ಹೆಬ್ರಿ ಗಿಲ್ಲಾಳಿ ಶ್ರೀ ವಿಶ್ವೇಶಕೃಷ್ಣ ಗೋಶಾಲೆಯಲ್ಲಿ ಶ್ರೀ ರಾಮ ನಾಮ ಜಪ ಯಜ್ಞಕ್ಕೆ ಚಾಲನೆ
ಹೆಬ್ರಿ : ಎಲ್ಲರನ್ನೂ ಪ್ರೀತಿಸುವ ಕಾರುಣ್ಯಮೂರ್ತಿ ಶ್ರೀರಾಮನ ಆದರ್ಶ ಗುಣಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಧರ್ಮ ಸೂಕ್ಷ್ಮಗಳನ್ನು ಚೆನ್ನಾಗಿ ಅರಿತು ಸಂಕಷ್ಟದ ಸಂದರ್ಭದಲ್ಲಿಯೂ ರಾಮ ತೆಗೆದುಕೊಂಡ ನಿಲುವು ಅದ್ಭುತವಾದುದು. ಎಲ್ಲರನ್ನೂ ಸಮಾನವಾಗಿ ಕಾಣುವ ಆತನ ಬದುಕೇ ನಮಗೆ ಪ್ರೇರಣಾದಾಯಕವಾದುದು ಎಂದು ವಿದ್ವಾನ್ ಹರಿಪ್ರಸಾದ್ ಭಟ್ ಹೆರ್ಗ ತಿಳಿಸಿದರು.
ಹೆಬ್ರಿ ಗಿಲ್ಲಾಳಿ ಶ್ರೀ ವಿಶ್ವೇಶಕೃಷ್ಣ ಗೋಶಾಲೆಯಲ್ಲಿ ಗೋಶಾಲೆ ಟ್ರಸ್ಟ್ ಮತ್ತು ಗಿಲ್ಲಾಳಿ ಪರಿಸರದ ಭಗವದ್ಭಕ್ತರ ಮತ್ತು ಹೆಬ್ರಿತಾಲೂಕಿನ ಎಲ್ಲ ರಾಷ್ಟ್ರಭಕ್ತರ ನೆರವಿನಿಂದ ಪ್ರಾರಂಭಗೊಂಡ ಶ್ರೀ ರಾಮ ನಾಮ ಜಪ ಯಜ್ಞ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರಾಮರಾಜ್ಯ ನಿರ್ಮಾಣವಾಗಬೇಕಾದರೆ ಪ್ರತಿಯೊಬ್ಬರ ಹೃದಯದಲ್ಲೂ ರಾಮ ನೆಲೆಸಬೇಕು. ಆ ನಿಟ್ಟಿನಲ್ಲಿ ಶ್ರೀ ರಾಮನ ಅನುಗ್ರಹವನ್ನು ಪಡೆದು ನೆಮ್ಮದಿಯಾಗಿ ಬದುಕಲು ಶ್ರೀರಾಮ ನಾಮ ಜಪಯಜ್ಞದಲ್ಲಿ ಎಲ್ಲರೂ ಪಾಲ್ಗೊಂಡು ಭಗವಂತನ ಚಿಂತನೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ. ರಾಮರಾಷ್ಟ್ರದ ಚಿಂತನೆಯನ್ನು ಇಟ್ಟುಕೊಂಡು ಶ್ರೀರಾಮ ನಾಮ ಜಪಯಜ್ಞ ಕೈಗೊಳ್ಳುತ್ತಿರುವುದು ಸಂತಸದ ವಿಚಾರ ಎಂದರು.
ಗಿಲ್ಲಾಳಿ ಗೋಶಾಲೆ ಟ್ರಸ್ಟಿನ ಪ್ರಮುಖರಾದ ಪದ್ಮನಾಭ ಆಚಾರ್ಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಯೋಧ್ಯೆಯ ಶ್ರೀರಾಮ ಮಂದಿರದ ಲೋಕಾರ್ಪಣೆಯ ಅಂಗವಾಗಿ ಸಮಸ್ತ ಗೋಕುಲದ ರಕ್ಷಣೆ, ಅಖಂಡ ಭಾರತ ಸಂಕಲ್ಪ, ರಾಮರಾಷ್ಟ್ರದ ನಿರ್ಮಾಣದ ಆಶಯವನ್ನು ಇಟ್ಟುಕೊಂಡು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರ ಆದೇಶದಂತೆ ಎಲ್ಲರ ಸಹಕಾರದಿಂದ ಲಕ್ಷಾಧಿಕ ರಾಮ ನಾಮ ಜಪ ಯಜ್ಞ ಕೈಗೊಂಡಿದ್ದೇವೆ. ಪ್ರತಿ ಭಾನುವಾರ ರಾತ್ರಿ 7.30ರಿಂದ 8 ಗಂಟೆಯವರೆಗೆ ನಡೆಯಲಿದ್ದು ಶ್ರೀ ರಾಮ ನಾಮ ಜಪ, ರಾಮಾಯಣ ಚಿಂತನೆ ಮತ್ತು ರಾಮ ನಾಮ ಸಂಕೀರ್ತನೆಯ ಕಾರ್ಯಕ್ರಮಗಳು ಇರುತ್ತವೆ ಎಂದರು.
ವಿಶ್ವ ಹಿಂದೂ ಪರಿಷತ್ ಹೆಬ್ರಿ ಘಟಕದ ಸದಸ್ಯ ಪ್ರಸಾದ್ ಭಂಡಾರಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಬ್ರಿ ಪ್ರತಿನಿಧಿ ಆಶ್ರಿತ್ ಕುಚ್ಚೂರು, ಹೆಬ್ರಿ ಬಜರಂಗ ದಳದ ಅಧ್ಯಕ್ಷ ವಿಜಯ ಹೆಗ್ಡೆ ಶುಭ ಹಾರೈಸಿದರು. ಗೋಶಾಲೆಯ ಟ್ರಸ್ಟಿಗಳಾದ ರವಿ ರಾವ್, ವಿಷ್ಣುಮೂರ್ತಿ ನಾಯಕ್, ವಿಷ್ಣುಮೂರ್ತಿ ಆಚಾರ್ಯ, ಸ್ವಚ್ಛ ಕಾರ್ಕಳ ಬ್ರಿಗೇಡ್ ಸದಸ್ಯರು, ಹೆಬ್ರಿ ಪರಿಸರದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ರಾಮಭಕ್ತರು ಉಪಸ್ಥಿತರಿದ್ದರು. ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.