ವ್ಯವಸ್ಥಿತ ಅಪರಾಧ ಸಾರ್ವಜನಿಕ ವಲಯದಲ್ಲಿ ತೀವ್ರ ತರದ ಮತ್ತು ಗಂಭೀರ ಸ್ವರೂಪದ ಭಯವನ್ನು ಉಂಟು ಮಾಡುವ ಘೋರ ಅಪರಾಧಗಳ ಪೈಕಿ ಒಂದಾಗಿರುತ್ತದೆ. ಇಂತಹ ಅಪರಾಧಗಳನ್ನು ಇತ್ತೀಚೆಗೆ ನಾವು ಸಾಮಾನ್ಯವಾಗಿ ಜಗತ್ತಿನ ಹೆಚ್ಚಿನ ರಾಷ್ಟ್ರಗಳಲ್ಲಿ ಕಾಣಬಹುದಾಗಿದೆ. ವ್ಯವಸ್ಥಿತ ಅಪರಾಧ ಎಂದರೆ ಬಾಡಿಗೆ ಕೊಲೆಗಡುಕರ, ನಿಷೇದಿತ ಕಳ್ಳ ಸಾಗಾಣಿಕೆದಾರರ, ಮಾದಕ ವಸ್ತುಗಳ ಕಾನೂನು ಬಾಹಿರ ವ್ಯಾಪಾರಿಗಳು, ಭಾರಿ ಮೊತ್ತದ ಹಣ ಸುಲಿಗೆಕೋರರು, ವ್ಯಾಪಾರ ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ ಹಫ್ತಾ ವಸೂಲಿ ಮಾಡುವವರು ಮತ್ತು ಕಾನೂನುಬಾಹಿರವಾಗಿ ಸಂಪತ್ತು ಸಂಗ್ರಹಿಸಿದವರು.
ವ್ಯವಸ್ಥಿತ ಅಪರಾಧಿಗಳು ತಮ್ಮ ಅಕ್ರಮ ಧನ ಬಲದಿಂದ ಸಂಬಂಧಪಟ್ಟವರ ವಿರುದ್ಧ ಭಯದ ವಾತಾವರಣವನ್ನು ನಿರ್ಮಿಸಿ ಸಾರ್ವಜನಿಕ ವಲಯದ ಪ್ರಮುಖ ಸಂಸ್ಥೆಗಳ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವ ಉದಾಹರಣೆಗಳು ಇತ್ತೀಚಿನ ದಿನಗಳಲ್ಲಿ ನಾವು ಸಾಮಾನ್ಯವಾಗಿ ಕಾಣಬಹುದಾಗಿದೆ. ಈ ರೀತಿಯಾಗಿ ವ್ಯವಸ್ಥಿತ ಅಪರಾಧಿತ ಚಟುವಟಿಕೆ ಪ್ರತಿಯೊಂದು ರಾಜ್ಯದ ಅಸ್ತಿತ್ವಕ್ಕೆ ಸವಾಲಾಗಿದೆ. ಈ ಕಾರಣದಿಂದಾಗಿ ಕರ್ನಾಟಕದಲ್ಲಿ ಕರ್ನಾಟಕ ವ್ಯವಸ್ಥಿತ ಅಪರಾಧಗಳ ನಿಯಂತ್ರಣ ಅಧಿನಿಯಮ 2000 ಎಂಬ ಕಾನೂನು 22-12-2000ರಿಂದ ಜಾರಿಗೆ ಬಂದಿರುತ್ತದೆ.
ʼವ್ಯವಸ್ಥಿತ ಅಪರಾಧʼ ಎಂದರೆ ವ್ಯವಸ್ಥಿತ ಅಪರಾಧಿಗಳ ಕೂಟದ ಸದಸ್ಯನಾಗಲಿ ಅಥವಾ ಅಂತಹ ಕೂಟದ ಪರವಾಗಿ ಯಾವುದಾದರು ವ್ಯಕ್ತಿ ತಾನು ಏಕಾಂಗಿಯಾಗಿ ಅಥವಾ ಜಂಟಿಯಾಗಿ ಸಮಾಜದ ಶಾಂತಿಯನ್ನು ಹಾಳುಮಾಡುವ ದಂಗೆಯನ್ನು ಉತ್ತೇಜಿಸುವುದಕ್ಕಾಗಿ, ಆರ್ಥಿಕ ಪ್ರಯೋಜನಗಳನ್ನು ಪಡೆಯುವ ಅಥವಾ ಇತರ ಕಾನೂನುಬಾಹಿರ ವಿಧಾನಗಳ ಮೂಲಕ ಒಬ್ಬ ವ್ಯಕ್ತಿಯು ಕೈಗೊಳ್ಳುವ ಯಾವುದೇ ಕಾನೂನು ಬಾಹಿರ ಚಟುವಟಿಕೆಯಾಗಿರುತ್ತದೆ.
