ಬಿಲ್ಡರ್‌ಗಳ ಸಭೆ ಕರೆದು ಟಾರ್ಗೆಟ್ ನೀಡಿದ್ದಾರೆ ಎಂದು ಹೊಸ ಬಾಂಬ್
ಬೆಂಗಳೂರು : ರಿಯಲ್ ಎಸ್ಟೇಟ್ ಕುಳಗಳು ಹಾಗೂ ಬಿಲ್ಡರ್‌ಗಳಿಂದ ಕಾಂಗ್ರೆಸ್ ಸರ್ಕಾರದ ಪ್ರಭಾವಿಗಳು 2,000 ಕೋಟಿ ರೂ. ಸುಲಿಗೆ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಬೆಂಗಳೂರಿನಲ್ಲಿ ಬಿಲ್ಡರ್‌ಗಳ ಸಭೆ ಮಾಡಿರುವ ಪ್ರಭಾವಿಗಳು, ಲೋಕಸಭೆ ಚುನಾವಣೆ ನೆಪ ಇಟ್ಟುಕೊಂಡು ಬಿಲ್ಡರ್‌ಗಳಿಂದ ಪ್ರತಿ ಚದರ ಅಡಿಗೆ 100 ರೂಪಾಯಿ ಲೆಕ್ಕದಲ್ಲಿ ವಸೂಲಿಗೆ ಇಳಿದಿದ್ದಾರೆ. ಆ ಮೂಲಕ ಭರ್ತಿ 2,000 ಕೋಟಿ ರೂಪಾಯಿ ಸಂಗ್ರಹಕ್ಕೆ ಗುರಿ ಇಟ್ಟುಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಹೆಸರಿಗೆ ʼಇಂಡಿಯಾʼ ಎಂದು ಕೂಟ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿಯೇ ನಾಮಕರಣ ಮಾಡಿಕೊಂಡರು. ಅದೇ ʼಇಂಡಿಯಾʼ ಹೆಸರಲ್ಲಿ ನಾಡಿನ ಸಂಪತ್ತು ಲೂಟಿ ಮಾಡಲು ಅವರು ಹೊರಟಿದ್ದಾರೆ. ಬಿಲ್ಡರುಗಳ ಸಭೆ ನಡೆಸಿ ಇಷ್ಟಿಷ್ಟು ಕಪ್ಪ ಒಪ್ಪಿಸಲೇಬೇಕು ಎಂದು ಡಿಮ್ಯಾಂಡ್ ಮಾಡಿದ್ದಾರೆ. ಅವರಿಗೆ ಜನ ಪೆನ್ನು ಪೇಪರ್ ಕೊಟ್ಟಿದ್ದು ಹೀಗೆ ಸುಲಿಗೆ ಮಾಡಲಿಕ್ಕಾ? ಎಂದು ನೇರ ಆರೋಪ ಮಾಡಿದ್ದಾರೆ.
ಬೆಂಗಳೂರು-ಮೈಸೂರು ಯೋಜನೆ (ನೈಸ್ ರಸ್ತೆ) ಬಹುಕೋಟಿ ರೂ. ಹಗರಣವಾಗಿದ್ದು, ಸುಮಾರು 2-3 ಲಕ್ಷ ಕೋಟಿ ರೂ. ಮೌಲ್ಯದ ಭೂಮಿಯನ್ನ ಪಟ್ಟಭದ್ರರು ನುಂಗಿದ್ದಾರೆ ಎಂದಿದ್ದಾರೆ. ರೈತರಿಂದ ಕಸಿದುಕೊಂಡಿರುವ ಭೂಮಿಯನ್ನು ವಾಪಸ್ ಪಡೆದು ರೈತರಿಗೆ ಹಸ್ತಾಂತರ ಮಾಡಬೇಕು. ನೈಸ್ ಅಕ್ರಮದಲ್ಲಿ ಈ ಸರ್ಕಾರದ ಪ್ರಭಾವಿ ಸಚಿವರೊಬ್ಬರು ನೇರ ಶಾಮೀಲಾಗಿದ್ದಾರೆ. ಆ ಕಂಪನಿ ಜತೆ ಕೈಜೋಡಿಸಿ ಸಾವಿರಾರು ಕೋಟಿ ರೂ. ಬೆಲೆಯ ರೈತರ ಭೂಮಿಯನ್ನು ಲೂಟಿ ಮಾಡಿದ್ದಾರೆ ಎಂದು ಎಚ್‌ಡಿಕೆ ಹೇಳಿದ್ದಾರೆ.
ನನಗೂ ಪೆನ್ನು ಪೇಪರ್ ಕೊಡಿ ಎಂದು ಚುನಾವಣೆಗೂ ಮುನ್ನ ಜನರಿಗೆ ದುಂಬಾಲು ಬಿದ್ದಿದ್ದರು ಅವರು. ಆದರೆ ಇದೀಗ ಪೆನ್ನು, ಪೇಪರ್ ಸಿಕ್ಕಿದ ನಂತರ ಜನರ ಸಂಪತ್ತನ್ನು ಎಗ್ಗಿಲ್ಲದೆ ಲೂಟಿ ಹೊಡೆಯುತ್ತಿದ್ದಾರೆ. ಸಿದ್ದರಾಮಯ್ಯ ಅವರೇ ಎರಡನೇ ಬಾರಿ ಸಿಎಂ ಆಗಿದ್ದಾರೆ. ಪೂರ್ಣ ಬಹುಮತವೂ ಇದೆ. ರೈತರ ಬಗ್ಗೆ ಕಾಳಜಿ ಇದ್ದರೆ, ಅವರನ್ನು ಉಳಿಸಬೇಕಲ್ಲವೇ? ಹಾಗಿದ್ದರೆ ಕೂಡಲೇ ಕ್ರಮ ತೆಗೆದುಕೊಳ್ಳಿ. ದಮ್ಮು, ತಾಕತ್ತಿನ ಬಗ್ಗೆ ಹೇಳುತ್ತೀರಲ್ಲ, ನಿಮಗೆ ದಮ್ಮು ತಾಕತ್ತು ಇದ್ದರೆ ರೈತರ ಜಮೀನು ವಾಪಸ್ ಪಡೆಯಿರಿ ಎಂದು ಸವಾಲು ಹಾಕಿದ್ದಾರೆ.