ಅವಿಭಜಿತ ದ.ಕ ಜಿಲ್ಲಾ ಕಂಬಳ ಸಮಿತಿಯ ನೂತನ ಅಧ್ಯಕ್ಷರಾಗಿ ಡಾ. ಬೆಳಪು ದೇವಿಪ್ರಸಾದ್ ಶೆಟ್ಟಿ

ಕಾರ್ಯಾಧ್ಯಕ್ಷರಾಗಿ ಗುಣಪಾಲ ಕಡಂಬ – ಪ್ರಧಾನ ಕಾರ್ಯದರ್ಶಿಯಾಗಿ ಲೋಕೇಶ್ ಶೆಟ್ಟಿ ಮುಚ್ಚೂರ್‌ ಕಲ್ಕುಡೆ

ಮೂಡುಬಿದಿರೆ : ಅವಿಭಜಿತ ದ.ಕ ಜಿಲ್ಲಾ ಕಂಬಳ ಸಮಿತಿಯ ನೂತನ ಅಧ್ಯಕ್ಷರಾಗಿ ಡಾ. ಬೆಳಪು ದೇವಿಪ್ರಸಾದ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾರ್ಯಾಧ್ಯಕ್ಷರಾಗಿ ಗುಣಪಾಲ ಕಡಂಬ, ಪ್ರಧಾನ ಕಾರ್ಯದರ್ಶಿಯಾಗಿ ಮುಚ್ಚೂರು ಕಲ್ಕುಡ ಲೋಕೇಶ್ ಶೆಟ್ಟಿಯವರನ್ನು ಮುಂದಿನ ಎರಡು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗಿದೆ.
ಒಂಟಿ ಕಟ್ಟೆಯ ಸೃಷ್ಠಿ ಗಾರ್ಡನ್ ಸಭಾಭವನದಲ್ಲಿ ನಿರ್ಗಮಿತ ಅಧ್ಯಕ್ಷ ಏರ್ಮಾಳ್ ರೋಹಿತ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಸೆ. 10 ರಂದು ನಡೆದ ಸಮಿತಿಯ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಗೌರವಾಧ್ಯಕ್ಷರಾಗಿ – ಏರ್ಮಾಳ್ ರೋಹಿತ್ ಹೆಗ್ಡೆ, ಕೋಶಾಧಿಕಾರಿ – ಚಂದ್ರಹಾಸ ಸನಿಲ್, ಉಪಾಧ್ಯಕ್ಷರಾಗಿ ರಶ್ಮಿತ್ ಶೆಟ್ಟಿ ಹಾಗೂ ಶಕ್ತಿಪ್ರಸಾದ್ ಶೆಟ್ಟಿ , ಉಪ ಕಾರ್ಯದರ್ಶಿ- ವಿದ್ಯಾಧರ್ ಜೈನ್ ಹಾಗೂ ತೀರ್ಪುಗಾರರ ಸಂಚಾಲಕರಾಗಿ ವಿಜಯಕುಮಾರ್ ಕಂಗಿನಮನೆ ಆಯ್ಕೆಯಾಗಿದ್ದಾರೆ.

ಸೆ. 18 ರಂದು ಮೂಡುಬಿದಿರೆಯಲ್ಲಿ ಜಿಲ್ಲಾ ಕಂಬಳ ಸಮಿತಿಯ ಸಭೆ ನಡೆಸಿ, ಈ ಋತುವಿನ ಕಂಬಳದ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಕಳೆದ ವರ್ಷ 18 ಕಂಬಳಗಳು ನಡೆದಿದ್ದು, ಈ ಬಾರಿ ಹೊಸ ಕಂಬಳ ಸಹಿತ 23 ಕಂಬಳಗಳು ನಡೆಯುವ ನಿರೀಕ್ಷೆ ಇದೆ ಎಂದು ಪ್ರಸ್ತಾಪಿಸಲಾಯಿತು.

ಬೆಳಪು ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಕಂಬಳ ಕ್ಷೇತ್ರದ ಹಿರಿಯರ ಮಾರ್ಗದರ್ಶನ, ಕಿರಿಯರ ಸಹಕಾರದಿಂದ ಸಮಿತಿಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತೇನೆ. ಯಾವುದೇ ಸಮಸ್ಯೆ ಬಂದಾಗ ಕಂಬಳ ಕ್ಷೇತ್ರದ ಅನುಭವಿಗಳ ಸಲಹೆ, ಸೂಚನೆಯನ್ನು ಪಡೆದು ಪರಿಹರಿಸೋಣ. ಭಾಸ್ಕರ್ ಕೋಟ್ಯಾನ್ ನೇತೃತ್ವದ ಕಂಬಳ ಶಿಸ್ತು ಸಮಿತಿಗೆ ಮತ್ತಷ್ಟು ಬಲ ನೀಡಿ, ಅಚ್ಚುಕಟ್ಟಾಗಿ ಕಂಬಳ ಹಾಗೂ ಸಮಿತಿಯನ್ನು ಮುನ್ನಡೆಸೋಣ ಎಂದು ತಿಳಿಸಿದರು.

ಪುತ್ತೂರು ಶಾಸಕ, ಉಪ್ಪಿನಂಗಡಿ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಮಾತನಾಡಿ, ನವೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಕಂಬಳವನ್ನು ನಡೆಸುವ ಬಗ್ಗೆ ತಯಾರಿ ನಡೆಯುತ್ತಿದೆ. ಜಿಲ್ಲಾ ಕಂಬಳ ಸಮಿತಿ ಹಾಗೂ ಇತರ ಕಂಬಳ ಸಮಿತಿಗಳ ಸಂಪೂರ್ಣ ಸಹಕಾರದ ನಿರೀಕ್ಷೆಯಲ್ಲಿದ್ದೇವೆ. ಒಂದು ಲಕ್ಷಕ್ಕೂ ಅಧಿಕ ಮಂದಿ ಕಂಬಳ ವೀಕ್ಷಣೆ ಮಾಡುವಂತಹ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದರು.

ಸಮಿತಿಯ ಮಾಜಿ ಅಧ್ಯಕ್ಷರಾದ ಪಿ.ಆರ್ ಶೆಟ್ಟಿ, ಭಾಸ್ಕರ್ ಎಸ್. ಕೋಟ್ಯಾನ್, ಶಾಂತಾರಾಮ ಶೆಟ್ಟಿ ಬಾರ್ಕೂರ, ಮೂಲ್ಕಿ ಸೀಮೆಯ ದುಗ್ಗಣ ಸಾಮಂತ, ಕಂಬಳ ಅಕಾಡೆಮಿಯ ಸಂಚಾಲಕ ಗುಣಪಾಲ ಕಡಂಬ, ನಿರ್ಗಮನ ಕಾರ್ಯದರ್ಶಿ ರಕ್ಷಿತ್ ಜೈನ್, ತಿರುವೈಲುಗುತ್ತು ನವೀನ್‍ಚಂದ್ರ ಆಳ್ವ, ಪ್ರಮುಖರಾದ ಶ್ರೀಕಾಂತ್ ಭಟ್ ನಂದಳಿಕೆ, ಇರುವೈಲ್ ಸತೀಶ್ಚಂದ್ರ ಸಾಲ್ಯಾನ್, ಬೆಳ್ಳಿಪಾಡಿ ಕೈಪ ಕೇಶವ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.









































































































































































error: Content is protected !!
Scroll to Top