ಯಾವುದೇ ವ್ಯಕ್ತಿಯು ವ್ಯವಸ್ಥಿತ ಅಪರಾಧವನ್ನು ಮಾಡಿದಾಗ ಅಂಥ ಕೃತ್ಯವು ಯಾವೊಬ್ಬ ವ್ಯಕ್ತಿಯ ಮರಣದಲ್ಲಿ ಪರಿಣಮಿಸಿದರೆ ಸಂಬಂಧಪಟ್ಟ ವ್ಯಕ್ತಿಯು ಮರಣದಂಡನೆ ಅಥವಾ ಆಜೀವ ಜೈಲು ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಅಲ್ಲದೆ ಒಂದು ಲಕ್ಷ ರೂಪಾಯಿಗಳಿಗೆ ಕಡಿಮೆಯಾಗಿರತಕ್ಕದಲ್ಲದ ಜುಲ್ಮಾನೆಗೆ ಕೂಡ ಗುರಿಯಾಗಬೇಕಾಗುತ್ತದೆ. ಇತರ ಯಾವುದೇ ಪ್ರಕರಣದಲ್ಲಿ ಸಂಬಂಧಪಟ್ಟ ವ್ಯಕ್ತಿ ಐದು ವರ್ಷಗಳ ಅವಧಿಗೆ ಕಡಿಮೆಯಲ್ಲದ, ಆಜೀವಾವಧಿಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಗೆ ಮತ್ತು ಐದು ಲಕ್ಷ ರೂಪಾಯಿಗಳಿಗೆ ಕಡಿಮೆಯಾಗಿರತಕ್ಕದಲ್ಲದ ಜುಲ್ಮಾನೆಗೆ ಕೂಡ ಗುರಿಯಾಗಬೇಕಾಗುತ್ತದೆ. ಯಾವುದೇ ಒಬ್ಬ ವ್ಯಕ್ತಿ ಒಂದು ವ್ಯವಸ್ಥಿತ ಅಪರಾಧಕ್ಕೆ ಪೂರ್ವಸಿದ್ಧತೆ ಮಾಡಿಕೊಡುವ ಯಾವುದೇ ಕೃತ್ಯವನ್ನು ನಡೆಸುವ ಒಳಸಂಚು ಮಾಡಿದರೆ ಅಥವಾ ನಡೆಸಲು ಯತ್ನಿಸಿದರೆ ಅಥವಾ ಪ್ರತಿಪಾದಿಸಿದರೆ, ಆತ ಐದು ವರ್ಷಗಳ ಅವಧಿಗೆ ಕಡಿಮೆಯಾಗಿರತಕ್ಕದಲ್ಲದ ಆದರೆ ಅಜೀವಾವಧಿಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಗೆ ಮತ್ತು ಐದು ಲಕ್ಷ ರೂಪಾಯಿಗಳಿಗೆ ಕಡಿಮೆಯಾಗಿರತಕ್ಕದಲ್ಲದ ಜುಲ್ಮಾನೆಗೆ ಗುರಿಯಾಗಬೇಕಾಗುತ್ತದೆ. ಯಾರಾದರೂ ವ್ಯವಸ್ಥಿತ ಅಪರಾಧಿಗಳ ಕೂಟದ ಯಾವುದೇ ಸದಸ್ಯನಿಗೆ ಆಶ್ರಯ ನೀಡಿದರೆ ಅಥವಾ ಬಚ್ಚಿಡಲು ಪ್ರಯತ್ನ ಮಾಡಿದರೆ, ಆತ ಐದು ವರ್ಷಗಳ ಅವಧಿಗೆ ಕಡಿಮೆಯಾಗಿರತಕ್ಕದಲ್ಲದ, ಆದರೆ ಆಜೀವಾವಧಿಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಗೆ ಮತ್ತು ಐದು ಲಕ್ಷ ರೂಪಾಯಿಗಳಿಗೆ ಕಡಿಮೆಯಾಗಿರತಕ್ಕದಲ್ಲದ ಜುಲ್ಮಾನೆಗೆ ಗುರಿಯಾಗಬೇಕಾಗುತ್ತದೆ.
