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.