ಯುವತಿ ರಂಪಾಟ ವೀಡಿಯೋ ವೈರಲ್‌ : ಪೊಲೀಸರಿಗೆ ನೋಟಿಸ್‌

ಠಾಣೆಯಲ್ಲಿ ಪೊಲೀಸರಿಗೆ ಒದ್ದು ರಾದ್ಧಾಂತ ಸೃಷ್ಟಿಸಿದ್ದ ಯುವತಿ

ಮಂಗಳೂರು: ಮಂಗಳೂರಿನಲ್ಲಿ ಕೆಲ ದಿನಗಳ ಹಿಂದೆ ಹದಿಹರೆಯದ ಯುವತಿಯೊಬ್ಬಳು ಪೊಲೀಸರಿಗೆ ಒದ್ದು ರಂಪಾಟ ಮಾಡಿದಾಗ ಆಕೆಗೆ ಕೋಳ ಬಿಗಿದ ಘಟನೆಗೆ ಸಂಬಂಧಿಸಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪೊಲೀಸರಿಂದ ವರದಿ ಕೇಳಿದೆ. ಪೊಲೀಸರ ಕ್ರಮದ ಬಗ್ಗೆ ಆಯೋಗದ ಅಧ್ಯಕ್ಷ ಕೆ. ನಾಗಣ್ಣ ಗೌಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.


ಉರ್ವ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಬಾಲಕಿಯನ್ನು ಥಳಿಸಿ, ಕೋಳ ಹಾಕಿದ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಂಗಳೂರು ನಗರ ಪೊಲೀಸ್ ಮತ್ತು ಅಬಕಾರಿ ಇಲಾಖೆಯಿಂದ ಪ್ರತ್ಯೇಕ ವರದಿ ಕೇಳಿದೆ. ಸೆ. 9ರಂದು ಮಾಧ್ಯಮ ಪ್ರತಿನಿಧಿಗಳು ವೈರಲ್ ವಿಡಿಯೋ ಕುರಿತು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ಗಮನಕ್ಕೆ ತಂದಿದ್ದಾರೆ. ನಂತರ ಅವರು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಅಸಹಜ ಮತ್ತು ಆಕ್ರಮಣಕಾರಿ ನಡವಳಿಕೆಯಿಂದಾಗಿ ಸೆ.1ರಂದು ಬೆಳಗ್ಗೆ 6.50ರ ಸುಮಾರಿಗೆ ಪಂಪ್‌ವೆಲ್‌ನಲ್ಲಿರುವ ಗಣೇಶ್ ಮೆಡಿಕಲ್ಸ್‌ನಿಂದ ಅಬಕಾರಿ ಅಧಿಕಾರಿಗಳು ಆಕೆಯನ್ನು ಕರೆದೊಯ್ದಿದ್ದಾರೆ ಎಂದಿದ್ದಾರೆ.


ಆಕೆ ಡ್ರಗ್ಸ್ ಸೇವಿಸಿರಬಹುದು ಎಂಬ ಶಂಕೆ ಮೇರೆಗೆ ಆಕೆಯನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ, ಆಕೆ ವಾಹನದಲ್ಲಿ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಾಳೆ. ಹೀಗಾಗಿ, ಅಬಕಾರಿ ಅಧಿಕಾರಿಗಳು ಆಕೆಯನ್ನು ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಅಲ್ಲೂ ಯುವತಿ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾಳೆ. ಹುಡುಗಿ ಅಸ್ವಾಭಾವಿಕ ಮತ್ತು ಆಕ್ರಮಣಕಾರಿ ನಡವಳಿಕೆಯನ್ನು ಪ್ರದರ್ಶಿಸಿದ್ದು ಮಾತ್ರವಲ್ಲದೆ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿದ್ದಾಳೆ. ಆಕೆಯನ್ನು ನಿಯಂತ್ರಿಸಲು ಮಹಿಳಾ ಪೊಲೀಸ್ ಅಧಿಕಾರಿಗಳು ಬರಬೇಕಾಯಿತು. ಬಳಿಕ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

error: Content is protected !!
Scroll to Top