ವ್ಯವಸ್ಥಿತ ಅಪರಾಧಿಗಳ ಕೂಟದ ಸದಸ್ಯನಾಗಿರುವ ಯಾವೊಬ್ಬ ವ್ಯಕ್ತಿಯು, ಐದು ವರ್ಷಗಳ ಅವಧಿಗೆ ಕಡಿಮೆಯಾಗಿರತಕ್ಕದಲ್ಲದ, ಆದರೆ ಆಜೀವಾವಧಿಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯಿಂದ ದಂಡಿತನಾಗಬೇಕಾಗುತ್ತದೆ ಮತ್ತು ಐದು ಲಕ್ಷ ರೂಪಾಯಿಗಳಿಗೆ ಕಡಿಮೆಯಾಗಿರತಕ್ಕದಲ್ಲದ ಜುಲ್ಮಾನೆಗೆ ಕೂಡ ಗುರಿಯಾಗಬೇಕಾಗುತ್ತದೆ.
ವ್ಯಕ್ತಿ ವ್ಯವಸ್ಥಿತ ಅಪರಾಧವನ್ನು ಮಾಡಿದ್ದರಿಂದ ಪ್ರಾಪ್ತವಾದ ಅಥವಾ ಪಡೆದ ಅಥವಾ ವ್ಯವಸ್ಥಿತ ಅಪರಾಧಿಗಳ ಕೂಟದ ನಿಧಿಯಿಂದ ಅರ್ಜಿಸಿದ ಯಾವುದೇ ಸ್ವತ್ತನ್ನು ಹೊಂದಿದ್ದರೆ ಆತ ಮೂರು ವರ್ಷಕ್ಕೆ ಕಡಿಮೆಯಾಗಿರತಕ್ಕದಲ್ಲದ ಅವಧಿಯ ಆದರೆ ಆಜೀವಾವಧಿಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯಿಂದ ದಂಡಿತನಾಗಬೇಕಾಗುತ್ತದೆ ಮತ್ತು ಎರಡು ಲಕ್ಷ ರೂಪಾಯಿಗೆ ಕಡಿಮೆಯಾಗಿರತಕ್ಕದಲ್ಲದ ಜುಲ್ಮಾನೆಗೆ ಕೂಡ ಗುರಿಯಾಗಬೇಕಾಗುತ್ತದೆ.
ಯಾವೊಬ್ಬ ವ್ಯಕ್ತಿಯು ಒಂದು ವ್ಯವಸ್ಥಿತ ಅಪರಾಧಿಗಳ ಕೂಟದ ಸದಸ್ಯನ ಪರವಾಗಿ ಚರ ಅಥವಾ ಸ್ಥಿರ ಸ್ವತ್ತಿನ ಸ್ವಾಧೀನತೆಯನ್ನು ಹೊಂದಿದ್ದರೆ ಅಥವಾ ಯಾವುದೇ ಸಮಯದಲ್ಲಿ ಹೊಂದಿದ್ದು ಅದಕ್ಕೆ ತೃಪ್ತಿಕರವಾದ ಲೆಕ್ಕವನ್ನು ನೀಡದಿದ್ದ ಆತ ಮೂರು ವರ್ಷಗಳ ಅವಧಿಗೆ ಕಡಿಮೆಯಾಗಿರತಕ್ಕದಲ್ಲದ ಆದರೆ ಹತ್ತು ವರ್ಷಗಳಿಗೆ ವಿಸ್ತರಿಸಬಹುದಾದ ಅವಧಿಯ ಜೈಲು ಶಿಕ್ಷೆಯಿಂದ ದಂಡಿತನಾಗಬೇಕಾಗುತ್ತದೆ ಮತ್ತು ಒಂದು ಲಕ್ಷ ರೂಪಾಯಿಗಳಿಗೆ ಕಡಿಮೆಯಾಗಿರತಕ್ಕದಲ್ಲದ ಜುಲ್ಮಾನೆಗೆ ಕೂಡ ಗುರಿಯಾಗತಕ್ಕದ್ದು ಮತ್ತು ಅಂಥ ಸ್ವತ್ತು ಸಹ 21ನೇ ಪ್ರಕರಣದಲ್ಲಿ ಉಪಬಂಧಿಸಲಾದಂತೆ ಜಫ್ತಿ ಮತ್ತು ಮುಟ್ಟುಗೋಲಿಗೆ ಗುರಿಯಾಗಬೇಕಾಗುತ್ತದೆ.
